Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 132 - ಕನ್ನಡ ಸತ್ಯವೇದವು C.L. Bible (BSI)


ಸನಾತನ ರಾಜವೈಭವದ ಪುನಃಸ್ಥಾಪನೆ
(ಯಾತ್ರಾಗಿತೆ)

1 ನೆನಸಿಕೋ ಹೇ ಪ್ರಭೂ, ದಾವೀದನನು I ಆತ ಸಹಿಸಿದ ಕಷ್ಟದುಃಖಗಳನು II

2 ಸ್ಮರಿಸಿಕೊ ಪ್ರಭೂ, ಆತನು ಮಾಡಿದ ಶಪಥವನು I ಯಕೋಬ್ಯ ಘನದೇವನಿಗಾತ ಕೊಟ್ಟ ಈ ಮಾತನು II

3 “ಪ್ರಭುವಿಗೆ ಆಲಯವೊಂದನು ನಿರ್ಮಿಸುವ ತನಕ I ಯಕೋಬ್ಯ ಘನದೇವನಿಗೆ ಗುಡಿ ಕಟ್ಟುವ ತನಕ II

4 ನಾ ಸೇರೆನು ನನ್ನರಮನೆಯನು I ನಾ ಏರೆನು ನನ್ನ ಶಯ್ಯೆಯನು II

5 ಮುಚ್ಚೆನು ನಾನು ಕಣ್ಣುಗಳನು I ಕೂಡಿಸೆನು ನಾನು ರೆಪ್ಪೆಗಳನು” II

6 ಮಂಜೂಷವನು ಕುರಿತು ಕೇಳಿದೆವು ಎಫ್ರಾತಾದಲಿ I ನಮಗದು ಕಾಣಬಂದಿತು ಆ ಯಹಾರ್ ಮೈದಾನದಲಿ II

7 ಹೋಗೋಣ ಬನ್ನಿರಿ ಆತನ ಮಂದಿರಕೆ I ಅಡ್ಡಬೀಳೋಣ ಆತನ ಪಾದಪೀಠಕೆ II

8 ಆಗಮಿಸು ಪ್ರಭು, ನಿನ್ನ ತೇಜೋ ಮಂಜೂಷದೊಡನೆ I ನಿನ್ನಾ ವಾಸಸ್ಥಾನವನು ಬಂದು ಸೇರು ಬೇಗನೆ II

9 ನೀತಿಭೂಷಿತರಾಗಲಿ ನಿನ್ನ ಯಾಜಕರು I ಆನಂದ ಘೋಷಮಾಡಲಿ ನಿನ್ನ ಭಕ್ತಜನರು II

10 ನಿನ್ನ ದಾಸ ದಾವೀದನ ಪ್ರಯುಕ್ತ I ತಳ್ಳಲ್ಪಡದಿರಲಿ ನಿನ್ನಾ ಅಭಿಷಿಕ್ತ II

11 ದಾವೀದನಿಗೆ ಪ್ರಭು ಆಣೆಯಿಟ್ಟು ಇಂತೆಂದ: I ಆಣೆಯಿಟ್ಟು ಕೊಟ್ಟಾ ಮಾತಿಗೆ ತಪ್ಪಲಾರನಾತ: I “ನಿನ್ನ ಸಿಂಹಾಸನದಲಿ ಕೂರಿಸುವೆನು ನಿನ್ನ ತನುಜನೊಬ್ಬನನು” II

12 “ನನ್ನ ನೇಮನಿಯಮಗಳನು ನಿನ್ನ ಮಕ್ಕಳು ಅನುಸರಿಸುವರಾದರೆ I ಕೂರುವರು ಸದಾಕಾಲ ಅವರ ಮಕ್ಕಳ ನಿನ್ನಾ ಸಿಂಹಾಸನದ ಮೇಲೆ” II

13 ಆರಿಸಿಕೊಂಡಿಹನು ಪ್ರಭು ಸಿಯೋನ್ ನಗರವನು I ಅಪೇಕ್ಷಿಸಿಹನು ತನ್ನ ನಿವಾಸಕ್ಕಾಗಿ ಅದನು II

14 “ಎಂದೆಂದಿಗು ಇದೇ ನನ್ನ ನಿವಾಸ I ಇರುವೆನಿಲ್ಲೇ, ಇದು ನನ್ನ ಅಭಿಲಾಶ II

15 ಇದಕ್ಕೊದಗಿಸುವೆನು ಧಾರಾಳ ಸಿರಿಸಂಪತ್ತನು I ಅನ್ನದಿಂದ ತೃಪ್ತಿಪಡಿಸುವೆನಿಲ್ಲಿಯ ದಲಿತರನು II

16 ಹೊದಿಸುವೆನಿದರ ಯಾಜಕರಿಗೆ ರಕ್ಷಣಾವಸ್ತ್ರವನು I ಸಾಧುಸಂತರು ಮಾಡುವರಿದರ ಹರ್ಷೋದ್ಗಾರವನು II

17 ಕೋಡೊಂದು ಮೂಡುವಂತೆ ಮಾಡುವೆ ದಾವೀದನಿಗಿಲ್ಲೆ I ನಂದಾದೀಪ ಬೆಳಗುವಂತೆ ಮಾಡುವೆ ನನ್ನ ಅಭಿಷಿಕ್ತನಿಗಿಲ್ಲೆ II

18 ತೊಡಿಸುವೆನು ಅವನ ವೈರಿಗಳಿಗೆ ಲಜ್ಜಾಕವಚವನು I ಮುಡಿಸುವೆನು ಅವನಿಗಾದರೋ ಪ್ರಜ್ವಲ ಕಿರೀಟವನು” II

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು