Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 46 - ಕನ್ನಡ ಸತ್ಯವೇದವು C.L. Bible (BSI)


ದೇವರು ನಮ್ಮಾಶ್ರಯ ದುರ್ಗವು

1 ದೇವರೆಮಗೆ ಆಶ್ರಯ ದುರ್ಗ I ಸಂಕಟದಲಿ ಸಿದ್ಧ ಸಹಾಯಕ II

2 ಕಡಲಲ್ಲಿ ಗುಡ್ಡಗಳು ಮುಳುಗಿದರೂ ದಿಗಿಲಿಲ್ಲ I ಪೊಡವಿ ಕಂಪಿಸಿದರು ನಮಗೇನು ಭಯವಿಲ್ಲ II

3 ಸಮುದ್ರ ಭೋರ್ಗರೆದರೇನು? ನೊರೆಕಾರಿದರೇನು? I ಅದರೊಡನೆ ಪರ್ವತಗಳು ಅಲುಗಾಡಿದರೇನು? II ನಮ್ಮ ಕಡೆಗಿರುವನು ಸೇನಾಧೀಶ್ವರ ಪ್ರಭುವು I ಯಕೋಬ ಕುಲದೇವನು ನಮಗಾಶ್ರಯ ದುರ್ಗವು II

4 ನದಿಯೊಂದು ಆನಂದಗೊಳಿಸುವುದು ದೇವನಗರವನು I ಪುನೀತಗೊಳಿಸುವುದು ಪರಾತ್ಪರನ ನಿವಾಸವನು II

5 ದೇವನಿರುವನಾ ನಗರ ಮಧ್ಯೆ, ಅಳಿವಿಲ್ಲ ಅದಕೆ I ಉದಯಕಾಲದಲೆ ದೇವ ಬರುವನು ಅದರ ಸಹಾಯಕೆ II

6 ನಡುಗಿದವು ರಾಷ್ಟ್ರಗಳು, ಉಡುಗಿದವು ರಾಜ್ಯಗಳು I ದೇವರ ಗರ್ಜನೆಗೆ ಕರಗಿತು ಧರೆಯೆಲ್ಲವು II

7 ನಮ್ಮ ಕಡೆಯಿರುವನು ಸೇನಾಧೀಶ್ವರ ಪ್ರಭುವು I ಯಕೋಬ ಕುಲದೇವರು ನಮಗಾಶ್ರಯ ದುರ್ಗವು II

8 ಪ್ರಭುವಿನ ಕಾರ್ಯಗಳ ನೋಡಬನ್ನಿ I ಇಳೆಯೊಳಗೆಸಗಿದ ಪವಾಡಗಳನು ನೋಡಿ II

9 ಜಗದೆಲ್ಲೆಡೆ ಕದನ ಕಾಳಗ ನಿಲ್ಲಿಸಿಹನು I ಬಿಲ್ಲು ಭಲ್ಲೆಗಳನು ಮುರಿದು ಹಾಕಿದನು I ರಥಗಳನು ಬೆಂಕಿಯಿಂದ ಸುಟ್ಟುಹಾಕಿದನು II

10 ‘ಶಾಂತರಾಗಿರಿ, ತಿಳಿಯಿರಿ ನಾನು ದೇವನೆಂದು I ಜನಕ್ಕೂ ಜನಾಂಗಕ್ಕೂ ನಾನಧಿಪತಿಯೆಂದು’ II

11 ನಮ್ಮ ಕಡೆಯಿರುವನು ಸೇನಾಧೀಶ್ವರ ಪ್ರಭುವು I ಯಕೋಬ ಕುಲದೇವರು ನಮಗಾಶ್ರಯ ದೇವರು II

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು