Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 39 - ಕನ್ನಡ ಸತ್ಯವೇದವು C.L. Bible (BSI)


ವೈರಾಗಿಯ ರೋದನೆ

1 ನಾ ಇಂತೆಂದುಕೊಂಡೆ : “ಜಾಗರೂಕನಾಗಿರುವೆ ಜಿಹ್ವೆ ಪಾಪಕ್ಕೆಳೆಯದಂತೆ I ಬಾಯಿಗೆ ಕುಕ್ಕೆ ಹಾಕಿಕೊಂಡಿರುವೆ ದುರ್ಜನರ ಮುಂದೆ” II

2 ಮೌನವಿದ್ದೆ, ಸನ್ನುಡಿಯದೆಯೂ ಸುಮ್ಮನಿದ್ದೆ I ಉಲ್ಬಣಿಸುತ್ತಿತ್ತು ವೇದನೆಯು ಎಡೆಬಿಡದೆ II

3 ಎದೆಯ ತಾಪ ಹೆಚ್ಚಿತು, ಚಿಂತೆ ಕಾವೇರಿತು I ಆಗತಾನೆ ಬಾಯ್ತೆರೆದೆ ನಾನಿಂತೆಂದು: II

4 “ನನ್ನ ಜೀವಾಯುಸ್ಸು ಎನಿತು? ನನ್ನ ಬಾಳಿನ ಮುಗಿವೆಂದು? I ತಿಳಿಯಪಡಿಸು ನನಗೆ ಪ್ರಭು, ನಾನು ಬಲು ಅಸ್ಥಿರನೆಂದು” II

5 ನನ್ನಾಯುಸ್ಸು ಗೇಣುದ್ದ, ನಿನ್ನೆಣಿಕೆಗದು ಶೂನ್ಯ I ಮಾನವ ಜೀವನ ಕೇವಲ ಉಸಿರಿಗೆ ಸರಿಸಮಾನ! II

6 ನರಮಾನವನು ಮೆರೆದಾಡುವನು ಮಾಯೆಯಂತೆ I ಅವನ ಸಡಗರವೆಲ್ಲವೂ ನಿರರ್ಥಕದಂತೆ I ಕೂಡಿಪನಾತ ಸಿರಿ ಅದು ಯಾರದಾಗುವುದೆಂದು ಅರಿಯದೆ II

7 ಇಂತಿರಲು ಪ್ರಭು, ನಾನೇತಕೆ ಕಾದಿರಬೇಕು? I ನೀನೆ ಅಲ್ಲವೆ ನನಗೆ ನಂಬಿಕೆ, ಇದು ಸಾಕು II

8 ಮುಕ್ತಗೊಳಿಸೆನ್ನ ಪ್ರಭು, ಎಲ್ಲಪರಾಧಗಳಿಂದ I ಕಾದಿರಿಸೆನ್ನನು ಮೂರ್ಖರ ತಿರಸ್ಕಾರದಿಂದ II

9 ಮೌನದಿಂದಿರುವೆ, ಬಾಯ್ದೆರೆಯದಿರುವೆ I ನನಗೊದಗಿರುವುದು ನಿನ್ನಿಂದಲ್ಲವೆ? II

10 ಸಾಕು ಮಾಡು ನಿನ್ನ ಕೈ ಹೊಡೆತವನು I ಅದರಿಂದ ನಾ ಸಾಯುತ್ತಿರುವೆನು II

11 ಪಾಪದ ಪ್ರಯುಕ್ತ ಮಾನವನು ಶಿಕ್ಷಿಸುವಾಗ I ನುಸಿಹತ್ತಿದಂತೆ ನಾಶಪಡಿಸುವೆ ಅವನಾಸ್ಥೆಯನಾಗ I ಮಾನವ ಜೀವನ ಕೇವಲ ಉಸಿರಿಗೆ ಸರಿಸಮಾನ II

12 ನನ್ನ ಮೊರೆಯ ಕೇಳು, ಪ್ರಾರ್ಥನೆಯನಾಲಿಸು I ಸುಮ್ಮನಿರದೆ ನನ್ನ ಕಂಬನಿಯನೀಕ್ಷಿಸು II ಹೇ ಪ್ರಭು, ನಾನಿನ್ನ ಆಗಂತುಕನಯ್ಯಾ I ಪೂರ್ವಜರಂತೆ ನಾ ಪರದೇಶಿಯಯ್ಯಾ II

13 ನಾ ಕಾಲವಾಗಿ ಕಣ್ಮರೆಯಾಗುವೆ ಇಲ್ಲಿಂದ I ಆ ಮುನ್ನ ಹೊರಳಿಸು ಕೋಪದೃಷ್ಟಿಯನು ನನ್ನಿಂದ I ನಾ ಬಾಳುವಂತೆ ಮಾಡು ಪ್ರಭು, ಸಂತಸದಿಂದ II

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು