ಕೀರ್ತನೆಗಳು 40 - ಕನ್ನಡ ಸತ್ಯವೇದವು C.L. Bible (BSI)ಜೀವೋದ್ಧಾರದ ಅಭ್ಯರ್ಥಿಯಿಂದ ಸ್ತುತಿಗೀತೆ 1 ಕಾದಿದ್ದೆನು, ಪ್ರಭುವಿಗಾಗಿ ಕಾದಿದ್ದೆನು I ಕೊನೆಗಾತ ನನ್ನತ್ತ ಬಾಗಿ ಕಿವಿಗೊಟ್ಟನು II 2 ಮೇಲೆತ್ತಿದನು ವಿನಾಶದ ಕೆಸರಿಂದ, ಕರಾಳ ಕೂಪದಿಂದ I ಗೋರ್ಕಲ್ಲ ಮೇಲಿರಿಸಿ ಹೆಜ್ಜೆಯಿಡಿಸಿದನು ಅತಿ ಧೈರ್ಯದಿಂದ II 3 ಬರಿಸಿದನು ನವಗೀತೆಯನು, ದೇವಸ್ತುತಿಯನು ನನ್ನ ಬಾಯಲಿ I ಇದ ಕಂಡವರು ಭಯಪಡುವರು, ಇಡುವರು ಭರವಸೆ ಪ್ರಭುವಿನಲಿ II 4 ಪ್ರಭುವಿನಲ್ಲೆ ಭರವಸೆ ಇಟ್ಟು ನಡೆವಾತನು ಧನ್ಯನು I ಗರ್ವಿಗಳನು, ಸುಳ್ಳುದೇವರನು, ಹಿಂಬಾಲಿಸನವನು II 5 ಪ್ರಭು, ಎನ್ನ ದೇವ, ನಿನಗೆ ಸಮಾನತೆ ಎಲ್ಲಿಯದು I ನೀನೆಸಗಿದ ಪವಾಡ ಪ್ರಯೋಜನಗಳೆನಿತು I ಅಗಣಿತವಾದವುಗಳ ವಿವರ ಅಸದಳವಾದುದು II 6 ಬೇಡವಾದವು ನಿನಗೆ ಯಜ್ಞಾರ್ಪಣೆ, ಬಲಿಕಾಣಿಕೆ I ಬಯಸಿಲ್ಲ ನೀ ಹೋಮವನೆ, ಪರಿಹಾರಕ ಬಲಿಯನೆ I ಶ್ರವಣಶಕ್ತಿಯನು ಅನುಗ್ರಹಿಸಿದೆ ನೀನು ನನಗೆ II 7 ನಾನೋಗೊಡುತ ಇಂತೆಂದೆ : “ಇಗೋ ನಾನೇ ಬರುತ್ತಿರುವೆ I ಗ್ರಂಥ ಸುರುಳಿಯಲಿ ನನ್ನ ಕುರಿತು ಲಿಖಿತವಾಗಿದೆಯಲ್ಲವೇ? II 8 ನಿನ್ನ ಚಿತ್ತಾನುಸಾರ ನಡೆವುದೇ ನನಗೆ ಪರಮಾವೇಶ I ನನ್ನಂತರಂಗದಲಿದೆ ದೇವಾ, ನಿನ್ನ ಧರ್ಮೋಪದೇಶ” II 9 ಜೀವೋದ್ಧಾರದ ಶುಭಸಂದೇಶವನು ಸಾರಿದೆ ಮಹಾಸಭೆಗೆ I ನಾ ಸಾರಿದೆ ಅದನು ಮೌನವಿರದೆ, ಇದು ಗೊತ್ತಿದೆ ಪ್ರಭು ನಿನಗೆ II 10 ಬಚ್ಚಿಟ್ಟುಕೊಳ್ಳಲಿಲ್ಲ ನನ್ನೆದೆಯೊಳು ನಿನ್ನ ಸತ್ಸಂಬಂಧವನು I ಪ್ರಕಟಿಸಿದೆನು ಜೀವೋದ್ಧಾರವನು, ನಿನ್ನ ಪ್ರಾಮಾಣಿಕತೆಯನು I ಮಹಾಸಭೆಗೆ ಮರೆಯಿಸದೆ ಸಾರಿದೆನು ನಿನ್ನ ಪ್ರೀತಿ ಸತ್ಯತೆಯನು II 11 ಅಗಲಿಸಬೇಡ ಪ್ರಭೂ, ನಿನ್ನ ಕೃಪೆಯನು ನನ್ನಿಂದ I ನಿನ್ನ ಪ್ರೀತಿ ಸತ್ಯತೆ ಕಾದಿರಿಸಲಿ ನನ್ನನು ಸತತ II 12 ಲೆಕ್ಕವಿಲ್ಲದಾಪತ್ತುಗಳು ನನ್ನನು ಸುತ್ತಿಕೊಂಡಿವೆ I ದಿಕ್ಕು ತೋಚದಂತೆನ್ನ ಪಾಪಗಳು ನನಗಂಟಿಕೊಂಡಿವೆ I ಸಿಲುಕವು ಎಣಿಕೆಗೆ ತಲೆಗೂದಲಂತೆ, ನಾನೆದೆಗುಂದಿರುವೆ II 13 ಕರುಣೆಯಿಂದೆನ್ನನು ಪ್ರಭು ರಕ್ಷಿಸ ಬಾ I ನನಗೊತ್ತಾಸೆ ಮಾಡಲು ಪ್ರಭು, ಬೇಗ ಬಾ II 14 ನನ್ನ ಕೊಲೆಗೆಂದು ಯತ್ನಿಸುವವರು ನಾಚಿ ಗಲಿಬಿಲಿಗೊಳ್ಳಲಿ I ನನ್ನಳಿವನು ಕೋರುವಂಥವರು ಲಜ್ಜೆಯಿಂದ ಹಿಂದಿರುಗಲಿ II 15 ಆಹಾ ಆಹಾ ಎಂದು ಹಾಸ್ಯ ಮಾಡುವವರು I ಅಕಟಕಟವೆನ್ನಲಿ ಹೇಸಿಗೆಯಿಂದಾ ನರರು II 16 ನಿನ್ನನು ಅರಸುವವರೆಲ್ಲರು ಹರ್ಷಾನಂದಗೊಳ್ಳಲಿ I ನಿನ್ನ ರಕ್ಷಣಾಪ್ರಿಯರು ಸತತ “ಪ್ರಭು ಪರಾಕ್ರಮಿ” ಎನ್ನಲಿ II 17 ಬಡವನು, ದುರ್ಬಲನು ಆದೆನಗೆ ಪ್ರಭೂ, ನೀ ಹಿತಚಿಂತಕನು I ತಡಮಾಡಬೇಡ ದೇವಾ, ನೀನೆನಗುದ್ಧಾರಕನು, ಸಹಾಯಕನು II |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India