ಕೀರ್ತನೆಗಳು 109 - ಕನ್ನಡ ಸತ್ಯವೇದವು C.L. Bible (BSI)ಆಗಲಿ ಶತ್ರುಗೆ ಶಿಕ್ಷೆ - ನನಗೆ ಬೇಕು ರಕ್ಷೆ 1 ಹೇ ದೇವಾ, ನೀ ಸ್ತುತಿಗೆ ಯೋಗ್ಯ I ನೀನು ಸುಮ್ಮನಿರುವುದು ಸರಿಯಾ? II 2 ತೆರೆದಿಹರು ಬಾಯಿ ದುರುಳರು, ವಂಚಕರು ನನಗೆದುರಾಗಿ I ಸುಳ್ಳು ನಾಲಿಗೆಗಳು ಆಡುತ್ತಿವೆ ನನಗೆ ವಿರುದ್ಧವಾಗಿ II 3 ಹಾಕಿಹರು ದ್ವೇಷತುಂಬಿದ ಮಾತುಗಳ ಮುತ್ತಿಗೆ I ನನ್ನ ಎದುರಿಸುತಿಹರು ನಿಷ್ಕಾರಣವಾಗಿಯೆ II 4 ಪ್ರೀತಿಗೆ ಪ್ರತಿಯಾಗಿ ಮಾಡುತಿಹರು ಆಪಾದನೆ I ಆದರೂ ಮಾಡುತ್ತಿರುವೆ ಅವರಿಗಾಗಿ ಪ್ರಾರ್ಥನೆ II 5 ಉಪಕಾರಕ್ಕೆ ಅಪಕಾರವನ್ನೆಸಗಿಹರು I ಗೆಳೆತನಕ್ಕೆ ಹಗೆತನವನ್ನೇ ತೋರಿಹರು II 6 ತಪ್ಪುಹೊರಿಸುವವನನು ನಿಲ್ಲಿಸು ಆ ಶತ್ರುವಿನ ಬಲಗಡೆಗೆ I ಗುರಿಪಡಿಸು ಅವನನು ಭ್ರಷ್ಟ ನ್ಯಾಯಾಧೀಶನ ತೀರ್ಪಿಗೆ II 7 ಅಪರಾಧಿಯಾಗಲಿ ಅವನು ನ್ಯಾಯವಿಚಾರಣೆಯಲಿ I ಅವನ ಪ್ರಾರ್ಥನೆಯೂ ಪಾಪವಾಗಿ ಎಣಿಸಲ್ಪಡಲಿ II 8 ಅಲ್ಪವಾಗಿರಲಿ ಅವನ ಜೀವನಾವಧಿ I ಮತ್ತೊಬ್ಬನದಾಗಲಿ ಅವನಾಸ್ತಿಪಾಸ್ತಿ II 9 ತಬ್ಬಲಿಗಳಾಗಲಿ ಅವನ ಮಕ್ಕಳುಮರಿ I ವಿಧವೆಯಾಗಲಿ ಅವನ ನಾರಿಮಣಿ II 10 ತಿರುಕರಂತೆ ಅಲೆಯಲಿ ಅವನ ಮಕ್ಕಳು ಭಿಕ್ಷೆಬೇಡುತ I ಹೊರದೂಡಲ್ಪಡಲಿ ತಮ್ಮ ಪಾಳುಬಿದ್ದಾಮನೆಗಳಿಂದ II 11 ಕಸಿದುಕೊಳ್ಳಲಿ ಅವನದೆಲ್ಲವನು ಸಾಲಿಗನು I ಸುಲಿದುಕೊಳ್ಳಲಿ ಪರರು ಅವನ ಕಷ್ಟಾರ್ಜಿತವನು II 12 ಕರುಣೆತೋರುವವನಾರೂ ಅವನಿಗಿಲ್ಲವಾಗಲಿ I ಅವನ ತಬ್ಬಲಿ ಮಕ್ಕಳನಾರೂ ಕನಿಕರಿಸದಿರಲಿ II 13 ನಿರ್ಮೂಲವಾಗಲಿ ಅವನಾ ಪೀಳಿಗೆ I ನಿರ್ನಾಮವಾಗಲಿ ಮರುವಂಶದೊಳಗೆ II 14 ಮರೆಯದಿರಲಿ ಪ್ರಭು ಅವನಾ ಹಿರಿಯರ ದೋಷವನು I ಪರಿಹರಿಸದಿರಲಿ ಅವನ ತಾಯಿಯು ಗೈದ ಪಾಪವನು II 15 ಅವರ ಪಾಪಗಳು ಪ್ರಭುವಿನ ನೆನಪಲ್ಲಿರಲಿ I ಅವನ ಹೆಸರೇ ಇಲ್ಲದಂತಾಗಲಿ ಧರೆಯಲಿ II 16 ಯಾರೊಬ್ಬನಿಗು ಮರುಕತೋರೆ ಮರೆತುಬಿಟ್ಟನವನು I ಕೊಲ್ಲಲು ಯತ್ನಿಸಿದನು ದೀನರನು, ಮನಗುಂದಿದವರನು II 17 ಅವನಿಗೆ ಪ್ರಿಯ ಶಪಿಸುವುದೆಂದರೆ, ಎರಗಲಿದೀಗ ಅವನ ಮೇಲೇ I ಆಶೀರ್ವದಿಸುವುದು ಅವನಿಗಪ್ರಿಯ, ಇರಲಿ ಅವನಿಗದು ದೂರದಲೇ II 18 ಶಪಿಸುವುದೆಂದರೆ ಅವನಿಗೆ ಉಡಿಗೆತೊಡಿಗೆಯಂತೆ I ಇಳಿಯಲಿ ಅದೀಗ ಅವನ ದೇಹಕೆ ನೀರಿನಂತೆ I ಸೇರಲಿ ಅದೀಗ ಅವನ ಕೀಲಿಗೆ ಎಣ್ಣೆಯಂತೆ II 19 ಅವನಿಗಿರಲಿ ಶಾಪ ಹೊದಿಕೆಯಂತೆ I ಅದುವೆ ಅನುದಿನದ ನಡುಗಟ್ಟಂತೆ II 20 ನನಗೆದುರಾಡಿ ತಪ್ಪು ಹೊರಿಸುವವರಿಗೆ I ಅದುವೇ ಪ್ರಭುವಿನಿಂದ ಗಿಟ್ಟುವ ಕೊಡುಗೆ II 21 ಹೇ ಪ್ರಭು, ದೇವಾ, ನನ್ನನಾದರಿಸು ಅಕ್ಕರೆಯಿಂದ I ನನ್ನ ಪಕ್ಷವಹಿಸಿ ರಕ್ಷಿಸು ನಿನ್ನ ನಾಮದ ಪ್ರಯುಕ್ತ II 22 ಬಡವ ನಾನು, ನನಗಿದೆ ಕುಂದುಕೊರತೆ I ನನ್ನ ಎದೆಗೆ ಅಲಗೇ ನಾಟಿದಂತಿದೆ II 23 ನಾ ಗತಿಸಿಹೋಗುತ್ತಿರುವೆ ಬೈಗಿನ ನೆರಳಂತೆ I ಬಿರುಗಾಳಿ ಕೊಂಡೊಯ್ಯುವ ಮಿಡತೆಯಂತೆ II 24 ಬಡಕಲಾಯಿತೆನ್ನ ದೇಹ ಬರಡಿಲ್ಲದೆ I ನಡುಕ ಹುಟ್ಟಿತು ಕಾಲಿಗೆ ತ್ರಾಣವಿಲ್ಲದೆ II 25 ಗುರಿಯಾಗಿರುವೆನು ನಾ ಜನರ ಅಪಹಾಸ್ಯಕ್ಕೆ I ನೋಡುವವರು ತಲೆಯಾಡಿಸಿ ಮಾಡುವ ನಿಂದೆಗೆ II 26 ಹೇ ಪ್ರಭೂ, ಹೇ ದೇವಾ, ನೆರವಾಗಯ್ಯಾ I ಅಚಲಪ್ರೀತಿಯಿಂದ ನನ್ನ ರಕ್ಷಿಸಯ್ಯಾ II 27 ನನ್ನ ರಕ್ಷಣೆ ನಿನ್ನ ಕೈಯಿಂದಾದುದೆಂದು ಅವರರಿಯಲಿ I ಅದು ನಿನ್ನಿಂದಲೇ ಹೇ ಪ್ರಭು, ಆದುದೆಂದು ಖಚಿತವಾಗಲಿ II 28 ಅವರೆನ್ನನು ಶಪಿಸಿದರೂ ನೀನೆನ್ನನು ಹರಸು I ನನ್ನೆದುರಾಳಿಗೆ ಅಪಮಾನವನು ಹೊರಿಸು I ನಿನ್ನ ದಾಸನೆನಗೆ ಆನಂದವನು ಪಾಲಿಸು II 29 ಮಾನಭಂಗವಾಗಲಿ ನನ್ನಾ ನಿಂದಕರಿಗೆ I ಬಟ್ಟೆಯಂತೆ ಅವರಿಗಂಟಿಕೊಳ್ಳಲಿ ಹೇಸಿಗೆ II 30 ಕೊಂಡಾಡುವೆನು ಪ್ರಭುವನು ಬಹಳವಾಗಿ I ಕೀರ್ತಿಸುವೆನು ಆತನನು ಸಾಮೂಹಿಕವಾಗಿ II 31 ನಿಂತಿರುವನು ಪ್ರಭು ಬಡವನ ಬಲಗಡೆ I ವಿಧಿಸುವವರಿಂದ ತಪ್ಪಿಸುವನು ಮರಣದಂಡನೆ II |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India