Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 139 - ಕನ್ನಡ ಸತ್ಯವೇದವು C.L. Bible (BSI)


ಸರ್ವೇಶ್ವರನೇ ಸರ್ವಜ್ಞನು

1 ಪ್ರಭು, ಪರಿಶೋಧಿಸಿರುವೆ ನೀ ನನ್ನನು I ಅರಿತುಕೊಂಡಿರುವೆ ಅಂತರಂಗವನು II

2 ನಾ ಕೂರುವುದೂ ಏಳುವುದೂ ನಿನಗೆ ಗೊತ್ತಿದೆ I ನನ್ನಾಲೋಚನೆ ದೂರದಿಂದಲೇ ನಿನಗೆ ತಿಳಿದಿದೆ II

3 ನನ್ನ ನಡೆಯನು, ನಿದ್ರೆಯನು ನೀ ಬಲ್ಲಾತ I ನನ್ನ ನಡತೆಯೆಲ್ಲವು ನಿನಗೆ ಸುಪರಿಚಿತ II

4 ಪ್ರಭು, ನಾ ಮಾತೆತ್ತುವುದಕ್ಕೆ ಮುಂಚಿತವಾಗಿ I ತಿಳಿದುಹೋಗಿದೆ ಎಲ್ಲ ನಿನಗೆ ಪೂರ್ತಿಯಾಗಿ II

5 ನನ್ನ ಹಿಂದೆಯೂ ಮುಂದೆಯೂ ನೀನಿರುವೆ I ಅಭಯ ಹಸ್ತವನು ನನ್ನ ಮೇಲಿರಿಸಿರುವೆ II

6 ನನ್ನ ಕುರಿತು ನಿನಗಿರುವ ಅರಿವು ಅಗಾಧ I ನನ್ನ ಬುದ್ಧಿಗದು ಸಿಲುಕದಷ್ಟು ಉನ್ನತ II

7 ನಾನೆಲ್ಲಿಗೆ ಹೋಗಲು ಸಾಧ್ಯ, ನಿನ್ನಾತ್ಮನಿಂದ ತಪ್ಪಿಸಿಕೊಳ್ಳಲು? I ನಾನೆಲ್ಲಿಗೆ ಓಡಲು ಸಾಧ್ಯ, ನಿನ್ನ ಸನ್ನಿಧಿಯಿಂದ ಮರೆಯಾಗಲು? II

8 ಆಕಾಶಕೆ ನಾನೇರಿದರೂ ನೀನಿರುವೆ ಅಲ್ಲಿ I ಪಾತಾಳದಲಿ ನಾ ನಿದ್ರಿಸಿದರೂ ನೀನಿರುವೆ ಅಲ್ಲಿ II

9 ನಾನರುಣನ ರೆಕ್ಕೆಗಳನೇರಿ ಹಾರಿದರೂ I ಸಮುದ್ರ ಕಟ್ಟಕಡೆಗಳಲಿ ನಾ ಸೇರಿದರೂ II

10 ಅಲ್ಲೂ ನನ್ನ ನಡೆಸುವುದು ನಿನ್ನ ಕೈ I ನನ್ನ ಹಿಡಿದಿರುವುದು ನಿನ್ನ ಬಲಗೈ II

11 “ಕಾರ್ಗತ್ತಲೆನ್ನ ಕವಿಯಲಿ” ಎಂದರೂ I “ಸುತ್ತಲ ಬೆಳಕು ಇರುಳಾಗಲಿ” ಎಂದರೂ II

12 ಕತ್ತಲು ಕತ್ತಲಲ್ಲ ನಿನಗೆ I ಇರುಳೂ ಹಗಲಾಗಿದೆ ನಿನಗೆ I ಕತ್ತಲು, ಬೆಳಕು - ಒಂದೇ ನಿನಗೆ II

13 ನನ್ನ ಅಂತರಂಗವನು ಉಂಟುಮಾಡಿದಾತ ನೀನು I ತಾಯಗರ್ಭದಲೆ ನನ್ನ ರೂಪಿಸಿದಾತ ನೀನು II

14 ನಿನಗೆ ವಂದನೆ, ನೀ ನನ್ನ ಭಯಭಕ್ತಿಗೆ ಪಾತ್ರ I ನಿನ್ನ ಕೃತ್ಯಗಳು ಅದ್ಭುತಕರ ಹಾಗೂ ವಿಚಿತ್ರ I ನನ್ನ ಬಗ್ಗೆ ನಿನಗಿರುವ ಪೂರ್ಣ ಅರಿವು ಸಮರ್ಥ II

