Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 38 - ಕನ್ನಡ ಸತ್ಯವೇದವು C.L. Bible (BSI)


ಪಾಪಪರಿತಾಪದಲಿ ಪ್ರಾರ್ಥನೆ

1 ಕೋಪದಿಂದೆನ್ನ ಪ್ರಭು, ಬೈಯಬೇಡ I ರೋಷದಿಂದೆನ್ನನು ದಂಡಿಸಲು ಬೇಡ II

2 ನಿನ್ನ ಬಾಣಗಳು ನಾಟಿವೆ ನನ್ನೊಳಗೆ I ನಿನ್ನ ಹಸ್ತವು ಎರಗಿದೆ ನನ್ನ ಮೇಲೆ II

3 ನನ್ನ ದೇಹದಲ್ಲಿಲ್ಲ ಸೌಖ್ಯ ನಿನ್ನ ಕೋಪದ ನಿಮಿತ್ತ I ನನ್ನೆಲುಬಿನಲ್ಲಿಲ್ಲ ಕ್ಷೇಮ ನನ್ನ ಪಾಪದ ಪ್ರಯುಕ್ತ II

4 ಮುಳುಗಿಸಿಬಿಟ್ಟಿವೆ ನನ್ನ ಅಪರಾಧಗಳೆನ್ನನು I ಅಮುಕಿಬಿಟ್ಟಿವೆ ಹೊರಲಾರದ ಹೊರೆಯಂತೆನ್ನನು II

5 ಕೀವು ಸೋರಿ ನಾರುತ್ತಿವೆ ನನ್ನ ಪಾಪದ ಗಾಯಗಳು I ಇದಕ್ಕೆಲ್ಲ ಕಾರಣವು ನನ್ನ ಮೂರ್ಖತನವು II

6 ಬಾಗಿ ಕುಗ್ಗಿಹೋಗಿರುವೆ ಪ್ರಭು ಬಹಳವಾಗಿ I ದಿನವೆಲ್ಲ ಅಲೆಯುತ್ತಿರುವೆ ದುಃಖಭರಿತನಾಗಿ II

7 ಉರಿಬಡಿದಂತಿದೆ ಎನ್ನ ಸೊಂಟಕೆ I ಆರೋಗ್ಯವಿಲ್ಲದಿದೆ ದೇಹಕೆ II

8 ಜೋಮು ಹಿಡಿದಂತಿದೆ, ಜೀವ ಹಿಂಡಿದಂತಿದೆ I ಹೃದಯವೇದನೆಯಿಂದ ನರಳಾಡುತ್ತಿರುವೆ II

9 ನನ್ನ ಗೋಳಾಟ ಪ್ರಭು, ನಿನಗೆ ಗೊತ್ತಿದೆಯಯ್ಯಾ I ನನ್ನ ಮನದಾಸೆ ನಿನಗೆ ಬಯಲಾಗಿದೆಯಯ್ಯಾ II

10 ಬಡಿದುಕೊಳ್ಳುತಿದೆ ಹೃದಯ, ಹುದುಗಿಹೋಗಿದೆ ಚೇತನ I ಮಬ್ಬಾಗಿ ಹೋಗಿದೆ ನನ್ನೆರಡು ನಯನಸಾಧನ II

11 ನನ್ನ ಜಾಡ್ಯ ನೋಡಿ ದೂರ ಸರಿದರು ನೆಂಟರಿಷ್ಟರು I ಬಳಿಬಾರದೆ ಅಲ್ಲೇ ನಿಂತರು ಬಂಧು ಬಳಗದವರು II

12 ಉರಲನೊಡ್ಡಿಹರು ನನ್ನ ಪ್ರಾಣಹಂತಕರು I ನಿರ್ಧರಿಸಿಹರು ವಿನಾಶವನ್ನು ಕೇಡು ಬಗೆವವರು I ಕುತಂತ್ರವ ಮಾಡುವರು ಸತತ ಮೋಸಗಾರರು II

13 ನಾನಂತು ಕೇಳದಿದ್ದೆ ಕಿವುಡನಂತೆ I ಮರು ಉತ್ತರಿಸದೆ ಮೌನವಿದ್ದೆ ಮೂಕನಂತೆ II

14 ಅಹುದಹುದು ಕಿವಿ ಕೇಳಿಸದವನಂತಿದ್ದೆ I ಪ್ರತ್ಯುತ್ತರ ಕೊಡಲಾಗದವನಂತಿದ್ದೆ II

15 ನಿನಗಾಗಿ ಪ್ರಭು, ಕಾದಿರುವೆನಯ್ಯಾ I ನನಗಾಗಿ ನೀ ಉತ್ತರಿಸೋ, ದೇವಾ II

16 ಶತ್ರುಗಳು ಹರ್ಷಿಸಬಾರದು ನನ್ನ ವಿಷಯದಲಿ I ಹಿಗ್ಗಬಾರದವರು ನಾ ಜಾರಿ ಬಿದ್ದಲ್ಲಿ II

17 ಇಗೋ, ನಾನೆಡವಿ ಬೀಳಲಿರುವೆ I ಆಪತ್ತಿಗಾಗಿ ಸಂಕಟಪಡುತ್ತಿರುವೆ II

18 ನಾನಪರಾಧಿಯೆಂದು ನಿವೇದಿಸುವೆ I ಪಾಪಕ್ಕಾಗಿ ಪಶ್ಚಾತ್ತಾಪ ಪಡುವೆ II

19 ಬಲಿಷ್ಠ ವೈರಿಗಳು ವಿರೋಧಿಸುತಿಹರು ನಿಷ್ಕಾರಣವಾಗಿ I ಶತ್ರುಗಳನೇಕರು ದ್ವೇಷಿಸುತಿಹರು ಅನ್ಯಾಯವಾಗಿ II

20 ಎಸಗಿಹರು ಉಪಕಾರಕೆ ಪ್ರತಿಯಾಗಿ ಅಪಕಾರ I ಎದುರಿಸುತಿಹರೀಗ ನಾ ಹಿಡಿದಿರುವ ಸನ್ಮಾರ್ಗ II

21 ಹೇ ಪ್ರಭು, ನನ್ನ ಕೈ ಬಿಡಬೇಡಯ್ಯಾ I ದೇವಾ, ನನಗೆ ದೂರವಾಗಬೇಡಯ್ಯಾ II

22 ಓ ಪ್ರಭುವೇ, ನನ್ನುದ್ಧಾರಕನೆ, I ನನಗೆ ನೆರವಾಗಲು ಬಾ ಬೇಗನೆ II

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು