ಕೀರ್ತನೆಗಳು 140 - ಕನ್ನಡ ಸತ್ಯವೇದವು C.L. Bible (BSI)ಶತ್ರುಪೀಡಿತನ ಪ್ರಾರ್ಥನೆ 1 ಬಿಡಿಸೆನ್ನನು ಪ್ರಭು ಕೆಡುಕರಿಂದ I ಕಾಪಾಡೆನ್ನನು ಹಿಂಸಕರಿಂದ II 2 ಕೇಡನು ಕಲ್ಪಿಸುತ್ತಾರವರು ಮನದೊಳು I ಕಲಹವೆಬ್ಬಿಸುತ್ತಾರೆ ಯಾವಾಗಲೂ II 3 ಅವರ ನಾಲಗೆಯು ಸರ್ಪದಂತೆ I ಹಾವಿನ ವಿಷ ಅವರ ತುಟಿ ಹಿಂದೆ II 4 ಪ್ರಭು, ತಪ್ಪಿಸೆನ್ನನು ದುಷ್ಟರ ಕೈಯಿಂದ I ಕಾಪಾಡಿ ರಕ್ಷಿಸೆನ್ನನು ಹಿಂಸಕರಿಂದ I ನಾನೆಡವುದನೇ ನಿರೀಕ್ಷಿಸುವವರಿಂದ II 5 ಒಡ್ಡಿದರು ಗರ್ವಿಗಳು ಗುಪ್ತವಾಗಿ I ಉರುಲನು, ಪಾಶಗಳನು ನನಗಾಗಿ I ಬಲೆಹಾಸಿದರು ದಾರಿಗೆ ಅಡ್ಡವಾಗಿ II 6 “ನೀನೆ ನನ್ನ ದೇವರು” ಎಂದೆ ಪ್ರಭುವಿಗೆ I ಕಿವಿಗೊಡೆಂದು ಕೇಳಿದೆ, ನನ್ನ ವಿಜ್ಞಾಪನೆಗೆ II 7 ಸ್ವಾಮಿದೇವಾ, ನೀನೆನಗೆ ದುರ್ಗಸ್ಥಾನ I ರಣರಂಗದಲಿ ನೀನೆನಗೆ ಶಿರಸ್ತ್ರಾಣ II 8 ನೆರವೇರಿಸಬೇಡ ದುರುಳರ ಕೋರಿಕೆಯನು I ಕೈಗೂಡಿಸಬೇಡ ಪ್ರಭು, ಅವರ ಕುಯುಕ್ತಿಯನು II 9 ನನ್ನನ್ನು ಸುತ್ತುವರೆದಿರುವವರು ತಲೆಯೆತ್ತದಿರಲಿ I ಅವರಾಡುವ ಕೇಡು ಅವರ ತಲೆಯ ಮೇಲೇ ಎರಗಲಿ II 10 ಸುರಿಯಲಿ ಆ ಜನರ ಮೇಲೆ ಉರಿಉರಿವ ಬೆಂಕಿಕೆಂಡ I ಅವರೇಳದಂತೆ ಸೇರಲಿ ಪಾತಾಳದ ಅಗ್ನಿಕುಂಡ II 11 ಉಳಿಯದಿರಲಿ ನಾಡೊಳು ಚಾಡಿಕೋರರು I ಕೇಡಿಂದ ನಾಶವಾಗಲಿ ಹಿಂಸಕರು II 12 ಪ್ರಭು ನೀ ದೀನದಲಿತರ ವಕೀಲನೆಂದು ನಾ ಬಲ್ಲೆ I ಬಡವರಿಗೆ ನ್ಯಾಯ ದೊರಕಿಸುವವ ನೀ ಅಲ್ಲವೆ? II 13 ಭಜಿಸುವರು ಸಜ್ಜನರು ನಿನ್ನಾ ಸಿರಿನಾಮವನು I ಬಾಳ್ವರು ಸುಮನಸ್ಕರು ಬಿಡದೆ ನಿನ್ನ ಸನ್ನಿಧಿಯನು II |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India