Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 108 - ಕನ್ನಡ ಸತ್ಯವೇದವು C.L. Bible (BSI)


ದೈವಾರಾಧನೆ - ಜಯಕ್ಕಾಗಿ ಪ್ರಾರ್ಥನೆ
( ಕೀರ್ತ. 57:7-11 ; 60:5-12 )

1 ಸ್ಥಿರವಿದೆ ದೇವಾ, ಸುಸ್ಥಿರವಿದೆ ನನ್ನ ಮನ I ಹಾಡುತ ಪಾಡುತ ರಚಿಸುವೆನಿದೋ ಕವನ II

2 ಚೇತನಗೊಳ್ಳು, ಮನವೇ ಚೇತನಗೊಳ್ಳು I ಎಚ್ಚರಗೊಳ್ಳಲಿ ವೀಣೆ ತಂಬೂರಿಗಳು I ನಾನೆಬ್ಬಿಸುವೆನು ಬೆಳಗಿನ ಜಾವವನು II

3 ನಿನ್ನ ಸ್ತುತಿಸುವೆನು ಪ್ರಭು, ಜನಾಂಗಗಳ ಮುಂದೆ I ಸಂಕೀರ್ತಿಸುವೆನು ನಿನ್ನನು ರಾಷ್ಟ್ರಗಳ ಮಧ್ಯೆ II

4 ಮೀರಿದೆ ನಿನ್ನಚಲಪ್ರೀತಿ ಗಗನ ಮಂಡಲವನು I ಮುಚ್ಚಿದೆ ನಿನ್ನ ಸತ್ಯಸಂಧತೆ ಮೇಘರಾಶಿಯನು II

5 ಮೇಲಣ ಲೋಕದಲಿ ಮೆರೆಯಲಿ ದೇವಾ, ನಿನ್ನ ಶೋಭೆ I ಭೂಮಂಡಲದೊಳು ಹಬ್ಬಿ ಹರಡಲಿ ನಿನ್ನಾ ಪ್ರತಿಭೆ II

6 ನಿನಗೆ ಪ್ರಿಯರಾದ ನಮ್ಮ ಮೊರೆಯನಾಲಿಸು I ನಿನ್ನ ಭುಜಬಲದಿಂದ ನಮ್ಮನು ಜಯಗೊಳಿಸು II

7 ಗರ್ಭಗುಡಿಯಿಂದಲೆ ದೇವನಿಂತೆಂದನು : I “ಜಯಶೀಲ ನಾನು, ಹಂಚುವೆನು ಶೆಖೆಮನು I ಅಳೆದುಕೊಡುವೆನು ಸುಖೋತೆಂಬ ಬಯಲನು II

8 ಗಿಲ್ಯಾದ ಸೀಮೆ, ಮನಸ್ಸೆ ನಾಡು ನನ್ನವೆ I ಎಫ್ರಯಿಮ್ ಗೋತ್ರವು ಶಿರಸ್ತ್ರಾಣ ನನಗೆ I ಜೂದಕುಲ ರಾಜದಂಡವಾಗಿದೆ ನನ್ನ ಕೈಗೆ II

9 ಮೋವಾಬ್ ಪ್ರಾಂತ್ಯವು ನನ್ನ ಸ್ನಾನಪಾತ್ರೆಯು I ಎದೋಮ್ ಪ್ರಾಂತ್ಯವು ನನ್ನ ಕೆರಗಳಿಗೆ, ಎಡೆಯು I ನನ್ನ ಗೆಲ್ವೆನೆಂದಿತೆ ಫಿಲಿಷ್ಟಿಯ ಪ್ರಾಂತ್ಯವು?” II

10 ಕೋಟೆ ನಗರಕೆ ನನ್ನನು ಕರೆದೊಯ್ಯುವವರಾರು? I ಎದೋಮ್ ಪ್ರಾಂತ್ಯಕೆ ನನ್ನ ಕೊಂಡೊಯ್ಯುವವರಾರು? II

11 ದೇವಾ, ನೀ ನಮ್ಮನು ಕೈಬಿಟ್ಟಿರುವುದು ಸರಿಯೋ? I ನಮ್ಮ ಸೈನ್ಯಸಮೇತ ನೀ ಬರದೆ ಹೋದೆಯೋ? II

12 ಶತ್ರುವಿರುದ್ಧ ಸಹಾಯಮಾಡಯ್ಯಾ I ಮಾನವನ ನೆರವು ನಮಗೆ ಬರಡಯ್ಯಾ II

13 ನಮ್ಮ ಪರ ದೇವನಿರಲು ಹೆಣಗುವೆವು ಶೂರರಾಗಿ I ವೈರಿಗಳನು ತುಳಿದುಬಿಡುವನು ಆತ ಖರೆಯಾಗಿ II

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು