Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 16 - ಕನ್ನಡ ಸತ್ಯವೇದವು C.L. Bible (BSI)


ಪ್ರಭು-ಭಕ್ತನ ಭಾಗ್ಯ

1 ನೀಡು ದೇವಾ ರಕ್ಷಣೆಯನು I ನಾ ನಿನಗೆ ಶರಣಾಗತನು II

2 “ನೀನೇ ನನ್ನೊಡೆಯ"ನೆಂದು ನಾ ನುಡಿದೆ I ನಿನ್ನ ಹೊರತು ನನಗಿಲ್ಲ ಒಳಿತು” ಎಂದೇ II

3 ಸಂತರು ನಾಡಿಗೆ ತಿಲಕವು I ಅವರಲ್ಲಿದೆ ಎನಗೆ ಒಲವು II

4 ಅನ್ಯದೇವರನ್ನು ಬಯಸುವವರನ್ನು ಕಾದಿದೆ ಕಠಿಣ ಕಷ್ಟ I ಅವರಂತೆ ರಕ್ತಪಾನತರ್ಪಣೆ ಮಾಡಲೆನಗಿಲ್ಲ ಇಷ್ಟ I ಆ ದೇವರುಗಳ ನಾಮೋಚ್ಚಾರಣೆ ನನ್ನ ತುಟಿಗೆ ಅನಿಷ್ಟ II

5 ನನ್ನ ಸ್ವತ್ತೂ ಸ್ವಾಸ್ತ್ಯವೂ ನೀನೇ I ನಿನ್ನ ಕೈಯಲ್ಲಿದೆ ಪ್ರಭು, ನನ್ನ ವಿಮೆ II

6 ನನ್ನ ಪಾಲಿಗೆ ಬಂದುದು ರಮಣೀಯವಾದುದು I ನನಗದೆ ಪರಮಾನಂದದಾಯಕವಾದುದು II

7 ಪ್ರಭುವಿಗೆನ್ನ ಧನ್ಯವಾದ - ಆತನೇ ನನಗೆ ಮಾರ್ಗದರ್ಶಕ I ಅಂಧಕಾರದೊಳೂ ನನ್ನ ಮನಸ್ಸಾಕ್ಷಿಯೆ ನನಗೆ ಬೋಧಕ II

8 ಇರಿಸಿಕೊಳ್ಳುವೆ ಪ್ರಭುವನು ಸತತ ನನ್ನೆದುರಿಗೆ I ಆತನಿರಲು ಬಲಕ್ಕೆ ನನಗೆಲ್ಲಿಯದು ಹೆದರಿಕೆ II

9 ಇದು ಕಾರಣ ಹರ್ಷದಿಂದಿದೆ ಎನ್ನಯ ಹೃದಯ I ಆನಂದಗೊಂಡಿದೆ ಮನ, ಸುರಕ್ಷಿತವಿದೆ ಕಾಯ II

10 ಏಕೆನೆ ದೂಡುವುದಿಲ್ಲ ನೀನು ಎನ್ನನು ಅಧೋಲೋಕಕೆ I ಬಿಟ್ಟುಕೊಡುವುದಿಲ್ಲ ನಿನ್ನ ಆ ಭಕ್ತನನು ಪಾತಾಳಕೆ II

11 ತೋರ್ಪಡಿಸುವೆ ಎನಗೆ ಅಮರ ಜೀವಮಾರ್ಗವನು I ನಿನ್ನ ಸನ್ನಿಧಿ ಕೊಡುವುದು ಪರಮಾನಂದವನು I ನಿನ್ನ ಬಲಗೈ ನೀಡುವುದು ನಿತ್ಯಭಾಗ್ಯವನು II

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು