ಕೀರ್ತನೆಗಳು 104 - ಕನ್ನಡ ಸತ್ಯವೇದವು C.L. Bible (BSI)ಸೃಷ್ಟಿಕರ್ತನ ಭಜನೆ 1 ಭಜಿಸು ನನ್ನ ಮನವೇ, ಭಜಿಸು, ಪ್ರಭುವನು I ಪ್ರಭು, ನನ್ನ ದೇವಾ, ನೀ ಸರ್ವೋತ್ತಮನು I ಮಹಿಮೆ ಪ್ರತಾಪಗಳಿಂದ ಭೂಷಿತನು II 2 ತೊಟ್ಟುಕೊಂಡಿರುವೆ ಬೆಳಕನೇ ಬಟ್ಟೆಯಂತೆ I ಹರಡಿಸಿರುವೆ ಆಗಸವನು ಗುಡಾರದಂತೆ II 3 ನಿರ್ಮಿಸಿರುವೆ ನಿನ್ನ ಭವನವನು ಜಲದ ಮೇಲೆ I ಮಾಡುವೆ ಸಂಚಾರ ಮಾರುತನ ರೆಕ್ಕೆಗಳ ಮೇಲೆ I ನಿನಗೆ ರಥವಾಹನಗಳು ಆ ಮುಗಿಲು ಮೋಡಗಳೇ II 4 ಗಾಳಿಗಳೇ ನಿನಗೆ ದೂತರುಗಳು I ಅಗ್ನಿಜ್ಞಾಲೆಗಳೇ ಆಳುಗಳು II 5 ಬುವಿಯನು ತಳಹದಿಯ ಮೇಲೆ ಸ್ಥಾಪಿಸಿರುವೆ I ಅದೆಂದಿಗೂ ಕದಲದಂತೆ ಮಾಡಿರುವೆ II 6 ಅದಕ್ಕೆ ಹೊದಿಸಿರುವೆ ಸಾಗರವೆಂಬ ವಸ್ತ್ರವನು I ಆ ಜಲರಾಶಿಗಳು ಮುಳುಗಿಸಿವೆ ಬೆಟ್ಟಗಳನು II 7 ತಲೆದೋರಿತು ಜಲ ನಿನ್ನ ಗದರಿಕೆಗೆ I ಹೆದರಿ ಹಿಂಜರಿಯಿತು ನಿನ್ನ ಗರ್ಜನೆಗೆ II 8 ತಲೆದೋರಿದವು ಬೆಟ್ಟಗುಡ್ಡಗಳು I ತುಂಬಿಕೊಂಡವು ಹಳ್ಳಕೊಳ್ಳಗಳು I ಅವೇ ನೀ ನೇಮಿಸಿದ ಸ್ಥಳಗಳು II 9 ಗೊತ್ತುಮಾಡಿರುವೆ ಆ ಜಲರಾಶಿಗೆ ಮೇರೆಯನು I ಅವು ಮತ್ತೆ ಮುಚ್ಚದಂತೆ ಮಾಡಿರುವೆ ಭೂಮಿಯನು II 10 ಬುಗ್ಗೆಗಳು ಚಿಮ್ಮಿ ಓಡಮಾಡುವೆ ತಗ್ಗುಗಳಲಿ I ನದಿಗಳ ಹರಿಯಮಾಡುವೆ ಗುಡ್ಡಗಳ ನಡುವೆಯಲಿ II 11 ನೀರ ನೀಡುವವು ಕುಡಿಯಲಿಕ್ಕೆ ಕಾಡುಮೃಗಗಳಿಗೆ I ದಾಹ ನೀಗಿಸಿಕೊಳ್ಳಲು ಆ ಕಾಡುಕತ್ತೆಗಳಿಗೆ II 12 ಅವುಗಳ ಅರುಗಲ್ಲೇ ಇವೆ ಹಕ್ಕಿಗಳ ಗೂಡುಗಳು I ಕೇಳುತಿವೆ ಕೊಂಬೆಗಳಿಂದಾ ಪಕ್ಷಿಗಳ ಕಲರವಗಳು II 13 ಮಲೆಗಳ ಮೇಲೆ ಮಳೆಗರೆಯುವೆ ಗಗನದಿಂದ I ತೃಪ್ತಿಗೊಂಡಿದೆ ಪೃಥ್ವಿಯು ನಿನ್ನ ಕೃಪೆಗಳಿಂದ II 14 ಮೊಳೆಸುವೆ ಹುಲ್ಲನ್ನು ದನಕರುಗಳಿಗೋಸ್ಕರ I ಬೆಳೆಸುವೆ ಪೈರನು ನರಮಾನವರಿಗೋಸ್ಕರ II 15 ಒದಗಿಸುವೆ ಬೇಸಾಯದ ಆಹಾರವನು I ಹೃದಯವನು ಮುದಗೊಳಿಸುವ ದ್ರಾಕ್ಷಾರಸವನು I ಮುಖಕೆ ಮೆರಗನ್ನೀಯುವ ತಿಳಿತೈಲಗಳನು I ದೇಹವನು ಗಟ್ಟಿಮುಟ್ಟಾಗಿಸುವ ರೊಟ್ಟಿಯನು II 16 ಜಲವಿದೆ ಲೆಬನೋನಿನ ದೇವದಾರು ವೃಕ್ಷಗಳಿಗೆ I ನೀರು ಬೇಕಾದಷ್ಟಿದೆ ಪ್ರಭು ನೆಟ್ಟ ಮರಗಳಿಗೆ II 17 ಗೂಡುಕಟ್ಟಿಕೊಳ್ಳುವುವು ಹಕ್ಕಿಗಳಾ ಮರಗಳಲಿ I ವಾಸಮಾಡುವುವು ಕೊಕ್ಕರೆಗಳು ತುರಾಯಿಮರಗಳಲಿ II 18 ಬೆಟ್ಟಗುಡ್ಡಗಳಿವೆ ಕಾಡುಕುರಿಗಳಿಗೆ I ಬಂಡೆಬಿರುಕುಗಳಿವೆ ಬೆಟ್ಟದ ಮೊಲಗಳಿಗೆ II 19 ಋತು ಸೂಚನೆಗಾಗಿ ನೀ ನಿರ್ಮಿಸಿದೆ ಚಂದ್ರನನು I ಸೂರ್ಯ ಬಲ್ಲನು ತನ್ನಸ್ತಮಾನದ ವೇಳೆಯನು II 20 ರಾತ್ರಿಯಾಗುತ್ತದೆ ನೀ ಕತ್ತಲನು ಬರಮಾಡಲು I ತಿರುಗಾಡುತ್ತವೆ ಆಗ ಕಾಡಿನ ಜೀವಜಂತುಗಳು II 21 ಗರ್ಜಿಸುತ್ತವೆ ಪ್ರಾಯಸಿಂಹಗಳು ಬೇಟೆಗಾಗಿ I ದೇವರನ್ನು ಎದುರು ನೋಡುತ್ತವೆ ಆಹಾರಕ್ಕಾಗಿ II 22 ಮರಳುತ್ತವೆ ಸೂರ್ಯೋದಯವಾಗಲು I ತಂತಮ್ಮ ಗವಿಗುಹೆಗಳಲಿ ಮಲಗಲು II 23 ಹೊರಡುತ್ತಾನಾಗ ಮಾನವ ಕೆಲಸಕೆ I ದುಡಿಯುತ್ತಾನೆ ಸಾಯಂಕಾಲದವರೆಗೆ II 24 ಸೃಜಿಸಿರುವೆ ಎಲ್ಲವನು ಸುಜ್ಞಾನದಿಂದ I ಜಗವೆಲ್ಲ ತುಂಬಿದೆ ನಿನ್ನ ಸೃಷ್ಟಿಯಿಂದ II 25 ಸಮುದ್ರವಿದೊ ಎಷ್ಟು ಅಪಾರ, ಅದೆಷ್ಟು ವಿಶಾಲ I ಅದರಲ್ಲಿರುವ ಸಣ್ಣ-ದೊಡ್ಡ ಜೀವಿಗಳಿಗೆ ಲೆಕ್ಕವಿಲ್ಲ II 26 ಓಡಾಡುತ್ತವದರೊಳು ಹಡಗುಗಳು I ನೀನುಂಟುಮಾಡಿದ ತಿಮಿಂಗಿಲಗಳು II 27 ಸಕಾಲದಲೊದಗಿಸುವೆ ಆಹಾರವನು I ನಂಬಿಕೊಂಡಿವೆ ಆ ಜೀವಿಗಳು ನಿನ್ನನು II 28 ನೀ ನೀಡಲು ಕೂಡಿಸಿಟ್ಟುಕೊಳ್ಳುವುವು I ನೀ ಕೈತೆರೆಯಲು ಸಂತೃಪ್ತಿಪಡುವುವು II 29 ತಲ್ಲಣಗೊಳ್ಳುವುವು ನೀ ಮುಖ ಮರೆಮಾಡಿಕೊಳ್ಳಲು I ಮಣ್ಣುಪಾಲಾಗುವುವು ನೀನವುಗಳ ಉಸಿರನಡಗಿಸಲು II 30 ನೀ ಉಸಿರನ್ನೂದಲು ಹೊಸದಾಗುವುವು I ಪುನಶ್ಚೇತನಗೊಳ್ಳುವುದು ಜಗವೆಲ್ಲವು II 31 ಸ್ವಾಮಿದೇವನ ಮಹಿಮೆಯಿರಲಿ ಶಾಶ್ವತವಾಗಿ I ಆತ ಸಂತೋಷಿಸಲಿ ತನ್ನ ಸುಕೃತ್ಯಗಳಿಗಾಗಿ II 32 ನಡುಗುತ್ತದೆ ಭೂಮಂಡಲ ಆತನ ಕೃತ್ಯಕೆ I ಹೊಗೆಕಾರುತ್ತದೆ ಪರ್ವತ ಆತನ ಸ್ಪರ್ಶಕೆ II 33 ಪ್ರಭುವನು ನಾ ಹೊಗಳಿ ಹಾಡುವೆನು ಬಾಳಿನೊಳೆಲ್ಲ I ನನ್ನ ದೇವನನು ಭಜಿಸುವೆನು ನಾ ಜೀವಮಾನವೆಲ್ಲ II 34 ಆತನಿಗೊಲಿಯಲಿ ನನ್ನ ಧ್ಯಾನ I ಆತನಲೇ ಹರ್ಷಿಸಲಿ ನನ್ನ ಮನ II 35 ದಹಿಸಿಹೋಗಲಿ ಧರೆಯಿಂದ ದುಷ್ಟರು I ನಿರ್ಮೂಲವಾಗಲಿ ಸಕಲ ದುರುಳರು I ಪ್ರಭುವನು ನನ್ನ ಮನ ಸ್ತುತಿಸಲಿ I ಪ್ರಭುವಿಗೆ ಸ್ತುತಿಸ್ತೋತ್ರವಾಗಲಿ II |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India