Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 112 - ಕನ್ನಡ ಸತ್ಯವೇದವು C.L. Bible (BSI)


ಭಕ್ತನ ಭಾಗ್ಯ

1 ಅಲ್ಲೆಲೂಯ I ಪ್ರಭುವಿನಲಿ ಭಯಭಕ್ತಿ ಉಳ್ಳವನು ಧನ್ಯನು I ಆತನಾಜ್ಞೆಗಳಲಿ ಹಿಗ್ಗುವವನು ಭಾಗ್ಯನು II

2 ಬಲಿಷ್ಠವಾಗುವುದು ಜಗದೊಳು ಅವನ ಸಂತಾನ I ಸಜ್ಜನರ ಸಂತತಿ ಪಡೆವುದು ಆಶೀರ್ವಚನ II

3 ಸಿರಿಸಂಪತ್ತಿರುವುದವನ ಮನೆಯಲಿ ಸಮೃದ್ಧಿಯಾಗಿ I ನೀತಿ ಫಲಿಸುವುದು ಆತನ ಮನದಲಿ ಶಾಶ್ವತವಾಗಿ II

4 ಸಜ್ಜನನಿಗೆ ಮೂಡುವುದು ಜ್ಯೋತಿ ಕತ್ತಲೊಳು I ನ್ಯಾಯಪ್ರಿಯನು ಆತ, ದಯಾವಂತ, ಕೃಪಾಳು II

5 ದಯೆತೋರಿ ಧನಸಹಾಯ ಮಾಡುವವನು ಭಾಗ್ಯವಂತ I ನ್ಯಾಯದಿಂದ ವ್ಯವಹರಿಸುವಂಥಾ ಮನುಜನು ಭಾಗ್ಯವಂತ II

6 ಅಚಲನಾಗಿರುವನು ನೀತಿವಂತನು I ಮರೆಯಲಾರರು ಎಂದಿಗೂ ಆತನನು II

7 ಅಶುಭವಾರ್ತೆಯ ಭಯಭೀತಿ ಯಾವುದೂ ಅವನಿಗಿಲ್ಲ I ಪ್ರಭುವಿನಲಿ ಭರವಸೆಯಿಟ್ಟ ಆ ಮನವು ಅಸ್ಥಿರವಲ್ಲ II

8 ದೃಢವಿದೆ ಅವನ ಮನ, ಎದೆಗುಂದನವನು I ಕಾಣುವನು ದುರುಳರಿಗಾಗುವ ದಂಡನೆಯನು II

9 ಉದಾರತೆಯಿಂದ ಕೊಡುವನು ಬಡವರಿಗೆ I ಫಲಿಸುವುದು ಅವನಾ ನೀತಿ ಸದಾಕಾಲಕೆ I ಮಹಿಮೆತರುವ ಕೋಡುಮೂಡುವುದು ಅವನಿಗೆ II

10 ಇದನು ಕಂಡು ಕೆರಳುವನಾ ದುರುಳನು I ಹೊಂದುವನು ಈ ಪರಿ ಆಶಾಭಂಗವನು I ಹಲ್ಲು ಕಡಿಯುತ ಅವನು ಹಾಳಾಗುವನು II

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು