Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 27 - ಕನ್ನಡ ಸತ್ಯವೇದವು C.L. Bible (BSI)


ನಿರ್ಭೀತ ನಿರೀಕ್ಷೆ

1 ನನಗೆ ಬೆಳಕು, ನನಗೆ ರಕ್ಷೆ, ಪ್ರಭುವೆ I ನಾನಾರಿಗೂ ಅಳುಕೆನು II ನನ್ನ ಬಾಳಿಗಾಧಾರ ಪ್ರಭುವೆ I ನಾನಾರಿಗೂ ಅಂಜೆನು II

2 ಕೇಡು ಮಾಡಬಂದರೆನಗೆ ಕೊಲೆಗಡುಕರು I ಎಡವಿಬಿದ್ದರು, ತಾವೇ ಅಳಿದುಹೋದರು II

3 ಸೇನೆ ಸಮೇತ ಶತ್ರು ಬಂದರೂ ಎದೆಗುಂದೆನು I ಸಮರಕ್ಕೆರಗಿದರೂ ನಾ ಭರವಸೆಯಿಂದಿರುವೆನು II

4 ನಾನೊಂದನು ಕೋರಿದೆ ಪ್ರಭುವಿನಿಂದ I ನಾನದನ್ನೇ ನಿರೀಕ್ಷಿಸಿದೆ ಆತನಿಂದ : I ವಾಸಿಸಬೇಕು ಜೀವಮಾನವೆಲ್ಲ ನಾನಾತನ ಮಂದಿರದಲಿ I ನಾ ತಲ್ಲೀನನಾಗಬೇಕು ಅಲ್ಲಾತನ ಪ್ರಸನ್ನತೆಯಲಿ II

5 ಕೇಡುಕಾಲದಲ್ಲಿ ಅವಿತಿಸಿಡುವನು ನನ್ನನ್ನು ತನ್ನ ಗುಡಾರದಲಿ I ಇರಿಸುವನು ಮರೆಯಾಗಿ ಗರ್ಭಗುಡಿಯಲಿ, ಸುರಕ್ಷಿತ ಶಿಖರದಲಿ II

6 ಸುತ್ತಲು ನೆರೆದಿಹ ಶತ್ರುಗಳ ನಡುವೆ ತಲೆಯೆತ್ತಿ ನಡೆವೆನು I ದೇವಾಲಯದೊಳು ಜಯಜಯ ಘೋಷದೊಡನೆ ಬಲಿಗಳನರ್ಪಿಸುವೆನು I ಪ್ರಭುವಿಗೆ ಹಾಡುವೆನು, ವಾದ್ಯ ನುಡಿಸುತ ಕೊಂಡಾಡುವೆನು II

7 ಪ್ರಭೂ, ನಿನಗೆ ಮೊರೆಯಿಡುವೆನು I ಕರುಣಿಸೆನಗೆ ಸದುತ್ತರವನು II

8 “ಅರಸೆನ್ನ ಮುಖದರುಶನವನು", ಎಂದೆ ನೀನು I “ಅರಸುವೆನು ಅದನೆ", ಎಂದು ಮರುನುಡಿದೆ ನಾನು II

9 ವಿಮುಖನಾಗಬೇಡ ಪ್ರಭು, ಕೋಪದಿಂದೆನ್ನ ತಳ್ಳಬೇಡಯ್ಯಾ I ರಕ್ಷಕದೇವಾ, ಎನಗೆ ಸಹಾಯಕಾ, ದಾಸನ ಕೈಬಿಡಬೇಡಯ್ಯಾ II

10 ಹೆತ್ತವರು ತೊರೆದುಬಿಟ್ಟರೇನು I ಕರ್ತನು ಪೊರೆಯದಿರನು ನನ್ನನು II

11 ಬೋಧಿಸೆನಗೆ ಪ್ರಭು, ನಿನ್ನ ಮಾರ್ಗವನು I ಶತ್ರುರಹಿತ ಹಾದಿಯಲಿ ನಡೆಸು ಎನ್ನನು II

12 ತಳ್ಳಬೇಡೆನ್ನನು ವೈರಿಗಳ ವಶಕ್ಕೆ I ಸುಳ್ಳುಸಾಕ್ಷಿಗಳು, ಕ್ರೂರಿಗಳವರೆನಗೆ II

13 ಪ್ರಭುವಿನೊಳಿತನು ನಾ ಕಾಣುವೆ ಜೀವಲೋಕದೊಳು I ನಾನಿಟ್ಟಿರುವೆ ನಂಬಿಕೆ ನಿರೀಕ್ಷೆ ಅದರೊಳು II

14 ಪ್ರಭುವನು ಎದುರುನೋಡುತ್ತಿರು ಮನವೇ I ಧೈರ್ಯದಿಂದ ನಿರೀಕ್ಷಿಸುತ್ತಿರು ಎದೆಗುಂದದೆ II

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು