Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 118 - ಕನ್ನಡ ಸತ್ಯವೇದವು C.L. Bible (BSI)


ಪ್ರಭುವಿನ ಪ್ರೀತಿ ಶಾಶ್ವತ

1 ಸಲ್ಲಿಸಿ ನೀವೆಲ್ಲ ಪ್ರಭುವಿಗೆ ಧನ್ಯವಾದ I ಆತ ಒಳ್ಳೆಯವ, ಆತನ ಪ್ರೀತಿ ಶಾಶ್ವತ II

2 ಸಾರಲಿ ಇಸ್ರಯೇಲಿನ ಜನತೆ I ‘ಆತನ ಪ್ರೀತಿ ಶಾಶ್ವತ’ ಎಂದೆ II

3 ಸಾರಲಿ ಆರೋನನ ವಂಶಲತೆ: I ‘ಆತನ ಪ್ರೀತಿ ಶಾಶ್ವತ’ ಎಂದೆ II

4 ಸಾರಲಿ ಆತನ ಭಕ್ತರ ಪಂಥ I ಆತನ ಪ್ರೀತಿ ಶಾಶ್ವತ ಅಂಥ II

5 ಇಕ್ಕಟ್ಟಿನಲ್ಲಿ ಮೊರೆಯಿಟ್ಟೆನು ಪ್ರಭುವಿಗೆ I ಕಿವಿಗೊಟ್ಟು ಬಿಡುಗಡೆಯಿತ್ತನು ಆತನೆನಗೆ II

6 ಪ್ರಭು ನನ್ನ ಕಡೆ ಇರಲು ಭಯಪಡೆನು I ನನಗೇನು ಮಾಡಿಯಾನು ಮನುಜನು? II

7 ನೆರವು ನೀಡಲು ಪ್ರಭು ಎನ್ನಕಡೆ ಇಹನು I ಶತ್ರುಗಳತ್ತ ಜೇತಾರನಾಗಿ ನೋಡುವೆನು II

8 ಮನುಜರಲಿ ಭರವಸೆಯಿಡುವುದಕ್ಕಿಂತ I ಪ್ರಭುವನು ಆಶ್ರಯಿಸಿಕೊಳ್ಳುವುದು ಹಿತ II

9 ರಾಜರಲಿ ಭರವಸೆಯಿಡುವುದಕ್ಕಿಂತ I ಪ್ರಭುವನು ಆಶ್ರಯಿಸಿಕೊಳ್ಳುವುದು ಹಿತ II

10 ಶತ್ರುರಾಷ್ಟ್ರಗಳೆಲ್ಲಾ ಸುತ್ತುವರಿದಿದ್ದವು ಎನ್ನನು I ಪ್ರಭುವಿನ ನಾಮಬಲದಲಿ ಧ್ವಂಸಮಾಡಿದೆನವುಗಳನು II

11 ಸುತ್ತಮುತ್ತಲು ಮುತ್ತಿಕೊಂಡಿದ್ದರು ಎನ್ನನು I ಪ್ರಭುವಿನ ನಾಮಬಲದಲಿ ಸಂಹರಿಸಿದೆನವರನು II

12 ಕವಿದಿದ್ದರು ಎನ್ನನು ಜೇನುನೊಣಗಳಂತೆ I ಪ್ರಭುವಿನ ನಾಮಬಲದಲಿ ಅವರನು ಸಂಹರಿಸಿದೆ I ಮುಳ್ಳುಗಿಡವನು ಬೆಂಕಿ ಸುಟ್ಟುಹಾಕುವಂತೆ II

13 ನನ್ನನು ತಳ್ಳಿ ಬೀಳಿಸ ನೋಡಿದರು ನೆಲಕೆ I ಆದರೆ ಪ್ರಭು ನೆರವು ನೀಡಿದನು ಎನಗೆ II

14 ಪ್ರಭುವೇ ನನಗೆ ಬಲವು, ಧೈರ್ಯವು I ಆತನಿಂದಲೇ ನನಗೆ ಉದ್ಧಾರವು II

15 ಜಯಘೋಷ, ಹರ್ಷಸುನಾದ ಸಜ್ಜನರ ಬಿಡಾರದಿಂದ I “ಪರಾಕ್ರಮ, ಪ್ರದರ್ಶನ ಪ್ರಭುವಿನ ಬಲಗೈಯಿಂದ II

16 ವಿಜಯಸಾಧನ ಪ್ರಭುವಿನಾ ಬಲಗೈಯಿಂದ I ಪರಾಕ್ರಮ, ಪ್ರದರ್ಶನವೂ ಅದರಿಂದ” II

17 ಸಾಯೆನು, ಜೀವದಿಂದಿರುವೆನು ನಾನು I ಪ್ರಭುವಿನ ಕಾರ್ಯಗಳನು ಸಾರುವೆನು II

18 ಗುರಿಪಡಿಸಿಹನು ಎನ್ನನು ಪ್ರಭು ಕಠಿಣ ಶಿಕ್ಷೆಗೆ I ಆದರೂ ಗುರಿಮಾಡಲಿಲ್ಲ ಎನ್ನನು ಮರಣಕೆ II

19 ತೆರೆಯಿರಿ ಎನಗೆ ನೀತಿದ್ವಾರಗಳನು I ಒಳನುಗ್ಗಿ ಹೊಗಳುವೆನು ಪ್ರಭುವನು II

20 ಇದುವೇ ದ್ವಾರ ಪ್ರಭುವಿನ ಮಂದಿರಕೆ I ಇದುವೇ ಪ್ರವೇಶಮಾರ್ಗ ಸಜ್ಜನರಿಗೆ II

21 ಸದುತ್ತರ ಪಾಲಿಸಿದ ಪ್ರಭೂ, ನಿನಗೆ ವಂದನೆ I ಉದ್ಧಾರ ಮಾಡಿದೆ, ನಿನಗೆ ಕೃತಜ್ಞತಾವಂದನೆ II

22 ಮನೆಕಟ್ಟುವವರು ಮೂಲೆಗೆಸೆದ ಕಲ್ಲು I ಆಯಿತು ನೋಡು, ಮುಖ್ಯವಾದ ಮೂಲೆಗಲ್ಲು II

23 ಪ್ರಭುವಿನಿಂದಲೆ ಆದ ಈ ಕಾರ್ಯ I ನಮ್ಮ ಕಣ್ಣಿಗೆ ಅದೆಂತಹ ಆಶ್ಚರ್ಯ! II

24 ಪ್ರಭುವೇ ನಿಯೋಜಿಸಿದ ದಿನವಿದು I ಹರ್ಷಿಸಿ ಆನಂದಿಸೋಣ ಇಂದು II

25 ರಕ್ಷಿಸು ಪ್ರಭೂ, ರಕ್ಷಿಸು ದಯವಿಟ್ಟು I ಸುಕ್ಷೇಮ ನೀಡು ಪ್ರಭು ಕರುಣೆಯಿಟ್ಟು II

26 ಪ್ರಭುವಿನ ನಾಮದಲಿ ಬರುವವನಿಗೆ ಜಯಮಂಗಳ I ಪ್ರಭುವಿನ ಮಂದಿರದಲ್ಲಿಹ ನಮ್ಮಿಂದ ಶುಭಮಂಗಳ II

27 ಪ್ರಭುವೆ ದೇವನು, ನಮ್ಮ ಮೇಲೆ ಜ್ಯೋತಿಯನು ಬೆಳಗಿದವನು I ಪ್ರದಕ್ಷಿಣೆ ಮಾಡಿರಿ, ಬಲಿಪೀಠದ ಸುತ್ತ, ಹಿಡಿದು ರೆಂಬೆಗಳನು II

28 ಸಲ್ಲಿಸಿ ನೀವೆಲ್ಲ ಪ್ರಭುವಿಗೆ ಧನ್ಯವಾದ I ಆತ ಒಳ್ಳೆಯವ, ಆತನ ಪ್ರೀತಿ ಶಾಶ್ವತ II

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು