ಕೀರ್ತನೆಗಳು 116 - ಕನ್ನಡ ಸತ್ಯವೇದವು C.L. Bible (BSI)ಮರಣದಾಪತ್ತಿನಿಂದ ಕಾಪಾಡಿದ ದೇವರಿಗೆ ಧನ್ಯವಾದ 1 ನನಗಿದೆ ಪ್ರಭುವಿನಲ್ಲಿ ಪ್ರೀತಿ I ಆಲಿಸಿಹನಾತ ನನ್ನ ವಿನಂತಿ II 2 ಆತನೆನ್ನ ಮೊರೆಗೆ ಕಿವಿಗೊಟ್ಟ ನಿಮಿತ್ತ I ವಿಜ್ಞಾಪಿಸುವೆ ಜೀವಮಾನ ಪರಿಯಂತ II 3 ಸುತ್ತುಕೊಂಡಿದ್ದವೆನ್ನನು ಮೃತ್ಯುಪಾಶಗಳು I ಬಿಗಿಹಿಡಿದಿದ್ದವು ಪಾತಾಳ ವೇದನೆಗಳು I ಬಂದೊದಗಿದ್ದವೆನಗೆ ಕಷ್ಟಸಂಕಟಗಳು II 4 ಕೂಗಿ ಕರೆದೆನಾಗ ಪ್ರಭುವಿನ ಸಿರಿ ನಾಮವನು I “ಪ್ರಭು, ಉಳಿಸೆನ್ನ ಪ್ರಾಣವನು” ಎಂದು ಬೇಡಿದೆನು II 5 ಪ್ರಭು ಕೃಪಾಳು, ನ್ಯಾಯಪ್ರಿಯನು I ಕರುಣಾಮಯನು, ನಮ್ಮ ದೇವನು II 6 ಕಾಪಾಡುವನು ಪ್ರಭು ಸರಳ ಜೀವಿಗಳನು I ರಕ್ಷಿಸಿದನು ಕುಗ್ಗಿದವನಾಗಿದ್ದ ಎನ್ನನು II 7 ಹಿಂತಿರುಗು ನನ್ನ ಮನವೆ, ವಿಶ್ರಾಂತಿ ನೆಲೆಗೆ II ಮಹೋಪಕಾರಗಳನ್ನು ಎಸಗಿಹನು ಪ್ರಭು ನಿನಗೆ II 8 ತಪ್ಪಿಸಿಹನು ಮರಣಕೆ ನಾನೀಡಾಗದಂತೆ I ಸಂತೈಸಿಹನು ಕಂಬನಿಯ ನಾ ಸುರಿಸದಂತೆ I ಕಾಪಾಡಿಹನು ಕಾಲೆಡವಿ ನಾ ಬೀಳದಂತೆ II 9 ಎಂದೇ ನಡೆವೆನು ನಾನು ಪ್ರಭುವಿನ ಕಣ್ಮುಂದೆ I ಅಂತೆಯೇ ಬಾಳುವೆ ಜೀವಲೋಕದೊಳಿದ್ದೇ II 10-11 ನಾ ನುಡಿದೆನಾದರೂ ‘ಬಹಳ ಸಂಕಟದಲ್ಲಿರುವೆ’ನೆಂದು I ನಾನುಸುರಿದೆನಾದರೂ ‘ಯಾರನು ನಂಬಲಾಗ’ದೆಂದು I ನನ್ನಲ್ಲಿ ಅಳಿಯದೆ ಉಳಿಯಿತಾ ವಿಶ್ವಾಸವು ಎಂದೆಂದು II 12 ಪ್ರಭು ಎನಗೆ ಮಾಡಿದ ಮಹೋಪಕಾರಗಳಿಗಾಗಿ I ನನ್ನಿಂದೇನು ಮಾಡಲು ಸಾಧ್ಯ ಪ್ರತಿಯಾಗಿ? II 13 ಎತ್ತಿ ಹಿಡಿವೆನು ರಕ್ಷಣೆಯ ಪಾನಪಾತ್ರೆಯನು I ಪ್ರಖ್ಯಾತಪಡಿಸುವೆನು ಪ್ರಭುವಿನ ನಾಮವನು II 14 ಆತನಿಗೆ ನಾ ಹೊತ್ತ ಹರಕೆಗಳನು I ಆತನ ಸಭೆಮುಂದೆಯೆ ತೀರಿಸುವೆನು II 15 ಪ್ರಭು ಅಲ್ಪವೆಂದೆಣಿಸನು I ತನ್ನ ಭಕ್ತರ ಮರಣವನು II 16 ಹೇ ಪ್ರಭು, ಕರುಣಿಸು, ನಾ ನಿನ್ನ ಕಿಂಕರನು I ನಿನ್ನ ದಾಸಿಯ ಮಗನು, ನಿನ್ನ ಸೇವಕನು I ಬಿಡಿಸಿರುವೆ ನೀನು ನನ್ನ ಬಂಧನಗಳನು II 17 ಅರ್ಪಿಸುವೆ ನಾ ನಿನಗೆ ಕೃತಜ್ಞತಾ ಬಲಿಗಳನು I ಪ್ರಖ್ಯಾತಪಡಿಸುವೆನು ಪ್ರಭುವಿನ ನಾಮವನು II 18-19 ಹೇ ಜೆರುಸಲೇಮೇ, ನಿನ್ನ ಮಧ್ಯದೊಳು I ಆತನಿರುವ ಮಂದಿರದ ಅಂಗಳದೊಳು I ತೀರಿಸುವೆನು ಆತನ ಸಭೆಯ ಸಮ್ಮುಖದೊಳು I ಅರ್ಪಿಸುವೆನು ನಾ ಹೊತ್ತ ಆ ಹರಕೆಗಳನು II |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India