ಕೀರ್ತನೆಗಳು 101 - ಕನ್ನಡ ಸತ್ಯವೇದವು C.L. Bible (BSI)ರಾಜಶ್ರೇಷ್ಠನ ಪ್ರತಿಜ್ಞೆ 1 ಪ್ರೀತಿನೀತಿಗಳ ಕುರಿತು ಹಾಡುವೆನು I ಹೇ ಪ್ರಭೂ, ನಿನ್ನನೆ ಹಾಡಿಹೊಗಳುವೆನು II 2 ಸನ್ಮಾರ್ಗದಲೇ ನಾ ನಡೆಯುವೆನು I ನನಗೆಂದು ನೀಡುವೆ ದರ್ಶನವನು? I ಮನೆಯೊಳಗೂ ಶುದ್ಧಹೃದಯಿ ನಾನು II 3 ನೀಚಕಾರ್ಯಗಳನು ನಾ ವೀಕ್ಷಿಸಲಾರೆ I ಅಧರ್ಮಿಗಳ ನಡೆಯನು ನಾ ಸಹಿಸಲಾರೆ I ಅಂಥವರ ಸಹವಾಸವನು ನಾ ತಾಳಲಾರೆ II 4 ನನ್ನ ಬಿಟ್ಟು ತೊಲಗಲಿ ಮೂರ್ಖತನ I ನನಗೆ ಹತ್ತದೆಯಿರಲಿ ಕೆಟ್ಟತನ II 5 ಸಂಹರಿಸುವೆನು ನೆರೆಯವನ ಮೇಲೆ ಅಪವಾದ ಹೊರಿಸುವವನನು I ಸಹಿಸಲಾರೆ ಸೊಕ್ಕಿದಕಣ್ಣು, ಕೊಬ್ಬಿದ ಮನ ಉಳ್ಳಂಥವನನು II 6 ಆರಿಸಿಕೊಳ್ವೆನು ನಾಡಿನ ಸಜ್ಜನರನು I ಇರಿಸಿಕೊಳ್ವೆನು ನನ್ನೊಡನೆ ವಾಸಿಸಲವರನು I ಸನ್ಮಾರ್ಗಿಯೆ ನನ್ನ ಸೇವಕನಾಗಿರುವನು II 7 ಮೋಸಗಾರನು ವಾಸಮಾಡನು ನನ್ನ ನಿವಾಸದಲಿ I ಸುಳ್ಳುಗಾರನು ನಿಲ್ಲಲಾರನು ನನ್ನ ಸಮ್ಮುಖದಲಿ II 8 ಇಲ್ಲಮಾಡುವೆನು ಕೆಡುಕರನು ಪ್ರಭುವಿನಾ ನಗರದೊಳಗೆ I ನಾಶಮಾಡುವೆನು ನಾಡಿನ ದುರುಳರನು ದಿನದಿನಗಳೊಳಗೆ II |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India