Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 45 - ಕನ್ನಡ ಸತ್ಯವೇದವು C.L. Bible (BSI)


ರಾಜವಿವಾಹೋತ್ಸವ ಗೀತೆ

1 ಉಜ್ವಲಾಲೋಚನೆಯೊಂದು ತುಡುಕುತಿದೆ ಮನದಲಿ I ರಚಿಸಲಿರುವೆ ಮಹಾರಾಜನಿಗೊಂದು ಗೀತಾಂಜಲಿ I ನನ್ನ ಜಿಹ್ವೆ, ಸಜ್ಜಾದ ಬರಹಗಾರನ ಲೇಖನಿ II

2 ನರಮಾನವರೊಳು ನೀ ಸುರಸುಂದರ I ನಿನ್ನ ಮುಖವಾಣಿ ಅತ್ಯಂತ ಮಧುರ I ದೇವಾನುಗ್ರಹ ನಿನಗಿದೆ ನಿರಂತರ II

3 ಕಟ್ಟಿಕೋ ಶೂರನೇ, ಪಟ್ಟಗತ್ತಿಯನು ಸೊಂಟಕೆ I ಸಂಭ್ರಮ,‍ ಶೋಭೆ, ಸಡಗರ ಸಲ್ಲತಕ್ಕವು ನಿನಗೆ II

4 ಹೊರಡು ಒಡ್ಡೋಲಗದಿಂದ ವಾಹನಾರೂಢನಾಗಿ I ತೆರಳು ಭುಜಬಲದಿ ಮಹತ್ಕಾರ್ಯವೆಸಗುವವನಾಗಿ I ಹೆಣಗು ಸತ್ಯಕ್ಕಾಗಿ, ನ್ಯಾಯನೀತಿಪರನಾಗಿ II

5 ನಿನ್ನಂಬು ಬಾಣಗಳು ಹರಿತವಾದುವು I ರಾಜದ್ರೋಹಿಗಳನು ಅವು ಇರಿಯುವುವು I ಜನಾಂಗಗಳು ನಿನ್ನ ಪಾದಕ್ಕೆರಗುವುವು II

6 ಅಮರವಾದುದು ಹೇ ದೇವಾ, ನಿನ್ನ ಸಿಂಹಾಸನ I ನ್ಯಾಯಸ್ಥಾಪಕವಾದುದು ನಿನ್ನ ರಾಜದಂಡ II

7 ಪ್ರೀತಿಸಿದೆ ನೀನು ಧರ್ಮವನು ದ್ವೇಷಿಸಿದೆ ಅಧರ್ಮವನು I ಆನಂದ ತೈಲದಿಂದಭಿಷೇಕಿಸಿಹನು ನಿನ್ನ, ದೇವನು I ಮಿತ್ರರಿಗಿಂತ ಮಿಗಿಲಾಗಿ ಅಭಿಷೇಕಿಸಿಹನು ಆತನು ನಿನ್ನನು II

8 ಘಮಘಮಿಸುತಿದೆ ನಿನ್ನುಡಿಗೆ ರಸಗಂಧ, ಅಗರು, ಚಂದನಗಳಿಂದ I ಮನರಂಜನೆಗೊಳ್ಳುತಿರುವೆ ದಂತ ಮಂದಿರದುನ್ನತ ವಾದ್ಯಗಳಿಂದ II

9 ರಾಜಕುವರಿಯರಿಹರು ನಿನ್ನ ಸ್ತ್ರೀ ಪರಿವಾರದಲಿ I ಪಟ್ಟದ ರಾಣಿಯು ನಿಂತಿಹಳು ನಿನ್ನ ಬಲಪಾರ್ಶ್ವದಲಿ I ಓಫಿರ್ ನಾಡಿನ ಚಿನ್ನಾಭರಣಗಳಿಂದ ಭೂಷಿತಳಾಗಿ II

10 ಎಲೌ ಕುವರಿಯೇ, ಕೇಳು, ಎನ್ನ ಮಾತಿಗೆ ಕಿವಿಗೊಡು I ನಿನ್ನ ಜನರನು, ತೌರು ಮನೆಯನು ಮರೆತುಬಿಡು II

11 ಆಗ ಬಯಸುವನು ರಾಜ ನಿನ್ನ ಲಾವಣ್ಯವನು I ಆತನ ಪಾದಕ್ಕೆರಗು, ಆತನೇ ನಿನಗೊಡೆಯನು II

12 ಟೈರ್ ನಾಡಿಗರು ನಿನಗೆ ಕಾಣಿಕೆಯಿತ್ತು ಸನ್ಮಾನಿಸುವರು I ಸಿರಿವಂತ ಪ್ರಜೆಗಳು ನಿನ್ನುಪಕಾರವನು ಕೋರಿಬರುವರು II

13 ರಾಜಕುವರಿ ವಿರಾಜಿಸುತಿಹಳು ಅಂತಃಪುರದಲಿ I ಮೆರೆಯುತಿಹಳು ಜರತಾರಿ ವಸ್ತ್ರಾಭರಣಗಳಲಿ II

14 ಭೂಷಿತಳಾಗಿಹಳಾಕೆ ಕಸೂತಿಕೆಲಸದ ವಸ್ತ್ರಗಳಿಂದ I ಬರುತಿಹಳು ರಾಜನ ಬಳಿಗೆ ಸಖಿಯರ ಪರಿವಾರ ಸಮೇತ II

15 ಆಗಮಿಸುತಿಹರಿದೋ ಸಂಭ್ರಮ ಸಡಗರದಿಂದ I ಪ್ರವೇಶಿಸುತಿಹರು ಅರಮನೆಯನು ಉತ್ಸಾಹದಿಂದ II

16 ನಿನ್ನ ಪುತ್ರರು ಅಲಂಕರಿಸುವರು ಪೂರ್ವಜರ ಸ್ಥಾನವನು I ನೇಮಕಗೊಳ್ಳುವರು ಉತ್ತರಾಧಿಕಾರಿಗಳಾಗಿ ಜಗದೊಳು II

17 ನಿನ್ನ ನಾಮಸ್ಮರಣೆಯನುಳಿಸುವೆನು ಚಿರಕಾಲ I ಹೊಗಳುವರು ಸಕಲ ಜನರು ನಿನ್ನನು ಅನುಗಾಲ II

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು