Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 119 - ಕನ್ನಡ ಸತ್ಯವೇದವು C.L. Bible (BSI)


“ಆಲೆಫ್” ದೈವಾಜ್ಞೆಯಲ್ಲಿ ಅಭಿಮಾನ
(ಹಿಬ್ರು ಅಕ್ಷರ ಕ್ರಮಾನುಸಾರ ವಿರಚಿತ ಕೀರ್ತನೆ)

1 ಪ್ರಭುವಿನ ಶಾಸ್ತ್ರಾನುಸಾರ ನಡೆದವರು ಧನ್ಯರು I ದೋಷರಹಿತ ಮಾರ್ಗದಲಿ ನಡೆವವರು ಧನ್ಯರು II

2 ಆತನ ಕಟ್ಟಳೆಗಳನ್ನು ಕೈಗೊಳ್ಳುವವರು ಧನ್ಯರು I ಮನಃಪೂರ್ವಕವಾಗಿ ಆತನನು ಅರಸುವವರು ಧನ್ಯರು II

3 ಅಕ್ರಮಗೈಯರು ಅಂಥವರಾರು I ಆತ ತೋರಿದ ಮಾರ್ಗದಲೆ ನಡೆವರು II

4 ನಿನ್ನ ನೇಮಗಳನು ಪ್ರಭೂ, ನೀನೆ ವ್ಯಕ್ತಪಡಿಸಿರುವೆಯಯ್ಯಾ I ಜಾಗರೂಕತೆಯಿಂದ ಪಾಲಿಸಬೇಕೆಂದು ನೀ ವಿಧಿಸಿರುವೆಯಯ್ಯಾ II

5 ನಿನ್ನ ನಿಬಂಧನೆಗಳ ಪಾಲನೆಯಲಿ I ಸ್ಥಿರತೆ ಇದ್ದರೆ ಒಳಿತು ನನ್ನ ಮನದಲಿ II

6 ಲಕ್ಷ್ಯ ಕೊಟ್ಟೆನಾದರೆ ನಿನ್ನೆಲ್ಲ ಆಜ್ಞೆಗಳಿಗೆ I ಆಸ್ಪದವಿರದು ಎನಗೆ ಪ್ರಭು, ಆಶಾಭಂಗಕೆ II

7 ನೀತಿಯುತ ನಿನ್ನ ವಿಧಿಗಳನು ಕಲಿಯುವೆನಯ್ಯಾ I ಯಥಾರ್ಥ ಹೃದಯದಿಂದ ನಿನ್ನ ಸ್ತುತಿಪೆನಯ್ಯಾ II

8 ನಿನ್ನ ನಿಬಂಧನೆಗಳನು ಅನುಸರಿಸುವೆನಯ್ಯಾ I ನನ್ನನೆಂದಿಗೂ, ಪ್ರಭು, ಕೈಬಿಡದಿರಯ್ಯಾ II


“ಬೆತ್” ದೈವಾಜ್ಞೆಗೆ ವಿಧೇಯತೆ

9 ನಡತೆಯಲಿ ಶುದ್ಧವಿರಲು ಯುವಜನಕೆ ಹೇಗೆ ಸಾಧ್ಯ? I ನಿನ್ನಯ ವಾಕ್ಯಾನುಸರಣೆಯಿಂದಲೆ ಅವರಿಗದು ಸಾಧ್ಯ II

10 ತುಂಬುಹೃದಯದಿಂದ ಹಂಬಲಿಸುತ್ತಿರುವೆನಯ್ಯಾ I ನಿನ್ನಾಜ್ಞೆಯಿಂದ ನಾ ತಪ್ಪದಂತೆ ಕಾಯಯ್ಯಾ II

11 ನಿನಗೆ ವಿರುದ್ಧ ನಾ ಪಾಪಮಾಡದಂತೆ I ನಿನ್ನಾ ನುಡಿಯನು ನನ್ನೆದೆಯಲ್ಲಿರಿಸಿದೆ II

12 ಸ್ತುತಿ ಸಲ್ಲಲಿ ಪ್ರಭು ನಿನಗೆ I ನಿನ್ನ ಆಜ್ಞೆಗಳನು ಕಲಿಸು ಎನಗೆ II

13 ಬಂದುವು ಆ ವಿಧಿಗಳು ನಿನ್ನ ಬಾಯಿಂದ I ವರ್ಣಿಸುವೆನು ಅವನ್ನು ನನ್ನ ಬಾಯಿಂದ II

14 ಸಿರಿಸಂಪತ್ತಿಗಿಂತ ಮಿಗಿಲಾಗಿ I ಆನಂದಿಪೆ ನಿನ್ನ ಮಾರ್ಗಿಯಾಗಿ II

15 ನನಗಿದೆ ನಿನ್ನ ನಿಯಮಗಳ ಧ್ಯಾನ I ನಿನ್ನ ಮಾರ್ಗಗಳಲ್ಲಿ ಗಾಢ ಗಮನ II

16 ನಿನ್ನ ನಿಯಮಗಳ ನೆನೆದು ನಲಿವೆನಯ್ಯಾ I ನಿನ್ನ ವಾಕ್ಯವನು ಮರೆಯಲಾರೆನಯ್ಯಾ II


“ಗಿಮೆಲ್” ದೈವಾಜ್ಞೆ ಆನಂದದಾಯಕ

17 ನಿನ್ನ ನುಡಿಯ ಕೇಳಿ ಬಾಳುವಂತೆ I ತೋರು ದಾಸನೆನಗೆ ಪ್ರಸನ್ನತೆ II

18 ನಿನ್ನ ಶಾಸ್ತ್ರದ ಮಹಿಮೆಯನು ಅರಿಯುವಂತೆ I ನನ್ನ ಕಣ್ಗಳಿಂದ ನೀ ತೆಗೆದುಬಿಡು ಅಂಧತೆ II

19 ಧರೆಯೊಳು ಪ್ರವಾಸಿಯಾಗಿ ನಾನಿರುವೆನಯ್ಯಾ I ನಿನ್ನಾಜ್ಞೆಗಳನು ನನಗೆ ಮರೆಮಾಡಬೇಡಯ್ಯಾ II

20 ನಿನ್ನ ವಿಧಿಗಳನೆ ಹಂಬಲಿಸುತಿರುವೆ ಅನುದಿನ I ಇದು ಕಾರಣ ಕರಗಿಹೋಗುತಿದೆ ಎನ್ನ ಚೇತನ II

21 ಶಾಪಗ್ರಸ್ತರು ನಿನ್ನ ಆಜ್ಞೆಗಳನು ಮೀರಿದವರು I ನಿನ್ನ ಧಿಕ್ಕಾರಕ್ಕೆ ಗುರಿಯಾಗುವರು ಆ ಗರ್ವಿಷ್ಠರು II

22 ನಿನ್ನ ಕಟ್ಟಳೆಗಳನು ಕೈಗೊಂಡು ನಡೆವವನು ನಾನು I ನನಗಿರುವ ನಿಂದಾಪಮಾನಗಳನು ತೊಲಗಿಸು ನೀನು II

23 ಒಳಸಂಚು ಮಾಡುತ್ತಿದ್ದರು ಒಡೆಯರು ಎನಗೆದುರಾಗಿ I ದಾಸ ನಾನಿರುವೆ ನಿನ್ನ ಆಜ್ಞೆಗಳಲೆ ಮಗ್ನನಾಗಿ II

24 ನಿನ್ನಾಜ್ಞೆಯು ಆನಂದದಾಯಕ I ಅವೇ ನನಗೆ ಮಂತ್ರಾಲೋಚಕ II


“ದಾಲಿತ್” ದೈವಾಜ್ಞೆಯಂತೆ ನಡೆಯಲು ಪ್ರತಿಜ್ಞೆ

25 ನನ್ನ ಪ್ರಾಣ ಸೊರಗಿ ಸುಣ್ಣವಾಗಿದೆಯಯ್ಯಾ I ನಿನ್ನ ವಾಕ್ಯಾನುಸಾರ ಉಜ್ಜೀವಗೊಳಿಸಯ್ಯಾ II

26 ನನ್ನ ಗತನಡತೆಯನು ಕೇಳಿ ಸದುತ್ತರಿಸಿದೆಯಯ್ಯಾ I ನಿನ್ನ ನಿಬಂಧನೆಗಳನೀಗ ನನಗೆ ಉಪದೇಶಿಸಯ್ಯಾ II

27 ನಿನ್ನ ನಿಯಮಗಳ ಪಥವನೆನಗೆ ತಿಳಿಯಪಡಿಸಯ್ಯಾ I ನಿನ್ನ ಅದ್ಭುತಕಾರ್ಯಗಳನು ನಾ ಧ್ಯಾನಿಸುವೆನಯ್ಯಾ II

28 ದುಃಖದಿಂದ ಸೊರಗಿಹೋಗಿದೆ ಎನ್ನಮನ I ನಿನ್ನ ವಾಕ್ಯಾನುಸಾರ ನೀಡು ಸಾಂತ್ವನ II

29 ಮಿಥ್ಯಮಾರ್ಗವನು ನನಗೆ ದೂರಮಾಡಯ್ಯಾ I ಧರ್ಮಶಾಸ್ತ್ರವನು ಎನಗೆ ಅನುಗ್ರಹಿಸಯ್ಯಾ II

30 ಆರಿಸಿಕೊಂಡಿರುವೆನು ನಾನು ಸತ್ಯಮಾರ್ಗವನು I ಇರಿಸಿಕೊಂಡಿಹೆನು ಕಣ್ಮುಂದೆ ನಿನ್ನ ವಿಧಿಗಳನು II

31 ಅಂಟಿಕೊಂಡಿರುವೆನು ನಿನ್ನ ಕಟ್ಟಳೆಗಳಿಗೆ I ಆಶಾಭಂಗಪಡಿಸಬೇಡ ಪ್ರಭು ನನಗೆ II

32 ಹಿಡಿದಿರುವೆನು ನಿನ್ನ ಆಜ್ಞಾಮಾರ್ಗವನು I ಏಕೆನೆ ಹಿರಿದಾಗಿಸಿರುವೆ ನೀ ನನ್ನ ಅರಿವನು II


“ಹೇ” ಜ್ಞಾನೋದಯಕ್ಕಾಗಿ‍ ಪ್ರಾರ್ಥನೆ

33 ನಿನ್ನ ನಿಬಂಧನೆಯನು, ಪ್ರಭು, ಕಲಿಸೆನಗೆ I ಅದರಂತೆಯೇ ನಡೆಯುವೆನು ಕಡೆಯವರೆಗೆ II

34 ನೀಡೆನಗೆ ನಿನ್ನ ಶಾಸ್ತ್ರದ ಅರಿವನು I ಪೂರ್ಣಮನದಿಂದ ಆಚರಿಸುವೆನದನು II

35 ಎನ್ನ ನಡೆಸು ನಿನ್ನ ಆಜ್ಞಾಮಾರ್ಗದಲಿ I ಪಡೆಯುವೆ ಹರ್ಷಾನಂದವನು ಅದರಲಿ II

36 ತಿರುಗಿಸೆನ್ನ ಮನವ ನಿನ್ನ ಕಟ್ಟಳೆಯ ಕಡೆ I ಲಾಭಲೋಭದತ್ತ ಅದು ಸರಿಯದಂತೆ ತಡೆ II

37 ವ್ಯರ್ಥವಾದವುಗಳು ನಾಟದಿರಲಿ ಕಣ್ಗೆ I ಚೇತನ ನೀಡು ನಿನ್ನ ಮಾರ್ಗದಲಿ ನನಗೆ II

38 ಭಯಭಕ್ತ ಜನತೆಗೆ ನೀನಿತ್ತಾ ಮಾತು I ದಾಸನಾದ ನನ್ನಲಿ ನೆರವೇರಲಿ ಇಂತು II

39 ತೊಲಗಲಿ ನಾನಂಜುವ ಅಪಮಾನವು I ನಿನ್ನ ವಿಧಿಗಳು ನನಗೆ ಹಿತಕರವಾದುವು II

40 ನಿನ್ನ ನಿಬಂಧನೆಗಳ ಅಭಿಮಾನಿಯು ನಾನು I ನೀತಿಗನುಸಾರ ಚೇತನಗೊಳಿಸೆನ್ನ ನೀನು II


“ವಾವ್” ದೈವಾಜ್ಞೆಯಲಿ ನಂಬಿಕೆ

41 ದೊರಕಲಿ ಪ್ರಭು ನನಗೆ ನಿನ್ನ ಕರುಣೆ I ನೀನು ವಾಗ್ದಾನಮಾಡಿದಾ ರಕ್ಷಣೆ II

42 ಕೊಡುವೆನಾಗ ಸದುತ್ತರವನು ನಿಂದಕನಿಗೆ I ಕಾರಣ, ನಿನ್ನ ವಾಕ್ಯದಲೆ ಇದೆ ನನಗೆ ನಂಬಿಕೆ II

43 ತೆಗೆಯಬೇಡ ನನ್ನ ಬಾಯಿಂದ ಸತ್ಯವನು I ನಂಬಿಕೊಂಡಿರುವೆ ನಿನ್ನ ನ್ಯಾಯವಿಧಿಯನು II

44 ಸತತ ನಿನ್ನ ಧರ್ಮಶಾಸ್ತ್ರವನು ಕೈಗೊಳ್ಳುವೆ I ಯುಗಯುಗಾಂತರಕು ಅದನು ಪರಿಪಾಲಿಸುವೆ II

45 ನಿನ್ನ ನಿಯಮದಂತೆ ಬಾಳಲು ಯತ್ನಿಸಿದೆ I ಎಂತಲೇ, ಆತಂಕವಿಲ್ಲದೆ ನಡೆದೆ II

46 ಮಾತಾಡುವೆನು ನಿನ್ನ ಆಜ್ಞೆಗಳ ವಿಷಯವಾಗಿ I ಅರಸುಗಳ ಮುಂದೆಯು ನಿಸ್ಸಂಕೋಚವಾಗಿ II

47 ನಿನ್ನ ಆಜ್ಞೆಗಳಲ್ಲಿದೆ ನನಗಾನಂದ I ಅವುಗಳ ಮೇಲೆಯೆ ನನಗಭಿಮೋದ II

48 ನಾ ಕೈಯೊಡ್ಡಿ ಕೇಳುವುದು ನಿನ್ನ ಆಜ್ಞೆಗಳನೆ I ನನಗೆ ಪ್ರಿಯ, ಧ್ಯಾನಾರ್ಹ, ನಿನ್ನ ನಿಬಂಧನೆ II


“ಜಾಯಿನ್” ದೈವಾಜ್ಞೆಯ ಪಾಲನೆ-ಸಂತುಷ್ಟ ಸಂಭಾವನೆ

49 ಸ್ಮರಿಸಿಕೋ ದಾಸನೆನಗೆ ನೀನಿತ್ತಾ ಮಾತನು I ಹುಟ್ಟಿಸಿರುವೆ ನನ್ನೊಳು ನಂಬಿಕೆ, ನಿರೀಕ್ಷೆಗಳನು II

50 ನಿನ್ನ ನುಡಿ ತರುತ್ತದೆನಗೆ ನವಚೇತನ I ಆಪತ್ಕಾಲದಲಿ ನನಗದೇ ಸಾಂತ್ವನ II

51 ಹಾಸ್ಯ ಅಪಹಾಸ್ಯ ಮಾಡಿದರು ಗರ್ವಿಷ್ಠರೆನ್ನನು I ಆದರೂ ನಾ ಬಿಡಲಿಲ್ಲ ನಿನ್ನ ಧರ್ಮಶಾಸ್ತ್ರವನು II

52 ನಿನ್ನ ಪ್ರಾಚೀನ ವಿಧಿಗಳ ಜ್ಞಾಪನ I ತರುತ್ತದೆನಗೆ ಹೇ ಪ್ರಭೂ, ಸಾಂತ್ವನ II

53 ನಿನ್ನ ಶಾಸ್ತ್ರದ ಭ್ರಷ್ಠರನು ಕಂಡಾಗ I ನನಗೆ ಬರುತ್ತದೆ ಕೋಪೋದ್ರೇಕ II

54 ನನ್ನೀ ಬಾಳ ಪ್ರವಾಸ ಮಂದಿರದೊಳು I ಗಾನವಾದುವು ನಿನ್ನಾನಿಬಂಧನೆಗಳು II

55 ರಾತ್ರಿಯೊಳೂ ಮಾಡಿದೆ ನಿನ್ನ ನಾಮಸ್ಮರಣೆಯನು I ಕೈಗೊಂಡೆನು ಹೇ ಪ್ರಭೂ, ನಿನ್ನ ಧರ್ಮಶಾಸ್ತ್ರವನು II

56 ಈ ನಿನ್ನ ನಿಯಮಗಳ ಪಾಲನೆ I ನನ್ನ ಪಾಲಿಗದು ಸಂಭಾವನೆ II


“ಹೇತ್” ಬೇಕು ದೈವಾಜ್ಞೆಯ ಬೋಧೆ

57 ಹೇ ಪ್ರಭು, ನೀನೇ ನನ್ನ ಪಾಲಿನ ಸ್ವಾಸ್ತ್ಯ I ನಿನ್ನ ವಾಕ್ಯದ ಪಾಲನೆಯೆ ನಾಗೈದ ನಿರ್ಣಯ II

58 ನಿನ್ನ ಕರುಣೆಯನು ಕೋರಿದೆನು ಮನಸಾರ I ಪ್ರಸನ್ನನಾಗು ನನಗೆ ನಿನ್ನ ನುಡಿಗನುಸಾರ II

59 ನನ್ನಯ ನಡತೆಯನು ಪರಿಶೋಧಿಸುತ್ತ I ತಿರುಗಿಕೊಂಡೆನು ನಿನ್ನ ಕಟ್ಟಳೆಯತ್ತ II

60 ನಿನ್ನ ಆಜ್ಞೆಯನು ನಾನು ಅನುಸರಿಸುವಲ್ಲಿ I ಆಲಸಿಯಲ್ಲ, ಆಸಕ್ತ ನಾನು ಅದರಲ್ಲಿ II

61 ದುರ್ಜನರ ಪಾಶಗಳು ಸುತ್ತಿಕೊಂಡಿವೆ ನನ್ನನು I ಆದರು ನಾ ಮರೆಯಲಿಲ್ಲ ನಿನ್ನ ಧರ್ಮಶಾಸ್ತ್ರವನು II

