ಎಸ್ತೇರಳು 7 - ಕನ್ನಡ ಸತ್ಯವೇದವು C.L. Bible (BSI)ಹಾಮಾನನ ಕೊಲೆ 1 ಅರಸನು ಹಾಮಾನನೊಡನೆ ಔತಣಕ್ಕಾಗಿ ಎಸ್ತೇರಳ ಮನೆಗೆ ಬಂದನು. 2 ಅರಸನು ಈ ಎರಡನೆಯ ದಿನದಲ್ಲೂ ದ್ರಾಕ್ಷಾರಸ ಪಾನಮಾಡುತ್ತಿರುವಾಗ ಎಸ್ತೇರಳಿಗೆ, “ಎಸ್ತೇರ್ ರಾಣಿಯೇ, ನಿನ್ನ ವಿಜ್ಞಾಪನೆ ಯಾವುದು ಹೇಳು; ಅದನ್ನು ನಾನು ನೆರವೇರಿಸುವೆನು. ನನ್ನ ರಾಜ್ಯದ ಅರ್ಧಭಾಗವನ್ನು ಕೇಳಿದರೂ ಸರಿ, ನಾನದನ್ನು ನಿನಗೆ ಕೊಡುವೆನು,” ಎನ್ನಲು 3 ಎಸ್ತೇರಳು ಪ್ರತ್ಯುತ್ತರವಾಗಿ, “ಅರಸರು ನನ್ನ ಮೇಲೆ ಕೃಪಾಕಟಾಕ್ಷವನ್ನಿಟ್ಟು ಈಡೇರಿಸುವುದಾದರೆ ನನ್ನ ವಿಜ್ಞಾಪನೆಯನ್ನು, ಪ್ರಾರ್ಥನೆಯನ್ನು ಆಲಿಸಿ, ನನ್ನ ಪ್ರಾಣವನ್ನು ಹಾಗು ನನ್ನ ಜನರ ಪ್ರಾಣವನ್ನು ಉಳಿಸಬೇಕು. 4 ಜನರು ನಮ್ಮನ್ನು ಕೊಂದು, ಸಂಹರಿಸಿ, ನಿರ್ನಾಮಗೊಳಿಸುವ ಹಾಗೆ ನಮ್ಮನ್ನು ಮಾರಲಾಯಿತು. ಬರೀ ಮಾರಾಟವಾಗಿದ್ದರೆ ಈ ದುರಂತ ಪರಿಸ್ಥಿತಿಯ ವಿಷಯದಲ್ಲಿ ಅರಸರಿಗೆ ತೊಂದರೆಪಡಿಸುವುದು ಸರಿಯಲ್ಲವೆಂದು ಸುಮ್ಮನಿದ್ದುಬಿಡುತ್ತಿದ್ದೆ,” ಎಂದಳು. 5 ಆಗ ಅರಸನು, “ಇಂಥ ದುಷ್ಕೃತ್ಯವನ್ನು ಎಸಗಲು ಸಂಚು ನಡೆಸಿದ ಕೇಡಿಗನು ಯಾರು? ಎಲ್ಲಿದ್ದಾನೆ ಅವನು?” ಎಂದು ಕೇಳಲು 6 ಆಕೆ, “ನಮ್ಮ ವೈರಿಯೂ ಶತ್ರುವೂ ಬೇರಾರೂ ಅಲ್ಲ; ಇಗೋ, ಈ ಹಾಮಾನನೇ ಆ ದುಷ್ಟ,” ಎಂದಳು. ಇದನ್ನು ಕೇಳಿದೊಡನೆ ಹಾಮಾನನು ಅರಸನ ಮತ್ತು ರಾಣಿಯ ಮುಂದೆ ಭಯದಿಂದ ನಡುಗಿದನು. 7 ರೌದ್ರಾವೇಶಗೊಂಡ ಅರಸ ದ್ರಾಕ್ಷಾರಸ ಪಾನಮಾಡುವುದನ್ನು ಬಿಟ್ಟೆದ್ದು, ತೋಟಕ್ಕೆ ಹೋದನು. ಅರಸನಿಂದ ತನಗೆ ಶಿಕ್ಷೆ ನಿಶ್ಚಿತವೆಂದರಿತ ಹಾಮಾನನು ಎಸ್ತೇರ್ ರಾಣಿಯ ಮುಂದೆ ಪ್ರಾಣಭಿಕ್ಷೆಗಾಗಿ ಅಂಗಲಾಚಿ ಬೇಡುತ್ತಾ ನಿಂತನು. 8 ಅರಸನು ಅರಮನೆಯ ತೋಟದಿಂದ, ತಾನು ದ್ರಾಕ್ಷಾರಸ ಸೇವಿಸುತ್ತಿದ್ದ ಕೊಠಡಿಗೆ ಹಿಂದಿರುಗಿಬಂದಾಗ ಎಸ್ತೇರಳು ಒರಗಿಕೊಂಡಿದ್ದ ಸುಖಾಸನದತ್ತ ಹಾಮಾನನು ಬಾಗಿರುವುದನ್ನು ಕಂಡು, “ಇದೇನು? ಇವನು ನನ್ನ ಮುಂದೆಯೇ ನನ್ನ ಅರಮನೆಯಲ್ಲಿಯೇ ರಾಣಿಯ ಮೇಲೆ ಬಲಾತ್ಕಾರ ಮಾಡಲು ಹೊರಟಿರುವನೆ?” ಎಂದನು. ಅರಸನ ಬಾಯಿಂದ ಈ ಮಾತುಗಳು ಹೊರಬಿದ್ದದ್ದೇ ತಡ ಸೇವಕರು ಹಾಮಾನನ ಮುಖದ ಮೇಲೆ ಮುಸುಕನ್ನು ಎಳೆದರು. 9 ಇದಲ್ಲದೆ, ಅರಸನ ಸೀಮೆಯಲ್ಲಿದ್ದ ಕಂಚುಕಿಗಳಲ್ಲೊಬ್ಬನಾದ ಹರ್ಬೋನನು, “ಇಗೋ, ಅರಸನ ಪ್ರಾಣವನ್ನು ರಕ್ಷಿಸಲು ಸಮಾಚಾರವನ್ನು ತಿಳಿಸಿದ ಮೊರ್ದಕೈಯನ್ನು ಕೊಲ್ಲುವುದಕ್ಕಾಗಿ ಹಾಮಾನನು ಸಿದ್ಧಮಾಡಿಸಿದ ಇಪ್ಪತ್ತೆರಡು ಮೀಟರ್ ಎತ್ತರದ ನೇಣುಗಂಬವಿದೆಯಲ್ಲ,” ಎನ್ನಲು ಅರಸನು, “ಇವನನ್ನು ಅದಕ್ಕೆ ನೇತುಹಾಕಿರಿ,” ಎಂದು ಆಜ್ಞಾಪಿಸಿದನು. 10 ಮೊರ್ದೆಕೈಗೋಸ್ಕರ ಹಾಮಾನನು ಸಿದ್ಧಮಾಡಿದ್ದ ಅದೇ ಗಲ್ಲಿಗೆ ಅವನನ್ನು ಏರಿಸಿದರು. ಅರಸನ ಕೋಪವು ಶಾಂತವಾಯಿತು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India