ಕೀರ್ತನೆಗಳು 147 - ಕನ್ನಡ ಸತ್ಯವೇದವು C.L. Bible (BSI)ದೇವರ ಒಲುಮೆ - ಆತನ ಕರುಣೆ 1 ನಮ್ಮ ದೇವರನು ಹೊಗಳಿ ಹಾಡುವುದು ಉಚಿತ I ಆತನ ಸ್ತುತಿ ಮನೋಹರ, ಅದು ಬಲುಸೂಕ್ತ II 2 ನಿರ್ಮಿಸುತಿಹನು ಪ್ರಭು ಮರಳಿ ಜೆರುಸಲೇಮನು I ಬಂದು ಸೇರಿಸುತಿಹನು ಚದರಿದ ಇಸ್ರಯೇಲರನು II 3 ವಾಸಿಮಾಡುವನು ಮುರಿದ ಮನಸ್ಸುಳ್ಳವರನು I ಕಟ್ಟಿ ಗುಣಪಡಿಸುವನು ಅವರ ಗಾಯಗಳನು II 4 ನಿಯಮಿಸಿಹನು ತಾರೆಗಳ ಸಂಖ್ಯೆಯನು I ಇಟ್ಟಿಹನು ಪ್ರತಿಯೊಂದಕೂ ಹೆಸರನು II 5 ನಮ್ಮ ಪ್ರಭು ಘನವಂತ, ಪರಾಕ್ರಮಿ I ಅಪರಿಮಿತವಾದುದು ಆತನ ಜ್ಞಾನನಿಧಿ II 6 ಆಧಾರವಾಗಿಹನು ಪ್ರಭು ದೀನರಿಗೆ I ತುಳಿದುಬಿಡುವನು ದುರ್ಜನರನು ನೆಲಕೆ II 7 ಧನ್ಯವಾದವಿತ್ತು ಹಾಡಿರಿ ಪ್ರಭುವನು I ಕಿನ್ನರಿಯೊಡನೆ ಭಜಿಸಿರಿ ನಮ್ಮ ದೇವನನು II 8 ಕವಿಸುವನಾತ ಮೋಡಗಳನು ಗಗನದಲಿ I ಸುರಿಸುವನು ಮಳೆಯನು ಬುವಿಯಲಿ I ಬೆಳೆಸುವನು ಹುಲ್ಲನು ಬೆಟ್ಟಗಳಲಿ II 9 ಪಶುಗಳಿಗೂ ಕೂಗುವ ಕಾಗೆಮರಿಗಳಿಗೂ I ಒದಗಿಸುವನು ಬೇಕಾದ ಆಹಾರಗಳನು II 10 ಅಶ್ವಬಲದಲಿ ಆತನಿಗೆ ಇಷ್ಟವಿಲ್ಲ I ಶೂರನ ಶಕ್ತಿಯನವನು ಮೆಚ್ಚುವುದಿಲ್ಲ II 11 ಮೆಚ್ಚುವನಾತ ತನ್ನಲಿ ಭಯಭಕ್ತಿಯುಳ್ಳವರನು I ತನ್ನಚಲ ಪ್ರೀತಿಯಲಿ ಭರವಸೆಯುಳ್ಳವರನು II 12 ಜೆರುಸಲೇಮೇ, ಕೀರ್ತಿಸು ಪ್ರಭುವನು I ಸಿಯೋನೇ, ಸ್ತುತಿಸು ನಿನ್ನ ದೇವರನು II 13 ಬಲಪಡಿಸಿಹನಾತ ನಿನ್ನ ಹೆಬ್ಬಾಗಿಲ ಅಗುಳಿಗಳನು I ಆಶೀರ್ವದಿಸಿಹನು ನಿನ್ನಲ್ಲಿರುವ ಮಕ್ಕಳನು II 14 ನಿನ್ನ ಪ್ರಾಂತದೊಳಗೆಲ್ಲಾ ಇರುವುದು ನೆಮ್ಮದಿ I ನೀಡುವನು ನಿನಗೆ ಅತ್ಯುತ್ತಮ ಗೋದಿ II 15 ಕಳಿಸುವನು ಧರೆಗೆ ತನ್ನ ಆಣತಿ I ಸಿದ್ಧಿಯಾಗುವುದದು ಬಲು ಶೀಘ್ರದಿ II 16 ಸುರಿಸುವನು ಹಿಮವನು ಉಣ್ಣೆಯಂತೆ I ಹರಡುವನು ಇಬ್ಬನಿಯನು ಬೂದಿಯಂತೆ II 17 ಸುರಿಸುವನು ಆಲಿಕಲ್ಲನು ರೊಟ್ಟಿ ತುಂಡುಗಳಂತೆ I ಕೊರೆಯುವ ಚಳಿಯನು ಕಳಿಸುವನು ಸಹಿಸಲಾಗದಂತೆ II 18 ಕರಗುವುವು ಆ ಕಲ್ಲುಗಳು ಆತನ ಅಪ್ಪಣೆಗೆ I ಹರಿಯುವುದು ನೀರು ಆತ ಕಳುಹಿಸುವ ಗಾಳಿಗೆ II 19 ತಿಳಿಸಿಹನು ತನ್ನ ವಾಕ್ಯವನು ಯಕೋಬ್ಯರಿಗೆ I ತನ್ನ ವಿಧಿನಿಯಮಗಳನು ಇಸ್ರಯೇಲರಿಗೆ II 20 ಬೇರಾವ ಜನಾಂಗಕ್ಕೂ ಆತ ಹೀಗೆ ಮಾಡಿಲ್ಲ I ಆತನ ವಿಧಿನಿಯಮಗಳನು ಅವರಿಗೆ ತಿಳಿಸಿಲ್ಲ I ಅಲ್ಲೆಲೂಯ! II |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India