62 ನ್ಯಾಯಯುತ ನಿನ್ನ ವಿಧಿಗೋಸ್ಕರ ವಂದಿಸಲು I ನಾನು ಎಚ್ಚರಗೊಳ್ಳುವೆ ಮಧ್ಯರಾತ್ರಿಯೊಳು II

63 ಗೆಳೆಯ ನಾನು ನಿನ್ನಲಿ ಭಯಭಕ್ತಿಯುಳ್ಳವರಿಗೆ I ನಿನ್ನ ನಿಯಮಗಳ ಕೈಗೊಂಡು ನಡೆಯುವವರಿಗೆ II

64 ಪ್ರಭು, ನಿನ್ನಚಲ ಪ್ರೀತಿಯಿಂದ ಜಗ ತುಂಬಿದೆ I ನೀಡೆನಗೆ ಪ್ರಭು, ನಿನ್ನ ನಿಬಂಧನೆಗಳ ಬೋಧೆ II


“ತೆತ್” ಕಷ್ಟಾನುಭವ ಕಲಿಸಿದ ದೈವಾಜ್ಞೆ

65 ಹೇ ಪ್ರಭೂ, ನಿನ್ನ ವಾಗ್ದಾನದ ಪ್ರಕಾರ I ಮಾಡಿದೆ ನಿನ್ನ ದಾಸನಿಗೆ ಮಹೋಪಕಾರ II

66 ಸುಜ್ಞಾನ ವಿವೇಕಗಳನು ಕಲಿಸೆನಗೆ I ನಿನ್ನಾಜ್ಞೆಗಳಲಿ ನನಗಿದೆ ನಂಬಿಕೆ II

67 ಕಷ್ಟಾನುಭವಕೆ ಮುಂಚೆ ದಾರಿತಪ್ಪಿ ನಡೆದೆ I ಆದರೀಗ ನಡೆಯುತ್ತಿರುವೆ ನಿನ್ನ ನುಡಿಯಂತೆ II

68 ಒಳ್ಳೆಯವ, ಒಳ್ಳೆಯದ ಗೈಕೊಳ್ಳುವ ನೀನು I ಬೋಧಿಸೆನಗೆ ನಿನ್ನಾ ನಿಬಂಧನೆಗಳನು II

69 ಸುಳ್ಳು ಕಲ್ಪಿಸಿಹರಾ ಗರ್ವಿಗಳು ನಿನಗೆ ವಿರುದ್ಧವಾಗಿ I ನಾನೋ ಪಾಲಿಪೆ ನಿನ್ನ ನಿಯಮಗಳನು ಹೃತ್ಪೂರ್ವಕವಾಗಿ II

70 ಕೊಬ್ಬಿನಂತೆ ಆ ಜನರ ಹೃದಯ ಮಂದ I ನಿನ್ನ ಧರ್ಮಶಾಸ್ತ್ರವೇ ನನಗಾನಂದ II

71 ಕಷ್ಟಾನುಭವವೂ ಆಯಿತೆನಗೆ ಹಿತಕರ I ಅದು ತಂದಿತು ನಿನ್ನ ನಿಬಂಧನೆಗಳೆಚ್ಚರ II

72 ಸಾವಿರಾರು ಚಿನ್ನಬೆಳ್ಳಿ ನಾಣ್ಯಗಳಿಗಿಂತ I ನಿನ್ನ ಬಾಯಿಂದ ಬಂದ ಧರ್ಮಶಾಸ್ತ್ರ ಉಚಿತ II


“ಯೋದ್” ನ್ಯಾಯಬದ್ಧ ದೈವಾಜ್ಞೆ

73 ನನ್ನನು ನಿರ್ಮಿಸಿ ರೂಪಿಸಿವೆ ನಿನ್ನ ಕೈಗಳು I ನೀಡು ಬುದ್ಧಿಯನು ನಿನ್ನಾಜ್ಞೆಗಳನು ಕಲಿಯಲು II

74 ನಿನ್ನಾ ವಾಕ್ಯದಲಿ ನಾನಿತ್ತ ನಿರೀಕ್ಷೆಯಿಂದ I ಭಯಭಕ್ತಿಯುಳ್ಳವನು ನೋಡಿ ಪಡೆದನು ಆನಂದ II

75 ನಾ ಬಲ್ಲೆ ಪ್ರಭು, ನಿನ್ನ ವಿಧಿಗಳು ನೀತಿಯುತವೆಂದು I ಕಷ್ಟಕೆ ನನ್ನನು ಗುರಿಪಡಿಸಿರುವುದು ಉಚಿತವೆಂದು II

76 ನಿನ್ನ ದಾಸನಿಗೆ ನೀನು ನುಡಿದ ಪ್ರಕಾರ I ಸಾಂತ್ವನ ನೀಡಲಿ ನನಗೆ ನಿನ್ನಚಲ ಒಲವರ II

77 ನಾ ಬದುಕುವಂತೆ ತೋರೆನಗೆ ನಿನ್ನ ದಯ I ನಿನ್ನ ಧರ್ಮಶಾಸ್ತ್ರ ನನಗೆ ಪರಮಪ್ರಿಯ II

78 ನನಗೆ ಕೇಡು ಬಗೆದ ಗರ್ವಿಗಳಿಗಾಗಲಿ ಮಾನಭಂಗ I ನಾನಾದರೋ ಗೈವೆ ನಿನ್ನ ನೇಮಗಳ ಧ್ಯಾನಯೋಗ II

79 ನನ್ನತ್ತ ಬರಲಿ ನಿನ್ನಲಿ ಭಯಭೀತಿಯುಳ್ಳವರು I ನಿನ್ನ ಕಟ್ಟಳೆಗಳನು ಆಗ ಕಲಿತುಕೊಳ್ಳುವರು II

80 ನಿನ್ನ ನಿಬಂಧನೆಗಳಲಿ ಸ್ಥಿರವಿದೆ ಎನ್ನ ಮನ I ನನಗೆ ಒದಗದು ಆಗ ಆಶಾಭಂಗ, ಅವಮಾನ II


“ಕಾಫ್” ದೈವಾಜ್ಞೆ ತರುವ ಮುಕ್ತಿ

81 ಮನಗುಂದಿರುವೆ ನಾ ಮುಕ್ತಿಯ ಬಯಕೆಯಲೆ I ನಂಬಿಕೆಯನು ಇಟ್ಟಿರುವೆ ನಿನ್ನ ವಾಕ್ಯದಲೆ II

82 ನಿನ್ನ ವಾಗ್ದಾನದ ನಿರೀಕ್ಷೆಯಲೆ ನನ್ನ ಕಣ್ಣು ಸೊರಗಿವೆ I “ನನಗೆಂದು ನೀಡುವೆ ಸಾಂತ್ವನ?” ಎಂದು ನಾ ಕೇಳುತ್ತಿರುವೆ II

83 ಬೆಂಕಿಗೆ ಬಿಸಾಡಿದ ಒಣ ಬುದ್ಧಲಿಯಂತಾದೆ I ಆದರೂ ನಿನ್ನ ನಿಬಂಧನೆಗಳನ್ನು ಮರೆಯದಿದ್ದೆ II

84 ನಿನ್ನ ದಾಸ ನಾನೆಷ್ಟು ದಿನ ಕಾದಿರಬೇಕಯ್ಯಾ I ನನ್ನ ಹಿಂಸಕರಿಗೆಂದು ಶಿಕ್ಷೆ ವಿಧಿಸುವೆಯಯ್ಯಾ? II

85 ಗುಂಡಿ ಅಗೆದಿಹರು ಎನಗೆ ಗರ್ವಿಷ್ಠರು I ಧರ್ಮಶಾಸ್ತ್ರ ಪಾಲಿಸದ ಆ ದುರುಳರು II

86 ನಿನ್ನ ಆಜ್ಞೆಗಳೆಲ್ಲ ನಂಬಲರ್ಹವಾದುವಯ್ಯಾ I ನಿಷ್ಕಾರಣವಾಗಿ ಹಿಂಸಿಸುತಿಹರು, ನೆರವಾಗಯ್ಯಾ II

87 ಅಳಿಸಿಹಾಕಲು ನೋಡಿದರು ಇಳೆಯಿಂದೆನ್ನನು I ಆದರು ಉಳಿಸಿಕೊಂಡೆನು ನಿನ್ನ ನಿಯಮಗಳನು II

88 ನಿನ್ನಚಲ ಪ್ರೀತಿಗನುಸಾರ ಚೈತನ್ಯಗೊಳಿಸೆನ್ನನು I ಕೈಗೊಳ್ಳುವೆನಾಗ ನಿನ್ನ ಬಾಯುಸುರಿದ ಕಟ್ಟಳೆಗಳನು II


