Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 28 - ಕನ್ನಡ ಸತ್ಯವೇದವು C.L. Bible (BSI)


ಪ್ರಭುವಿನ ಮೌನ ಸಾವಿಗೆ ಸಮಾನ

1 ನನ್ನ ಮೊರೆ ಕೇಳು ಪ್ರಭು, ದುರ್ಗ ನೀನೆನಗೆ I ನೀ ಕಿವಿಗೊಡದಿರೆ, ನಾ ಸಮಾನ ಸತ್ತವರಿಗೆ II

2 ನಿನ್ನ ಪರಿಶುದ್ಧಾಲಯದತ್ತ ಕೈಯೆತ್ತಿ ಮುಗಿವೆನು I ಕರುಣೆಯಿಂದಾಲಿಸು ಪ್ರಭು, ನನ್ನಾರ್ತ ಮನವಿಯನು II

3 ದುರುಳರೊಡನೆ ದೂಡಬೇಡ, ದುರ್ಜನರೊಡನೆ ವಿಸರ್ಜಿಸಬೇಡೆನ್ನನು I ಪರರಿಗವರು ನುಡಿವರು ಶಾಂತಿಯನು ಉದರದಲ್ಲಿಡುವರು ಕ್ರೋಧವನು II

4 ಕೇಡಿಗರು ಪರರಿಗೆ ಮಾಡಿದುದ ತಾವೇ ಉಣ್ಣಮಾಡು I ಅವರ ದುಷ್ಟಕಾರ್ಯಗಳಿಗೆ ತಕ್ಕುದಾದ ಶಿಕ್ಷೆ ನೀಡು II

5 ಅರಿಯರವರು ಪ್ರಭುವಿನ ಕಾರ್ಯಗಳನು, ಆತನ ಕೈಕೆಲಸಗಳನು I ಈ ಕಾರಣ ಕೆಡವಿಬಿಡುವನು ಪ್ರಭು, ಮರಳಿ ಏಳಬಿಡನವರನು II

6 ಪ್ರಭುವಿಗೆನ್ನ ಕೃತಜ್ಞತಾ ವಂದನೆ I ಆಲಿಸಿದನವನು ನನ್ನ ವಿಜ್ಞಾಪನೆ II

7 ಪ್ರಭುವೇ ಶಕ್ತಿ, ಎನಗೆ ರಕ್ಷೆ, ಎನ್ನೆದೆಯ ನಂಬುಗೆ I ಎನ್ನ ಮನಃಪೂರ್ವಕ ಕೀರ್ತನೆ, ಆತನಿತ್ತ ನೆರವಿಗೆ II

8 ಪ್ರಭುವೆ ತನ್ನ ಪ್ರಜೆಯ ಪ್ರಾಬಲ್ಯವು I ತನ್ನಭಿಷಿಕ್ತನಿಗೆ ಆಶ್ರಯ ದುರ್ಗವು II

9 ರಕ್ಷಿಸು ನಿನ್ನ ಪ್ರಜೆಯನು, ಆಶೀರ್ವದಿಸು ನಿನ್ನ ಜನರನು I ಕುರಿಗಾಹಿ ನೀನಾಗಿರು ಪ್ರಭೂ, ಹೊತ್ತು ಸಾಗಿಸು ಅವರನು II

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು