ಕೀರ್ತನೆಗಳು 129 - ಕನ್ನಡ ಸತ್ಯವೇದವು C.L. Bible (BSI)ತೊಲಗಲಿ ಶತ್ರು ಪೀಡೆ (ಯಾತ್ರಾಗೀತೆ) 1 ಯೌವನಾರಭ್ಯ ಶತ್ರುಕಾಡಿದ್ದು ಎಂತೆಂದು I ಇಸ್ರಯೇಲ್ ಜನಾಂಗ ವರದಿ ಮಾಡಲಿ ನಮಗಿಂದು II 2 ಯೌವನಾರಭ್ಯ ನನ್ನನು ಎನಿತೋ ಬಾಧಿಸಿಹರು I ನನ್ನ ಮೇಲಾದರೋ ಜಯಗಳಿಸಲಿಲ್ಲ ಅವರು II 3 ಉಳುವವರು ಎನ್ನ ಬೆನ್ನನೆ ಉತ್ತಿರುವರು I ಆಳವಾದ ಗಾಯಗೆರೆಗಳನ್ನು ಮಾಡಿಹರು II 4 ನಮ್ಮ ಪ್ರಭುವಾದರೋ ಸತ್ಯಸ್ವರೂಪನು I ಕಡಿದಿಹನು ದುರುಳರು ಹಾಕಿದ ಕಟ್ಟುಗಳನು II 5 ಸಿಯೋನನ್ನು ದ್ವೇಷಿಸುವ ಜನ I ಹಿಂದಿರುಗಲಿ ಪಡೆದು ಅಪಮಾನ II 6 ಅವರಾಗಲಿ ಮಾಳಿಗೆ ಮೇಲಿನ ಹುಲ್ಲಿನಂತೆ I ಒಣಗಿಹೋಗುವುದದು ಹೂ ಬಿಡುವುದಕ್ಕೆ ಮುಂಚೆ II 7 ತುಂಬುವುದಿಲ್ಲಾ ಕೊಯ್ಯುವವನ ಹಿಡಿಯು I ಅದರ ಸಿವುಡು ಕಟ್ಟುವವನಾ ಮಡಿಲು II 8 ‘ಪ್ರಭು ನಿನ್ನನು ಆಶೀರ್ವದಿಸಲಿ’ ಎಂಬ ಮಾತನ್ನಾಗಲಿ I ‘ಪ್ರಭು ನಾಮದಲಿ ನಿನಗೆ ಶುಭ’ ಎಂದಾಗಲಿ I ಹಾದುಹೋಗುವ ಜನಜಂಗುಳಿ ಅವರಿಗೆ ಹೇಳದಿರಲಿ” II |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India