ಕೀರ್ತನೆಗಳು 4 - ಕನ್ನಡ ಸತ್ಯವೇದವು C.L. Bible (BSI)ಶತ್ರುಬಾಧಿತನ ಸಂಧ್ಯಾವಂದನೆ 1 ಸತ್ಯಸ್ವರೂಪನಾದ ದೇವಾ, ಭಕ್ತನ ಮೊರೆಗೆ ಸದುತ್ತರ ಪಾಲಿಸೊ I ಆಪತ್ತಿನಲ್ಲಿ ಆಶ್ರಯವಿತ್ತ ದೇವಾ, ಎನ್ನ ಪ್ರಾರ್ಥನೆಯ ಆಲಿಸೊ II 2 ಎಲೆ ಮಾನವ, ಎಲ್ಲಿಯತನಕ ಕೆಡಿಸುವೆ ಎನ್ನ ಘನತೆಯ? I ಅದೆಷ್ಟು ಕಾಲ ಹುರುಳಿಲ್ಲದನು ಬಯಸಿ ಅರಸುವೆ ಹುಸಿಯ? II 3 ಭಕ್ತನನು ಪ್ರಭು ಪ್ರತ್ಯೇಕಿಸಿಕೊಂಡನೆಂದು ತಿಳಿದುಕೊ I ನಾ ಮೊರೆಯಿಟ್ಟಾಗ ಆತ ಕಿವಿಗೊಡುವನೆಂದು ಅರಿತುಕೊ II 4 ಕೋಪಗೊಂಡರೂ ದೂರವಿರು ಪಾಪದಿಂದ I ಶಯನದಲ್ಲಿದ್ದರೂ ಧ್ಯಾನಿಸು ಹೃದಯದಿಂದ II 5 ಅರ್ಪಿಸಿರಿ ಯೋಗ್ಯ ಬಲಿಗಳನೆ I ಇಡಿರಿ ಭರವಸೆ ಪ್ರಭುವಿನಲೆ II 6 “ಒಳಿತು ಮಾಳ್ಪರೆಲ್ಲಿ!” ಎಂದು ಕೇಳುತಿಹರು ಜನತೆ I ಬೆಳಗಿಸಲಿ ನಮ್ಮನು, ಓ ಪ್ರಭು, ನಿನ್ನ ಮೊಗದ ಘನತೆ II 7 ಧಾನ್ಯದ್ರಾಕ್ಷಿಗಳ ಸುಗ್ಗಿಸಂತಸಕ್ಕಿಂತಲು I ಮಿಗಿಲಾನಂದ ತುಂಬಿಸಿರುವೆ ನೀ ಎನ್ನೆದೆಯೊಳು II 8 ಮಲಗಿ ನಿದ್ರಿಸುವೆನು ನಾ ನಿಶ್ಚಿಂತನಾಗಿ I ಪ್ರಭು ನೀ ಕಾಯುವೆ ಎನ್ನ ಸುರಕ್ಷಿತನಾಗಿ II |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India