“ಲಾಮೆದ್” ದೈವಾಜ್ಞೆಯು ಅಪರಿಮಿತ

89 ಹೇ ಪ್ರಭು, ನಿನ್ನ ವಾಕ್ಯ ಶಾಶ್ವತ I ಪರಲೋಕದಲಿ ಅದು ಚಿರ ಶಾಶ್ವತ II

90 ಇರುವುದು ತಲತಲಾಂತರಕು ನಿನ್ನ ಸತ್ಯತೆ I ನೀ ಸ್ಥಾಪಿಸಿದ ಭೂಮಂಡಲಕ್ಕಿದೆ ಸ್ಥಿರತೆ II

91 ನಿನ್ನ ವಿಧಿಗನುಸಾರ ಅವು ಇಂದಿಗೂ ಉಳಿದಿವೆ I ಏಕೆನೆ, ಸರ್ವವೂ ಮಾಡುತಿವೆ ನಿನಗೆ ಸೇವೆ II

92 ನಿನ್ನ ಧರ್ಮಶಾಸ್ತ್ರವು ನೀಡಿರದಿದ್ದರೆ ನನಗೆ ಸಂತಸ I ನನಗೊದಗಿದ ವಿಪತ್ತಿನಲೆ ನಾ ಹೊಂದುತ್ತಿದ್ದೆ ವಿನಾಶ II

93 ಮರೆಯೆ ನಾನೆಂದಿಗೂ ನಿನ್ನ ನಿಯಮಗಳನು I ಅವುಗಳಿಂದಲೇ ನನಗಿತ್ತೆ ನವಜೀವನವನು II

94 ಉದ್ಧರಿಸೆನ್ನನು, ನಾನು ನಿನ್ನವನು I ನಿನ್ನ ನಿಯಮಗಳಲೇ ಆಸಕ್ತನು II

95 ಹೊಂಚುಹಾಕುತಿಹರು ದುರುಳರು ಸಂಹರಿಸಲೆನ್ನನು I ನಾನೋ ನಿನ್ನ ಕಟ್ಟಳೆಗಳನು ಲಕ್ಷಿಸುತ್ತಿರುವೆನು II

96 ನಾ ಬಲ್ಲೆ ಸರ್ವಸಂಪೂರ್ಣತೆಗೂ ಮಿತಿ ಉಂಟೆಂದು I ನಿನ್ನ ಆಜ್ಞೆಗಳಾದರೋ ಅಪರಿಮಿತವಾದುವೆಂದು II


“ಮೆಮ್” ದೈವಾಜ್ಞೆಯ ಅಭಿಮಾನಿ

97 ನಿನ್ನ ಧರ್ಮಶಾಸ್ತ್ರ ನನಗೆನಿತೋ ಪ್ರಿಯ I ನಾನದರಲೇ ದಿನವೆಲ್ಲಾ ಧ್ಯಾನಮಯ II

98 ನಿನ್ನಾಜ್ಞೆಗಳು ಸದಾ ನನ್ನೊಂದಿಗಿರುವುದರಿಂದ I ನಾನಧಿಕ ಬುದ್ಧಿವಂತ ನನ್ನ ಶತ್ರುಗಳಿಗಿಂತ II

99 ನಿನ್ನ ಕಟ್ಟಳೆಗಳ ಧ್ಯಾನಿ ನಾನಾದುದರಿಂದ I ನಾನಧಿಕ ಜ್ಞಾನಿ ನನ್ನ ಬೋಧಕರೆಲ್ಲರಿಗಿಂತ II

100 ನಿನ್ನ ನಿಯಮಗಳನು ಕೈಗೊಂಡುದರಿಂದ I ನಾನಧಿಕ ವಿವೇಕಿ ಗುರುಹಿರಿಯರಿಗಿಂತ II

101 ನಿನ್ನ ವಾಕ್ಯವನು ಅನುಸರಿಸುವ ಧ್ಯೇಯದಿಂದ I ನನ್ನ ಹೆಜ್ಜೆಗಳನು ತಡೆದೆನು ದುರ್ಮಾರ್ಗದಿಂದ II

102 ತಪ್ಪಿಸಿಕೊಳ್ಳಲಿಲ್ಲ ನಾ ನಿನ್ನ ವಿಧಿಗಳಿಂದ I ನೀನೇ ನನಗದರ ಬೋಧನೆ ಮಾಡಿದ್ದರಿಂದ II

103 ನಿನ್ನ ನುಡಿ ಎನಿತೊ ರುಚಿ ನನ್ನ ನಾಲಿಗೆಗೆ I ಜೇನುತುಪ್ಪಕ್ಕಿಂತ ಸಿಹಿ ನನ್ನ ಬಾಯಿಗೆ II

104 ವಿವೇಕಿಯಾದೆನು ನಿನ್ನ ನಿಯಮಗಳ ಮೂಲಕ I ದ್ವೇಷಿಸುತಿಹೆನು ಪ್ರತಿಯೊಂದು ಮಿಥ್ಯಾ ಮಾರ್ಗ II


“ನೂನ್” ದೈವಾಜ್ಞೆ - ಬಾಳಿಗೆ ದಾರಿದೀಪ

105 ನಿನ್ನ ವಾಕ್ಯ ನನಗೆ ದಾರಿದೀಪ I ನನ್ನ ಕಾಲಿನ ನಡೆಗೆ ಕೈದೀಪ II

106 ನಡೆದುಕೊಳ್ಳುವೆನು ಶಪಥ ಮಾಡಿರುವಂತೆ I ನಿನ್ನ ನೀತಿವಿಧಿಗಳನು ಪಾಲಿಪೆನು ಅದರಂತೆ II

107 ಕುಗ್ಗಿಹೋಗಿರುವೆನು ಪ್ರಭು ಅತ್ಯಧಿಕವಾಗಿ I ಚೇತನಗೊಳಿಸು ನಿನ್ನ ವಾಕ್ಯಾನುಸಾರವಾಗಿ II

108 ಸ್ವೀಕರಿಸು ನಾನು ಉಸುರುವ ಸ್ತುತಿಯರ್ಪಣೆಯನು I ಪ್ರಭೂ, ನನಗೆ ಕಲಿಸು ನಿನ್ನ ವಿಧಿನಿಯಮಗಳನು II

109 ಕೈಯಲಿ ಜೀವ ಹಿಡಿದು ಕಳೆಯುತಿರುವೆ ಕಾಲವೆಲ್ಲ I ಆದರೂ ಪ್ರಭು, ನಾ ಧರ್ಮಶಾಸ್ತ್ರವನು ಮರೆತಿಲ್ಲ II

110 ಒಡ್ಡಿಹರು ಎನಗೆ ಆ ದುರುಳ ಜನರು ಬಲೆಯನು I ಆದರೂ ಮೀರಿಲ್ಲ ನಾನು ನಿನ್ನ ನಿಯಮಗಳನು II

111 ಹೃದಯಾನಂದಕರ ನಿನ್ನ ಕಟ್ಟಳೆಗಳು I ನನಗಮರ ಸ್ವಾಸ್ತ್ಯವಾದುವುವು ಅವುಗಳು II

112 ಮನಸ್ಸುಮಾಡಿರುವೆ ಸದಾ ಕೈಗೊಂಡು ನಡೆಯಲು I ಜೀವಮಾನವೆಲ್ಲ ನಿನ್ನ ನಿಬಂಧನೆಗಳನು II


“ಸಾಮೆಖ್” ದೈವಾಜ್ಞೆ ನನಗಾಶ್ರಯ

113 ದ್ವೇಷವಿದೆ ಎನಗೆ ದ್ವಿಮನಸ್ಕರಲಿ I ಪ್ರೀತಿ ಇದೆ ನಿನ್ನ ಧರ್ಮಶಾಸ್ತ್ರದಲಿ II

114 ನನ್ನಾಶ್ರಯವೂ ಕವಚವೂ ನೀನೇ I ನಿರೀಕ್ಷಿಸುತಿರುವೆ ನಿನ್ನ ವಾಕ್ಯವನೆ II

115 ತೊಲಗು ನನ್ನಿಂದ ದುರುಳ ಜನಾಂಗವೆ I ದೈವಾಜ್ಞೆಗಳನು ನಾನು ಪಾಲಿಸುವೆ II

116 ನಿನ್ನ ನುಡಿಗನುಸಾರ ಉದ್ಧರಿಸು, ನಾ ಬದುಕುವೆ I ನಿರಾಶೆಗೊಳಿಸಬೇಡ ನಾ ನಿರೀಕ್ಷಿಸುತ್ತಿರುವೆ II

117 ನನಗಾಧಾರವಾಗಿರು ಸುರಕ್ಷಿತನಾಗಿರುವೆ I ನಿನ್ನಾ ನಿಬಂಧನೆಗಳಿಗೆ ಸದಾ ಗಮನ ಕೊಡುವೆ II

118 ನಿಬಂಧನೆ ಮೀರಿದವರನು ತಿರಸ್ಕರಿಸುತಿ I ವ್ಯರ್ಥವಾದುದಾ ಜನರು ಹೂಡುವ ಕುಯುಕ್ತಿ II

119 ಲೋಕದ ದುರುಳರನ್ನೆಲ್ಲಾ ಕಸದಂತೆ ಪರಿಗಣಿಸುತ್ತೀ I ಎಂತಲೇ, ನಿನ್ನಾ ಕಟ್ಟಳೆಯಲ್ಲಿದೆ ನನಗೆ ಆಸಕ್ತಿ II

120 ನಡುಗುತ್ತಿದೆ ದೇಹ ನಿನ್ನ ಭಯದಿಂದ I ಬಾಳಿದೆ ನಿನ್ನ ವಿಧಿಗಳ ಭೀತಿಯಿಂದ II


“ಆಯಿನ್” ದೈವಾಜ್ಞೆಯ ಮೌಲ್ಯ

121 ಕೈಗೊಳ್ಳುವೆ ನೀತಿಯುತ ನಿನ್ನಾ ವಿಧಿಗಳನು I ಬಲಾತ್ಕಾರಿಗಳಿಗೊಪ್ಪಿಸಬೇಡ ನನ್ನನ್ನು II

122 ಹೊಣೆಗಾರನಾಗು ನಿನ್ನ ದಾಸನ ಕ್ಷೇಮಕೆ I ಆ ಗರ್ವಿಗಳು ಬಾಧಕರಾಗದಿರಲಿ ನನಗೆ II

123 ಮಂದವಾಯಿತೆನ್ನ ನೇತ್ರ ನಿನ್ನ ರಕ್ಷಣೆಗಾಗಿ ಕಾಯುತ I ನೀತಿಯುತ ನಿನ್ನ ನುಡಿ ಈಡೇರುವುದನು ನಿರೀಕ್ಷಿಸುತ II

124 ಕೃಪೆಯಿಂದ ನಡೆಸು ನಿನ್ನ ದಾಸನನು I ಕಲಿಸೆನಗೆ ನಿನ್ನ ನಿಬಂಧನೆಗಳನು II

125 ನಿನ್ನ ದಾಸ ನಾನು, ದಯಪಾಲಿಸು ಎನಗೆ I ನಿನ್ನ ಕಟ್ಟಳೆಗಳನು ಅರಿವ ತಿಳುವಳಿಕೆ II

126 ಉಲ್ಲಂಘನೆಯಾಗಿದೆ ಪ್ರಭು, ನಿನ್ನ ಧರ್ಮಶಾಸ್ತ್ರ I ಸಮಯ ಬಂದೊದಗಿದೆ, ಆಗು ನೀನು ಕಾರ್ಯತತ್ಪರ II

127 ಚಿನ್ನ, ಅಪರಂಜಿಗಿಂತಲೂ ಪ್ರಿಯ I ನಿನ್ನ ಆಜ್ಞೆಗಳು ನನಗೆ ಸುಪ್ರಿಯ II

128 ನ್ಯಾಯವಾಗಿವೆ ನಿನ್ನ ನಿಯಮಗಳೆಲ್ಲ I ನನಗೆ ಹಗೆ ಮಿಥ್ಯಮಾರ್ಗಗಳೆಲ್ಲ II


“ಪೆ” ದೈವಾಜ್ಞೆ ಪಾಲನೆ

129 ಅಪೂರ್ವವಾದ ನಿನ್ನ ಕಟ್ಟಳೆಗಳನು I ಹೃತ್ಪೂರ್ವಕವಾಗಿ ನಾ ಪಾಲಿಪೆನು II

130 ತರುವುದು ನಿನ್ನ ವಾಕ್ಯೋಪದೇಶ I ಸರಳ ಜನರಿಗೆ ಜ್ಞಾನ ಪ್ರಕಾಶ II

131 ಬಾಯ್ದೆರೆದು ಹಾತೊರೆಯುತಿರುವೆ I ನಿನ್ನ ಆಜ್ಞೆಗಳನು ಅರಸುತಿರುವೆ II

132 ನಿನ್ನ ನಾಮಪ್ರಿಯರಿಗೆ ಮಾಡುವಂತೆ I ನನಗಭಿಮುಖನಾಗಿ ತೋರು ನೀ ಮಮತೆ II

133 ನಿನ್ನ ನುಡಿಗನುಸಾರ ದೃಢಪಡಿಸು ನನ್ನ ನಡತೆಯನು I ಕೆಡುಕೊಂದೂ ಅಧೀನಪಡಿಸದಿರಲಿ ನನ್ನನು II

134 ಜನಶೋಷಣೆಯಿಂದ ಮುಕ್ತಗೊಳಿಸೆನ್ನನು I ಕೈಗೊಳ್ಳುವೆನು ಆಗ ನಿನ್ನ ನಿಯಮಗಳನು II

135 ತೋರು ನಿನ್ನ ಮುಖದರ್ಶನ ಈ ದಾಸನಿಗೆ I ನೀ ಕಲಿಸು ನಿನ್ನ ನಿಬಂಧನೆಗಳನು ಎನಗೆ II

136 ನಿನ್ನ ಶಾಸ್ತ್ರವನು ಜನ ಪಾಲಿಸದ ಕಾರಣ I ಹರಿಯುತ್ತಿದೆ ಧಾರೆಯಾಗಿ ನನ್ನ ಕಣ್ಕಣ II


“ಸಾದ್ದಿ” ದೈವಾಜ್ಞೆ - ಶಾಶ್ವತ ಆಜ್ಞೆ

137 ಹೇ ಪ್ರಭೂ, ನೀನು ಸತ್ಯವಂತ I ನಿನ್ನ ವಿಧಿಯು ನ್ಯಾಯಸಮ್ಮತ II

138 ಸತ್ಯವಾದುವು ನೀನಿತ್ತ ಕಟ್ಟಳೆಗಳು I ಪೂರ್ಣವಿಶ್ವಾಸನೀಯವಾದುವು ಅವುಗಳು II

139 ಮರೆತುಬಿಟ್ಟರು ವಿರೋಧಿಗಳು ನಿನ್ನ ವಾಕ್ಯವನು I ಎಂತಲೆ ದಹಿಸುತಿದೆ ಧರ್ಮಾಸಕ್ತಿ ಎನ್ನನು II

140 ನಿನ್ನ ನುಡಿಯೊಂದೊಂದೂ ಪರಮ ಪರಿಶೋಧಿತ I ಅದರ ಮೇಲಿದೆ ನಿನ್ನ ದಾಸನಿಗೆ ಬಹುಮೋದ II

141 ನಾನಲ್ಪನು, ತಿರಸ್ಕಾರ ಹೊಂದಿದವನು I ಆದರೂ ಮರೆತಿಲ್ಲ ನಿನ್ನ ನೇಮಗಳನು II

142 ನಿನ್ನ ನೀತಿ ನಿತ್ಯ I ನಿನ್ನ ಶಾಸ್ತ್ರ ಸತ್ಯ II

143 ಎರಗಿವೆಯಾದರೂ ಕಷ್ಟ ಸಂಕಟಗಳು I ನನಗಾನಂದಾಯಕ ನಿನ್ನ ಆಜ್ಞೆಗಳು II

144 ನೀತಿಯುತ ಹಾಗೂ ಶಾಶ್ವತ ನಿನ್ನಾ ಶಾಸನ I ನಾ ಜೀವಿಸುವಂತೆ ದಯಪಾಲಿಸೆನಗೆ ಸುಜ್ಞಾನ II


“ಖೋಫ್” ಜೀವೋದ್ಧಾರಕನ ಆಜ್ಞೆ

145 ಸದುತ್ತರಿಸು ಮನಪೂರ್ವಕವಾಗಿ ಮೊರೆಯಿಡುವೆ I ನಿನ್ನ ನಿಬಂಧನೆಗಳನು ಪ್ರಭು, ಅನುಸರಿಸುವೆ II

146 ಉದ್ಧರಿಸೆನ್ನನು, ನಿನಗೆ ಮೊರೆಯಿಡುವೆ I ನಿನ್ನ ಕಟ್ಟಳೆಗಳನು ಕೈಗೊಳ್ಳುವೆ II

147 ಅರುಣೋದಯದಲೆದ್ದು ಮೊರೆಯಿಟ್ಟೆನು I ನಿನ್ನ ವಾಕ್ಯದಲೆ ನಂಬಿಕೆಯಿಟ್ಟೆನು II

148 ನಿನ್ನ ನುಡಿಯನು ಧ್ಯಾನಿಸಬೇಕೆಂದೇ I ಎಚ್ಚರಗೊಳ್ಳುವೆ ಇರುಳಿನ ಜಾವಕೆ ಮುಂದೆ II

149 ಪ್ರೀತಿಯಿಂದ ಹೇ ಪ್ರಭೂ, ಕೇಳೆನ್ನ ಮೊರೆಯನು I ನಿನ್ನ ವಿಧಿಗನುಸಾರ ಚೇತನಗೊಳಿಸೆನ್ನನು II

150 ದುಷ್ಕರ್ಮಿಗಳು ಬಂದಿಹರೆನ್ನ ಸಮೀಪಕ್ಕೆ I ದೂರವಿರುವರು ಅವರು ನಿನ್ನ ಧರ್ಮಶಾಸ್ತ್ರಕೆ II

151 ಹೇ ಪ್ರಭೂ, ನೀನಿರುವೆ ಹತ್ತಿರ I ನಿನ್ನ ಆಜ್ಞೆಗಳೆಲ್ಲ ಸುಸ್ಥಿರ II

152 ಸ್ಥಾಪಿಸಿರುವೆ ನಿನ್ನ ಕಟ್ಟಳೆಗಳನು ಶಾಶ್ವತವಾಗಿ I ಮೊದಲಿಂದಲೇ ಇದನರಿತೆ ನಾನವುಗಳ ಮೂಲಕವಾಗಿ II


“ರೇಷ್” ಸತ್ಯವೇ ದೈವಾಜ್ಞೆಯ ಸಾರಾಂಶ

153 ನನ್ನ ಕಷ್ಟವ ನೋಡಿ ಮುಕ್ತಗೊಳಿಸೆನ್ನನು I ಮರೆತಿಲ್ಲ ನಾನು ನಿನ್ನ ಧರ್ಮಶಾಸ್ತ್ರವನು II

154 ನನ್ನ ಪರ ವಾದಿಸಿ, ಬಿಡುಗಡೆ ಮಾಡು ಎನ್ನನು I ನಿನ್ನ ನುಡಿಗನುಸಾರ ಚೇತನಗೊಳಿಸು ನನ್ನನು II

155 ದೂರವಿದೆ ದುರುಳರಿಗೆ ಆ ಜೀವೋದ್ಧಾರ I ಅವರಿಗಿದೆ ನಿನ್ನ ನಿಬಂಧನೆಗಳ ತಾತ್ಸಾರ II

156 ನಿನ್ನ ಕೃಪಾಕಾರ್ಯಗಳು, ಹೇ ಪ್ರಭೂ, ಅಪಾರ I ಚೇತನಗೊಳಿಸೆನ್ನನು, ನಿನ್ನ ವಿಧಿಗಳಿಗನುಸಾರ II

157 ದ್ವೇಷಿಸಿದರು, ಹಿಂಸಿಸಿದರು, ಹಲವರು ನನ್ನನು I ಆದರೂ ಬಿಟ್ಟಿಲ್ಲ ನಾನು ನಿನ್ನ ಕಟ್ಟಳೆಗಳನು II

158 ಆ ದ್ರೋಹಿಗಳನು ಕಂಡಾಗ ಆಗುತಿದೆ ಅಸಹ್ಯ I ಏಕೆನೆ ನಿನ್ನ ನುಡಿಯಂತೆ ಅವರು ನಡೆಯರಯ್ಯಾ II

159 ನಿನ್ನ ನೇಮನಿಯಮಗಳು ಪ್ರಭು, ಎನಿತೋ ಪ್ರಿಯ I ಕಾಪಾಡೆನ್ನನು ನಿನ್ನ ಪ್ರೀತಿಗನುಸಾರ II

160 ಸತ್ಯವೇ ನಿನ್ನ ವಾಕ್ಯದ ಸಾರಾಂಶ I ನಿನ್ನಯ ನೀತಿವಿಧಿಗಳೆಲ್ಲವೂ ಅನಿಶ II


“ಷಿನ್” ದೈವಾಜ್ಞೆಯಿಂದ ನೆಮ್ಮದಿ

161 ಪೀಡಿಸುತಿಹರು ನಿಷ್ಕಾರಣವಾಗಿ ರಾಜರುಗಳು I ನಿನ್ನ ವಾಕ್ಯದ ಭೀತಿ ಇಹುದು ನನ್ನ ಹೃದಯದೊಳು II

162 ಜನರಿಗಾನಂದ ಅನಿರೀಕ್ಷಿತ ಆಸ್ತಿಯಲಿ I ನನಗಾದರೋ ಪರಮಾನಂದ ನಿನ್ನ ನುಡಿಯಲಿ II

163 ಹಿಡಿಸದು ಎನಗೆ ಮಿಥ್ಯವಾದುದು, ಅದು ಎನಗೆ ಅಸಹ್ಯ I ನಿನ್ನ ಧರ್ಮಶಾಸ್ತ್ರವಾದರೋ ನನಗೆ ಸುಪ್ರಿಯ II

164 ನೀತಿಯುತ ನಿನ್ನ ವಿಧಿಗಳ ನಿಮಿತ್ತ I ಸ್ತುತಿಪೆ ನಿನ್ನ ದಿನಕ್ಕೆ ಏಳುಕಿತ್ತಾ II

165 ಅತಿ ನೆಮ್ಮದಿಯುಂಟು ನಿನ್ನ ಶಾಸ್ತ್ರಪ್ರಿಯರಿಗೆ I ವಿಘ್ನಕರವಾದುದೇನೂ ಇರದು ಅಂಥವರಿಗೆ II

166 ರಕ್ಷಣೆಯನು ಪ್ರಭು, ನಿರೀಕ್ಷಿಸುತ್ತಿರುವೆ I ನಿನ್ನ ಆಜ್ಞೆಗಳನು ನಾನು ಕೈಗೊಂಡಿರುವೆ II

167 ನಿನ್ನ ಕಟ್ಟಳೆಗಳು ನನಗೆ ಅಧಿಕ ಪ್ರಿಯ I ನನ್ನ ಅಂತರಂಗ ಅವುಗಳಿಗೆ ವಿಧೇಯ I

168 ಅನುಸರಿಸಿದೆ ನಿನ್ನ ನೇಮನಿಯಮಗಳನೆಲ್ಲ I ನಿನಗೆ ಬಟ್ಟಬಯಲು ನನ್ನ ನಡತೆಯೆಲ್ಲ II


“ತಾವ್” ದೈವಾಜ್ಞೆಯಿಂದ ಜ್ಞಾನೋದಯ

169 ನನ್ನ ಮೊರೆ ಸೇರಲಿ ಪ್ರಭು, ನಿನ್ನ ಸನ್ನಿಧಿಯ I ನಿನ್ನ ವಾಕ್ಯಾನುಸಾರ ನೀಡು ಜ್ಞಾನೋದಯ II

170 ನನ್ನ ವಿಜ್ಞಾಪನೆ ಸೇರಲಿ ನಿನ್ನ ಸನ್ನಿಧಿಗೆ I ಉದ್ಧರಿಸೆನ್ನನು ನಿನ್ನ ನುಡಿಗೆ ತಕ್ಕಹಾಗೆ II

171 ನನಗೆ ಕಲಿಸಿರುವೆ ನಿನ್ನ ನಿಬಂಧನೆಗಳನು I ನನ್ನ ಬಾಯಿ ಉಸುರಲಿ ನಿನ್ನ ಗುಣಗಾನವನು II

172 ವರ್ಣಿಸಲಿ ನನ್ನ ನಾಲಿಗೆ ನಿನ್ನ ನುಡಿಗಳನು I ನಿನ್ನ ಕೈ ನೀಡಲಿ ನನಗೆ ನೆರವನು II

173 ಆರಿಸಿಕೊಂಡೆ ನಿನ್ನ ನಿಯಮಗಳನು I ನಿನ್ನ ಕೈ ನೀಡಲಿ ನನಗೆ ನೆರವನು II

174 ನನಗೆ ಇಷ್ಟ ನೀನು ನೀಡುವ ಜೀವೋದ್ಧಾರ I ನಿನ್ನ ಧರ್ಮಶಾಸ್ತ್ರ ಎನಗೆ ಸಂತೋಷಕರ II

175 ಉಳಿಸೆನ್ನ ಪ್ರಾಣವನು, ಭಜಿಪೆ ನಿನ್ನನು I ನೀಡಲಿ ಎನಗೆ ನಿನ್ನ ವಿಧಿಗಳು ನೆರವನು II

176 ಪ್ರಭು, ದಾರಿತಪ್ಪಿದ ಕುರಿ ನಾನು I ಪರಾಂಬರಿಸು ನಿನ್ನ ದಾಸನನು I ಮರೆಯೆನು ನಿನ್ನಾಜ್ಞೆಗಳನು II

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು