ಕೀರ್ತನೆಗಳು 42 - ಕನ್ನಡ ಸತ್ಯವೇದವು C.L. Bible (BSI)ಭಾಗ - ೨ ( ಕೀರ್ತ. 42—72 ) ದೇವರದರುಶನಕ್ಕಾಗಿ ದಾಹ 1 ಬಾಯಾರಿದ ಜಿಂಕೆ ಹಾತೊರೆಯುವಂತೆ ತೊರೆಗಾಗಿ I ದಣಿದೆನ್ನ ಮನ ದೇವಾ, ಹಂಬಲಿಸುತಿದೆ ನಿನಗಾಗಿ II 2 ಜೀವಂತ ದೇವನಿಗಾಗಿ ದಾಹದಿಂದಿದೆ ಎನ್ನ ಮನ I ನಾ ತೆರಳಿ ಪಡೆವುದೆಂತು ಆ ದೇವನ ಮುಖದರ್ಶನ? II 3 “ಎಲ್ಲಿ? ನಿನ್ನ ದೇವನೆಲ್ಲಿ?” ಎಂದು ಜನ ಜರೆಯುತಿರಲು I ಕಂಬನಿಯೆ ನನಗನ್ನಪಾನವಾಗಿಹುದು ಹಗಲಿರುಳು II 4 ಜನಸಮೂಹದೊಡನೆ ನಾ ಜಯಜಯಕಾರ ಮಾಡುತ I ಸ್ತುತಿಗೀತೆಗಳ ಹಾಡುತ, ತೀರ್ಥಯಾತ್ರೆ ಗೈಯುತ I ದೇಗುಲಕೆ ತೆರಳಿದಾ ಸವಿನೆನಪು ಮನಕರಗಿಪುದು ನಿರುತ II 5 ಎನ್ನ ಮನವೆ, ಚಿಂತಿಸುವೆಯೇಕೆ? I ವ್ಯಥೆಪಡುವುದೇಕೆ? ದೇವನಲ್ಲಿಡು ನಂಬಿಕೆ I ಮತ್ತೆ ಸ್ತುತಿಸುವೆ ನಾನಾತನನು, ಮುಕ್ತಿದಾತ, ಪರಮಾತ್ಮ ಆತನೆನಗೆ II 6 ನನಗಾಗುತ್ತದೆ ನಿನ್ನ ಸ್ಮರಣೆ ಮನ ಕುಗ್ಗಿದಾಗ I ಜೋರ್ದನ್, ಹೆರ್ಮನ್ ನಾಡಿಂದ, ಮೀಸಾರ್ ಗುಡ್ಡೆಯಿಂದ II 7 ನಿನ್ನ ಜಲಪಾತಗಳ ಘನನಿನಾದ, ಮಡುವು ಮಡುವನು ಕರೆದಂತಿದೆ I ನಿನ್ನಲೆಗಳು, ಎಲ್ಲ ತರಂಗಗಳು ತಲೆಯ ಮೇಲೆ ಹಾದು ಹೋದಂತಿವೆ II 8 ಹಗಲಲಿ ಪ್ರೀತಿಯನುಗ್ರಹಿಸಲಿ ದೇವನೆನಗೆ I ಇರುಳಲಿ ಎನ್ನಯ ಬಾಯಲ್ಲಿರಲಿ ಆತನ ಗೀತೆ I ಪ್ರಾರ್ಥನೆ ಸಲ್ಲಲಿ ಎನ್ನ ಜೀವಾಧಾರ ದೇವಗೆ II 9 ಶರಣ ದೇವನಿಗೆ “ದೇವಾ, ನನ್ನನೇಕೆ ಮರೆತೆ? I ನಾನಲೆಯಬೇಕೆ ಶತ್ರುಬಾಧೆಪೀಡಿತನಾಗಿ ಭಿಕಾರಿಯಂತೆ?” II 10 “ನಿನ್ನ ದೇವನೆಲ್ಲಿ?” ಎಂದು ವಿರೋಧಿಗಳು ಸತತ ಹಂಗಿಸುವಾಗ I ನನ್ನೆಲುಬುಗಳು ಮುರಿದಂತಾಗುತ್ತದೆ ಆ ಜರೆಯ ಕೇಳಿದಾಗ II 11 ಎನ್ನ ಮನವೆ, ಚಿಂತಿಸುವೆಯೇಕೆ? ವ್ಯಥೆಪಡುವುದೇಕೆ? ದೇವನಲ್ಲಿಡು ನಂಬಿಕೆ I ಮತ್ತೆ ಸ್ತುತಿಸುವೆ ನಾನಾತನನು, ಮುಕ್ತಿದಾತ, ಪರಮಾತ್ಮ ಆತನೆನಗೆ II |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India