ಕೀರ್ತನೆಗಳು 2 - ಕನ್ನಡ ಸತ್ಯವೇದವು C.L. Bible (BSI)ಅಭಿಷಿಕ್ತನ ಆಧಿಪತ್ಯ 1 ದೊಂಬಿಯೇಳುವುದೇತಕೆ ಅನ್ಯದೇಶವಿದೇಶಗಳು? I ಕುತಂತ್ರ ಹೂಡುವುದೇಕೆ ಅನ್ಯಜಾತಿಜನಾಂಗಗಳು? II 2 ದೇವನಿಗು, ಅವನಭಿಷಿಕ್ತನಿಗು ವಿರುದ್ಧವಾಗಿ I ನಿಂತಿಹರು ನೃಪರು ಸಮರ ಸನ್ನದ್ಧರಾಗಿ I ಸಮಾಲೋಚಿಸಿಹರು ಸಚಿವರು ರಹಸ್ಯವಾಗಿ II 3 “ಅವರೆಮಗೆ ತೊಡಿಸಿಹ ಬೇಡಿಗಳನು ಮುರಿಯೋಣ” ಎನ್ನುತಿಹರು I “ಅವರೆಮಗೆ ಹಾಕಿದ ಬಂಧನಗಳನು ಹರಿಯೋಣ” ಎನ್ನುತಿಹರು II 4 ಪರದಲಿ ಆಸೀನನಾಗಿಹ ಪ್ರಭು ನಗುವನಿದಕೆ I ಗುರಿಮಾಡದಿರನು ಇವರೆಲ್ಲರನು ಪರಿಹಾಸ್ಯಕೆ II 5-6 ಅನಂತರ ಸಿಡಿದೆದ್ದು ಹೀಗೆಂದು ನುಡಿವನು: “ನಾ ನೇಮಿಸಿದ ಅರಸನನೇ ಸ್ಥಾಪಿಸಿಹೆನು I ಸಿಯೋನ್ ಶ್ರೀಶಿಖರದಲೇ ಅವನನು ಇರಿಸಿಹೆನು” I ಈ ಪರಿ ಕೆರಳಿ ಕಳವಳಗೊಳಿಸುವನು ಅವರನು II 7 ಕೇಳಿರೀ ದೈವಾಜ್ಞೆಯನು: ಆತನು ಎನಗಿಂತೆದನು: I “ಈ ದಿನ ನಾನಿನ್ನ ಹಡೆದಿಹೆನು: ನೀನೆನಗೆ ಮಗನು II 8 ಕೇಳಿದೆಯಾದರೆ ನಿನಗಧೀನಮಾಡುವೆನು ರಾಷ್ಟ್ರಗಳನು I ಕೊಡುವೆನು ನಿನಗೆ ಸ್ವಾಸ್ತ್ಯವಾಗಿ ಜಗದ ಆದ್ಯಂತವನು II 9 ನೀ ಬಡಿದು ಹಾಕುವೆ ಕಬ್ಬಿಣದ ಗದೆಯಿಂದವರನು I ನೀ ಒಡೆದು ಹಾಕುವೆ ಮಣ್ಣಿನ ಮಡಕೆಯಂತವರನು"II 10 ಎಂತಲೇ ವಿವೇಕಿಗಳಾಗಿರಿ, ರಾಜರುಗಳೇ, I ಬುದ್ಧಿವಾದಕೆ ಕಿವಿಗೊಡಿ, ದೇಶಾಧಿಪತಿಗಳೇ II 11 “ಭಯಭಕುತಿಯಿಂದ ಪ್ರಭುವಿಗೆ ಸೇವೆಮಾಡಿರಿ I ನಡುನಡುಗುತ ಆತನ ಪಾದಪೂಜೆ ಮಾಡಿರಿ” II 12 ಇಲ್ಲದಿರೆ ಭುಗಿಲೆದ್ದೀತು ಆತನ ಕೋಪಾವೇಶ I ಮಾರ್ಗಮಧ್ಯದಲೇ ಕಾದಿರಬಹುದು ನಿಮಗೆ ವಿನಾಶ I ಆತನನು ಆಶ್ರಯಿಸುವವರಿಗಿದೆ ಸೌಭಾಗ್ಯ ಸಂತೋಷ II |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India