ಕೀರ್ತನೆಗಳು 12 - ಕನ್ನಡ ಸತ್ಯವೇದವು C.L. Bible (BSI)ಸಂಕಟದಲಿ ಸಹಾಯ ಕೋರಿಕೆ 1 ನೆರವಾಗು ಪ್ರಭು, ಭಕ್ತರಿಲ್ಲವಾದರು ಜಗದೊಳು I ಶರಣರಾರೂ ಕಾಣಸಿಗರೆನಗೆ ನರಮಾನವರೊಳು II 2 ಹುಸಿಯ ನುಡಿವರು ನೆರೆಯವರೊಡನೆ ಪ್ರತಿಯೋರ್ವರು I ಕಪಟ ಮನದ ತುಟಿಮಾತಿನ ಸ್ತುತಿಗಾರರವರು II 3 ಕಪಟವಾಡುವ ತುಟಿಗಳನು ಪ್ರಭು ಕಡಿದುಬಿಡಲಿ I ಬಡಾಯಿಕೊಚ್ಚುವ ಜಿಹ್ವೆಯನು ಕತ್ತರಿಸಿಬಿಡಲಿ II 4 “ನಮ್ಮ ತುಟಿಗೆ ಹತೋಟಿ ಬೇಕಿಲ್ಲ; ನಾಲಗೆಯೇ ಗೆಲುವಿನ ಮೂಲ I ನಮಗೊಡೆಯನ ಅವಶ್ಯವಿಲ್ಲ” ಎಂದವರಾಡುವುದು ಸಲ್ಲ II 5 ಬಡವರ ಬವಣೆ ತಿಳಿಯಿತೆನಗೆ; ದಲಿತರ ನರಳಾಟ ಕೇಳಿಸಿತೆನಗೆ I ಎದ್ದು ಬರುವೆ, ಹಗೆಗಳಿಂದವರನು ಉದ್ಧರಿಸುವೆ” ಇದು ಪ್ರಭುವಿನ ಹೇಳಿಕೆ II 6 ಪ್ರಭುವಿನ ಈ ವಾಗ್ದಾನ ಪ್ರಮಾಣಬದ್ಧ I ಏಳ್ಮಡಿ ಪುಟಕ್ಕಿಟ್ಟ ಬೆಳ್ಳಿಯಷ್ಟು ಶುದ್ಧ II 7-8 ಅಲೆದಾಡುತಿಹರು ದುರುಳ ದ್ರೋಹಿಗಳು ಎಲ್ಲೆಡೆ I ದುಷ್ಟರಿಗಿದೆ ಮಾನವರ ನಡುವೆ ಪ್ರತಿಷ್ಟೆ II ನಮ್ಮನಿವರ ಕೈಯಿಂದ ತಪ್ಪಿಸಿ ಕಾಪಾಡು I ಹೇ ಪ್ರಭು, ನಮ್ಮನು ಸದಾ ಸುರಕ್ಷಿತವಾಗಿಡು II |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India