ಕೀರ್ತನೆಗಳು 17 - ಕನ್ನಡ ಸತ್ಯವೇದವು C.L. Bible (BSI)ನಿರಪರಾಧಿಯ ಪ್ರಾರ್ಥನೆ 1 ಲಕ್ಷ್ಯವಿಡು, ಓ ಪ್ರಭು, ಎನ್ನ ನ್ಯಾಯವಾದ ಮೊರೆಗೆ I ಕಿವಿಗೊಡು, ನಿಷ್ಕಪಟ ಬಾಯಿಂದ ಬಂದ ಪ್ರಾರ್ಥನೆಗೆ II 2 ನ್ಯಾಯತೀರ್ಪು ಬರಲಿ ಎನಗೆ, ನಿನ್ನಿಂದಲೆ I ನೀತಿಗನುಸಾರ ನೋಡುವಾತ, ನೀನಲ್ಲವೆ? II 3 ಹೃದಯ ವೀಕ್ಷಿಸು, ಇರುಳೆಲ್ಲ ವಿಚಾರಿಸು, ಅಗ್ನಿಪರೀಕ್ಷೆ ಮಾಡಿಸು I ನಾ ದೋಷರಹಿತ, ಮಾತಲಿ ತಪ್ಪದವ, ಎಂದಾಗ ತೀರ್ಮಾನಿಸು II 4 ಲೋಕವಿಚಾರಗಳಲಿ ಹಿಂಸಾತ್ಮಕ ಮಾರ್ಗ ಹಿಡಿದಿಲ್ಲ I ನಿನ್ನಧರ ವಚನವನು ನಾನೆಂದಿಗು ಮೀರಿ ನಡೆದಿಲ್ಲ II 5 ನಿನ್ನ ಮಾರ್ಗದಿಂದ ಕಾಲು ಜಾರಲು ಬಿಡದೆ I ನಿನ್ನ ಪಥದಲಿ ದಿಟ್ಟ ಹೆಜ್ಜೆಯಿಟ್ಟು ನಡೆದೆ II 6 ಸದುತ್ತರ ಪಾಲಿಪೆಯೆಂದು ನಂಬಿ ಬೇಡುವೆನಯ್ಯಾ I ಮೊರೆಯಿಡುವೆ ದೇವಾ, ಕಿವಿಗೊಟ್ಟು ಆಲಿಸಯ್ಯಾ II 7 ಶರಣರನು ಶತ್ರುವಿಂದ ಸಂರಕ್ಷಿಸುವಾತ ನೀನಯ್ಯಾ I ಭುಜಬಲವನು ಪ್ರಯೋಗಿಸಿ ಕಾಪಾಡುವಾತ ನೀನಯ್ಯಾ I ನಿನ್ನಚಲ ಪ್ರೀತಿಯನ್ನಚ್ಚರಿಯಿಂದ ತೋರ್ಪಡಿಸಯ್ಯಾ II 8-9 ಮುತ್ತಿಗೆ ಹಾಕಿರುವ ಹೀನ ಶತ್ರುಗಳಿಂದ I ಸುತ್ತುವರೆದಿರುವ ಪ್ರಾಣ ವೈರಿಗಳಿಂದ I ನಿನ್ನ ಕನೀನಿಕೆಯಂತೆ ಎನ್ನ ಕಾಪಾಡು I ನಿನ್ನ ರೆಕ್ಕೆಗಳ ನೆರಳಲಿ ಎನ್ನ ಮರೆಸಿಡು II 10 ಕರುಣೆಗೆಡೆಯಿಲ್ಲ ಕೊಬ್ಬಿದಾ ಹೃದಯಗಳಲಿ I ಗರ್ವ ತುಳುಕುತಿದೆ ಆ ಜನರ ಬಾಯಿಗಳಲಿ II 11 ಹಿಂದೆಯೆ ಬಂದು ಸುತ್ತುವರೆದುಕೊಳ್ಳುವರು I ನೆಲಕ್ಕಪ್ಪಳಿಸಲು ಹೊಂಚು ಕಾಯುತ್ತಿರುವರು II 12 ಇಹರು ಸೀಳಿಹಾಕಲಿರುವ ಕೇಸರಿಯಂತೆ I ಹೊಂಚು ಹಾಕುತಿಹರು ಪ್ರಾಯ ಸಿಂಹದಂತೆ II 13 ಸದೆಬಡಿ ಪ್ರಭು, ಆ ದುರುಳರನು ಇದಿರ್ಗೊಂಡು I ಖಡ್ಗ ಹಿಡಿದೆನ್ನ ಪ್ರಾಣವನು ಕಾಪಾಡು II 14 ಇಳೆಯ ಮಾನವರಿಂದ ಪ್ರಭು, ಎನ್ನನು ಕೈಯಾರೆ ಕಾಪಾಡು I ಜಗವೇ ತಮ್ಮ ಪಾಲಿನ ಪರಿಮಿತಿ ಎನ್ನುವವರಿಂದ ಕಾದಿಡು II ಅವರಾದರೊ ನಿನ್ನ ನಿಧಿಯಿಂದ ಉದರ ತುಂಬಿಸಿಕೊಳ್ಳಲಿ I ಮಕ್ಕಳು, ಮರಿಮಕ್ಕಳಿಗೆ ಯಥೇಚ್ಛವಾಗಿ ಉಳಿಸಿಕೊಳ್ಳಲಿ II 15 ಸತ್ಯಸಂಧನಾದ ನಾನೊ ಸೇರುವೆ ನಿನ್ನ ಸಾನ್ನಿಧ್ಯವನು I ಎಚ್ಚೆತ್ತು ನಿನ್ನ ಮುಖದರ್ಶನದಿಂದ ತೃಪ್ತನಾಗುವೆನು II |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India