ಕೀರ್ತನೆಗಳು 29 - ಕನ್ನಡ ಸತ್ಯವೇದವು C.L. Bible (BSI)ಗುಡುಗು ಮುಂಚಿಗೂ ಒಡೆಯ 1 ಸುರಪುತ್ರರೇ, ಪ್ರಭುವಿನ ಸ್ತುತಿಮಾಡಿರಿ I ಬಲುಮೆ, ಮಹಿಮೆ, ಅವನದೇ ಎಂದು ಸಾರಿರಿ II 2 ಸ್ತುತಿಸಿರಿ ಆತನ ಶ್ರೀನಾಮ ಮಹಿಮೆಯನು I ಪೂಜಿಸಿರಿ ಪವಿತ್ರಾಂಬರರಾಗಿ ಆತನನು II 3 ಪ್ರಭು ಆಸೀನನು ಆಗಸದ ಜಲರಾಶಿಗಳ ಮೇಲೆ I ಪ್ರತಿಭಾಸ್ವರೂಪನಾದ ದೇವನಿದೋ, ಗುಡುಗುತ್ತಲೇ I ಆತನಾಡಂಬರ ಧ್ವನಿ ಮೇಘಮಂಡಲದ ಮೇಲೆ II 4 ಪ್ರಭುವಿನ ಧ್ವನಿ ಶಕ್ತಿಯುತ I ಆತನ ಶಬ್ಧ ವೈಭವಯುತ II 5 ಆತನ ಗರ್ಜನೆಗೆ ಮುರಿದುಬೀಳುವುವು ದೇವದಾರು ಮರಗಳು I ಹೌದ್ಹೌದು, ಸೀಳಿ ಹೋಳಾಗುವುವು ಲೆಬನೋನಿನ ಮಹಾ ವೃಕ್ಷಗಳು II 6 ಜಿಗಿಯುವುದು ಲೆಬನೋನ್ ಪರ್ವತ ಎಳೆಗರುವಿನಂತೆ I ನೆಗೆಯುವುದು ಗಿರಿ ಸಿಯೋನ್ ಕಾಡೆಮ್ಮೆಯ ಕರುವಂತೆ II 7-8 ಆತನ ಮಹಾ ಗರ್ಜನೆಗೆ ಥಳಥಳಿಸುವುವು ಕೋಲ್ಮಿಂಚುಗಳು I ಕಂಪಿಸುವುದು ಕಾದೇಶ ಅರಣ್ಯ, ಕದಲುವುವು ಕಾಡುಮೇಡುಗಳು II 9 ಈಯುವುವು ಜಿಂಕೆಗಳು, ನಗ್ನವಾಗುವುವು ವೃಕ್ಷಗಳು I ಜಯಜಯ ಘೋಷಮಾಡುವರೆಲ್ಲರು ಆತನಾಲಯದೊಳು II 10 ಜಲಪ್ರಳಯದೊಳು ಪ್ರಭು ಆಸೀನನಾಗಿಹನು I ಯುಗಯುಗಾಂತರಕು ಅರಸನಾಗಿ ಆಳುವನು II 11 ಅನುಗ್ರಹಿಸಲಿ ಪ್ರಭು ತನ್ನ ಜನರಿಗೆ ಶಕ್ತಿಯನು I ದಯಪಾಲಿಸಲಿ ತನ್ನ ಪ್ರಜೆಗೆ ಸುಕ್ಷೇಮವನು II |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India