ಕೀರ್ತನೆಗಳು 41 - ಕನ್ನಡ ಸತ್ಯವೇದವು C.L. Bible (BSI)ರೋಗಿಯೊಬ್ಬನ ಮೊರೆ 1 ದಿಕ್ಕಿಲ್ಲದವನನು ಲಕ್ಷಿಸುವವನು ಧನ್ಯನು I ಆಪತ್ಕಾಲದಲಿ ಆದವನನು ಪ್ರಭು ರಕ್ಷಿಸುವನು II 2 ಅಂಥವನನು ಪ್ರಭು ಜೀವದಿಂದಿರಿಸುವನು, ಸುರಕ್ಷಿತವಾಗಿಡುವನು I ನಾಡಿನಲ್ಲವನನು ಧನ್ಯನಾಗಿಸುವನು, ಶತ್ರುಗಳಿಗಧೀನನಾಗಿಸನು II 3 ರೋಗದಿ ಹಾಸಿಗೆ ಹಿಡಿದಿರಲು ಪ್ರಭು ಸುಧಾರಿಸುವನು I ರೋಗ ನಿವಾರಿಸಿ ಅವನಿಗೆ ಆರೋಗ್ಯವನೀಯುವನು II 4 ನಾನಂತು, “ಪ್ರಭೂ ಕರುಣಿಸು, ಗುಣಪಡಿಸೆನ್ನನು I ನಿನಗೆ ವಿರುದ್ಧ ಪಾಪಗೈದೆ” ಎಂದು ಬೇಡುವೆನು II 5 “ಇವನ ಸಾವೆಂದು? ಇವ ನಿರ್ನಾಮವಾಗುವದೆಂತು?” I ನನಗೆ ಕೇಡು ಬಯಸುವವರ ಕುಹಕ ನುಡಿಯಿದು II 6 ನೋಡಬರುವರು, ನವಿರಾದ ಮಾತನಾಡುವರವರು I ಕೇಡನೆ ತುಂಬಿಸಿಕೊಂಡು ಹೊರಬಂದೊಡನೆ ಹರಡುವರು II 7 ಹಗೆಯವರು ಎನಗೆ ವಿರುದ್ಧ ಗುಜುಗುಟ್ಟುತಿಹರು I ಅವರೆಲ್ಲರು ಎನಗೆ ಕೇಡನೆ ಕಲ್ಪಿಸುತಿಹರು: II 8 “ಹಾಸಿಗೆಯಿಂದವನು ಮರಳಿ ಏಳುವಂತಿಲ್ಲ I ಘಾಸಿ ರೋಗದಿಂದ ವಾಸಿಯಾಗುವಂತಿಲ್ಲ” II 9 ನನ್ನಾಪ್ತಮಿತ್ರನು, ನನ್ನ ನಂಬಿಕೆಗೆ ಪಾತ್ರನು I ನನ್ನೊಡನೆ ಉಂಡವನು, ನನಗೆರಡು ಬಗೆದಿಹನು II 10 ನೀನಾದರೋ ಪ್ರಭು ಕರುಣಿಸು, ಏಳ ಮಾಡೆನ್ನನು I ನಾನವರಿಗಾಗಿ ಮುಯ್ಯಿಗೆ ಮುಯ್ಯಿ ತೀರಿಸುವೆನು II 11 ವಿರೋಧಿಗಳೆನ್ನ ಮೇಲೆ ಜಯಗೊಳ್ಳದಂದು I ಅರಿತುಕೊಳ್ವೆನು ನಿನ್ನೊಲುಮೆ ನನಗಿದೆಯೆಂದು II 12 ನಿರ್ದೋಷಿಯಾದೆನ್ನನು ನೀನುದ್ಧರಿಸುವೆ I ಚಿರಕಾಲ ನಿನ್ನ ಸನ್ನಿಧಿಯಲ್ಲೆನ್ನನು ಇರಿಸುವೆ II 13 ಇಸ್ರಯೇಲರ ದೇವರಾದ ಪ್ರಭುವಿಗೆ ಜಯ I ಯುಗಯುಗಾಂತರಕು ಆಮೆನ್ ಆಮೆನ್, ಜಯಜಯ II |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India