15 ನನ್ನ ಅಸ್ಥಿಪಂಜರವನು ರೂಪಿಸುವಾಗ I ತಾಯಗರ್ಭದೊಳು ಅಚ್ಚರದಿ ರಚಿಸುವಾಗ I ಗುಟ್ಟಾಗಿ ನಾನಲ್ಲಿ ಬೆಳೆಯುತ್ತಿದ್ದಾಗ I ಮರೆಯಾಗಿರಲಿಲ್ಲ ನಾನು ನಿನಗಾಗ II

16 ನಾನಿನ್ನೂ ಭ್ರೂಣವಾಗಿದ್ದಾಗ ನೋಡಿದವು ನಿನ್ನ ಕಣ್ಣುಗಳು I ಪ್ರಾರಂಭವಾಗುವುದಕ್ಕೆ ಮುನ್ನ ನನ್ನ ಆಯುಷ್ಕಾಲದ ದಿನಗಳು I ಲಿಖಿತವಾದವು ಅವುಗಳಲೊಂದೂ ತಪ್ಪದೆ ನಿನ್ನ ಪುಸ್ತಕದೊಳು II

17 ದೇವಾ, ನಿನ್ನ ಯೋಚನೆಗಳೆಷ್ಟು ಅಮೂಲ್ಯ I ಅವುಗಳೆಷ್ಟು ಅಸಂಖ್ಯ, ನನಗದೆಷ್ಟು ಅಗಣ್ಯ II

18 ಎಣಿಕೆಗೆ ಅವುಗಳ ಸಂಖ್ಯೆ ಸಮುದ್ರತೀರದ ಮರಳಿನಂತೆ I ಎಚ್ಚತ್ತು ಎಣಿಸಲೆತ್ನಿಸೆ ನಿನ್ನ ಮುಂದಿರುವೆ ಮುಂಚಿನಂತೆ II

19 ದೇವಾ, ದುಷ್ಟರನು ಸಂಹರಿಸಿಬಿಟ್ಟರೆ ಎಷ್ಟೋ ಉಚಿತ I ಕೊಲೆಪಾತಕರು ನನ್ನಿಂದ ತೊಲಗಿಹೋದರೆ ಎಷ್ಟೋ ಹಿತ II

20 ಅವರಾಡುವ ಮಾತುಗಳು ನಿನಗೆ ವಿರೋಧ I ಹಗೆಗಳನು ಎತ್ತಿಕ್ಕುವರು ನಿನಗೆ ವಿರುದ್ಧ II

21 ಪ್ರಭು, ನಿನ್ನ ದ್ವೇಷಿಗಳನು ನಾ ದ್ವೇಷಿಸದಿರುವೆನೆ? I ನಿನ್ನ ವಿರೋಧಿಗಳನ್ನು ನಾ ತಿರಸ್ಕಾರ ಮಾಡದಿರುವೆನೆ? II

22 ಹಗೆಮಾಡುವೆನವರನು ಸಂಪೂರ್ಣವಾಗಿ I ಭಾವಿಸುವೆನವರನು ನನ್ನ ವೈರಿಗಳನ್ನಾಗಿ II

23 ತಿಳಿದುಕೋ ದೇವಾ, ನನ್ನ ಹೃದಯವನು ಪರೀಕ್ಷಿಸಿ I ಅರಿತುಕೋ ನನ್ನ ಆಲೋಚನೆಗಳನು ಪರಿಶೋಧಿಸಿ II

24 ಕೇಡಿದೆಯೇ ನೋಡು ನನ್ನ ಮಾರ್ಗದಲಿ I ನಡೆಸೆನ್ನನು ಆ ಸನಾತನ ಪಥದಲಿ II

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು