Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಎಸ್ತೇರಳು 1 - ಕನ್ನಡ ಸತ್ಯವೇದವು C.L. Bible (BSI)


ಅರಸ ಅಹಷ್ವೇರೋಷನಿಗೆ ವಷ್ಟಿರಾಣಿಯ ಪ್ರತಿಭಟನೆ

1 ಭಾರತ (ಇಂಡಿಯಾ) ದೇಶ ಮೊದಲುಗೊಂಡು ಇಥಿಯೋಪಿಯ ದೇಶದವರೆಗೂ ಇದ್ದ ನೂರಿಪ್ಪತ್ತೇಳು ಸಂಸ್ಥಾನಗಳನ್ನು ಅರಸ ಅಹಷ್ವೇರೋಷನು ಆಳುತ್ತಿದ್ದನು.

2 ಅರಸನು ತನ್ನ ರಾಜಧಾನಿಯಾಗಿದ್ದ ಶೂಷನ್ ನಗರದಲ್ಲಿ ರಾಜಸಿಂಹಾಸನವನ್ನೇರಿ ಆಡಳಿತ ನಡೆಸುತ್ತಿದ್ದ ಮೂರನೆಯ ವರ್ಷದಲ್ಲಿ ತನ್ನ ಎಲ್ಲಾ ಉನ್ನತ ಅಧಿಕಾರಿಗಳಿಗೂ ಪರಿವಾರದವರಿಗೂ ಒಂದು ಔತಣವನ್ನೇರ್ಪಡಿಸಿದನು.

3 ಪರ್ಷಿಯ ಮತ್ತು ಮೇದ್ಯ ದೇಶಗಳ ದಂಡನಾಯಕರೂ ಪದಾಧಿಕಾರಿಗಳೂ ಸಂಸ್ಥಾನದ ಅಧಿಕಾರಿಗಳೂ ಅರಸನ ಮುಂದೆ ಉಪಸ್ಥಿತರಿದ್ದರು.

4 ಅರಸನು ತನ್ನ ಘನರಾಜ್ಯದ ಸಿರಿಸಂಪತ್ತನ್ನು, ವೈಭವವನ್ನು ಹಾಗು ರಾಜ್ಯದ ಆಡಂಬರವನ್ನು ಅವರೆಲ್ಲರ ಮುಂದೆ ಬಹುದಿನಗಳವರೆಗೆ ಅಂದರೆ, ನೂರೆಂಬತ್ತು ದಿನಗಳವರೆಗೆ ಪ್ರದರ್ಶಿಸಿದನು.

5 ಆ ದಿನಗಳು ಕಳೆದ ನಂತರ ಅರಸನು ಶೂಷನ್ ನಗರದ ನಿವಾಸಿಗಳಿಗೆ ಶ್ರೀಮಂತ-ಬಡವ ಎಂಬ ಯಾವ ಭೇದಭಾವ ಮಾಡದೆ ಎಲ್ಲರಿಗೂ ಅರಮನೆಯ ತೋಟದ ಅಂಗಳದಲ್ಲಿ ಏಳು ದಿನಗಳ ಪರಿಯಂತರ ದೊಡ್ಡ ಔತಣವನ್ನೇರ್ಪಡಿಸಿದನು.

6 ಅಂಗಳದಲ್ಲಿ ಬಿಳಿ, ಹಸಿರು, ನೀಲಿವರ್ಣದ ಪರದೆಗಳು ರಕ್ತವರ್ಣದ ನಾರಿನ ಹಗ್ಗಗಳಿಂದ ಅಮೃತಶಿಲೆಯ ಬೆಳ್ಳಿಯ ಉಂಗುರಗಳಿಗೆ ತೂಗುಹಾಕಲಾಗಿದ್ದವು. ಜರತಾರಿ ಎಳೆಗಳಿಂದ ಕಸೂತಿಮಾಡಿದ ಸುಖಾಸನ ಪೀಠಗಳು, ಕೆಂಪು, ಬಿಳಿ, ಹಳದಿ ಹಾಗೂ ಕಪ್ಪು ವರ್ಣದ ಅಮೃತಶಿಲೆಯ ಹಾಸುಗಲ್ಲುಗಳಿಂದ ರಚಿತವಾದ ನೆಲದ ಮೇಲೆ ಇಡಲಾಗಿದ್ದವು.

7 ನಾನಾ ಆಕಾರದ ಬಂಗಾರದ ಪಾತ್ರೆಗಳಲ್ಲಿ ಅರಸನ ಔದಾರ್ಯಕ್ಕೆ ತಕ್ಕಂತೆ ಧಾರಾಳವಾಗಿ ದ್ರಾಕ್ಷಾರಸವನ್ನು ಕುಡಿಯಲು ಕೊಡುವ ವ್ಯವಸ್ಥೆ ಮಾಡಲಾಗಿತ್ತು.

8 ಮಧುಪಾನ ಸೇವನೆಯಲ್ಲಿ ಪ್ರತಿಯೊಬ್ಬನಿಗೂ ತನ್ನ ಇಚ್ಛಾನುಸಾರ ಕೊಡಬೇಕೆಂತಲೂ ಯಾರಿಗೂ ಒತ್ತಾಯ ಮಾಡಬಾರದೆಂದೂ ಸೇವಕರಿಗೆ ಅರಸನು ಆದೇಶವಿತ್ತಿದ್ದನು.

9 ವಷ್ಟಿರಾಣಿಯು, ಮಹಿಳೆಯರಿಗೋಸ್ಕರ ಅರಮನೆಯಲ್ಲಿ ಪ್ರತ್ಯೇಕ ಏರ್ಪಾಡು ಮಾಡಿಸಿದ್ದಳು.

10 ಏಳನೆಯ ದಿನ ಅರಸ ಅಹಷ್ವೇರೋಷನು ಮಧುಪಾನ ಮಾಡಿ ಆನಂದ ಲಹರಿಯಲ್ಲಿದ್ದಾಗ ಬಹುಸುಂದರಿಯಾದ ತನ್ನ

11 ಪತ್ನಿಯ ರೂಪರಾಶಿಯನ್ನು ತನ್ನ ಪ್ರಜೆಗಳ ಹಾಗೂ ಪದಾಧಿಕಾರಿಗಳ ಮುಂದೆ ಪ್ರದರ್ಶಿಸುವ ಸಲುವಾಗಿ ರಾಜಮುಕುಟವನ್ನು ಧರಿಸಿದ ಆಕೆಯನ್ನು ರಾಜಸನ್ನಿಧಿಗೆ ಕರೆತರುವಂತೆ ಆಸ್ಥಾನ ಸೇವಕರಾದ ಮೆಹೂಮಾನ್, ಬಿಜೆತಾ, ಹರ್ಬೋನಾ, ಬಿಗೆತಾ, ಅಬಗೆತಾ, ಜೇತರ್, ಕರ್ಕಸ್ ಎಂಬ ಏಳುಮಂದಿ ಕಂಚುಕಿಯರಿಗೆ ಅಪ್ಪಣೆಮಾಡಿದನು.

12 ಆದರೆ, ಕಂಚುಕಿಗಳು ರಾಜಾಜ್ಞೆಯನ್ನು ವಷ್ಟಿರಾಣಿಗೆ ತಿಳಿಸಿದಾಗ, ಆಕೆ ಬರಲು ನಿರಾಕರಿಸಿದಳು. ಇದನ್ನು ಕೇಳಿದಾಗ ಅರಸನು ಕುಪಿತಗೊಂಡು, ರೌದ್ರಾವೇಶನಾದನು.

13 ವಿಧಿನಿಯಮಗಳನ್ನು ಬಲ್ಲ ಪಂಡಿತರೆಲ್ಲರ ಮುಂದೆ ಅರಮನೆಯ ಸಂಗತಿಗಳನ್ನು ಇಡುವ ಪದ್ಧತಿಯಿತ್ತು.

14 ಅರಸ ಅಹಷ್ವೇರೋಷನ ಆಸ್ಥಾನದಲ್ಲಿ ರಾಜಸಾನ್ನಿಧ್ಯ ಸೇವಕರೂ ಪದಾಧಿಕಾರಿಗಳೂ ಆಗಿದ್ದ ಕರ್ಷೆನಾ, ಶೇತಾರ್, ಅದ್ಮಾತಾ, ತರ್ಷೀಷ್, ಮೆರೆಸ್, ಮರ್ಸೆನಾ, ಮೆಮೂಕಾನ್ ಎಂಬ ಏಳು ಮಂದಿ ಪರ್ಷಿಯ ಮತ್ತು ಮೇದ್ಯ ದೇಶಗಳ ರಾಜಪ್ರಮುಖರು ಇದ್ದರು. ಸಮಯೋಚಿತ ವ್ಯವಹಾರ ಜ್ಞಾನಹೊಂದಿದವರಾದ ಇವರನ್ನು ಅರಸನು, ಈ ವಿಷಯವಾಗಿ ವಿಚಾರಿಸಿದನು.

15 “ಕಂಚುಕಿಗಳ ಮುಖಾಂತರ ತಿಳಿಯಪಡಿಸಿದ ರಾಜಾಜ್ಞೆಯನ್ನು ಉಲ್ಲಂಘಿಸಿದ ವಷ್ಟಿರಾಣಿಯ ವಿರುದ್ಧ ಯಾವ ನ್ಯಾಯಬದ್ಧವಾದ ಕ್ರಮ ತೆಗೆದುಕೊಳ್ಳಬೇಕು?” ಎಂದು ಕೇಳಿದನು.

16 ಅರಸನ ಮುಂದೆಯೂ ನೆರೆದಿದ್ದ ಪದಾಧಿಕಾರಿಗಳ ಮುಂದೆಯೂ ಇದಕ್ಕೆ ಉತ್ತರ ಈಯುತ್ತ ಮೆಮೂಕನು: “ವಷ್ಟಿರಾಣಿಯು ಬಗೆದಿರುವ ಅವಮಾನ ಅರಸನೊಬ್ಬನ ವಿರುದ್ಧ ಮಾತ್ರವಲ್ಲ, ಅರಸನ ರಾಜ್ಯದಲ್ಲಿರುವ ಎಲ್ಲಾ ಪದಾಧಿಕಾರಿಗಳ ಹಾಗೂ ಪ್ರಜೆಗಳ ವಿರುದ್ಧವೂ ಆಗಿದೆ.

17 ಹೇಗೆಂದರೆ, ವಷ್ಟಿರಾಣಿಯ ಈ ವರ್ತನೆ ಇತರ ಎಲ್ಲಾ ಸ್ತ್ರೀಯರಿಗೂ ತಿಳಿದುಬಂದು ಅವರೂ ತಮ್ಮ ಗಂಡಂದಿರನ್ನು ತಿರಸ್ಕಾರಭಾವದಿಂದ ಕಾಣತೊಡಗುವರು. ‘ಅಹಷ್ವೇರೋಷನು ರಾಣಿ ವಷ್ಟಿಗೆ ತನ್ನ ಮುಂದೆ ಬರಲು ಹೇಳಿಕಳುಹಿಸಿದನು; ಆದರೆ ಆಕೆ ಬರಲು ನಿರಾಕರಿಸಿದಳು,’ ಎಂದು ಹೇಳಿಕೊಂಡು ಹೀಯಾಳಿಸುವರು.

18 ಇದಲ್ಲದೆ, ರಾಣಿಯ ಈ ವರ್ತನೆಯ ಬಗ್ಗೆ ಕೇಳಿಸಿಕೊಂಡ ಪರ್ಷಿಯ, ಮೇದ್ಯ ದೇಶಗಳ ಕುಲೀನ ಸ್ತ್ರೀಯರೂ ಇದೇ ರೀತಿ ಅರಸರ ಪದಾಧಿಕಾರಿಗಳೊಂದಿಗೆ ವರ್ತಿಸುವರು. ಹೀಗೆ ತಿರಸ್ಕಾರವೂ ಕೋಪವೂ ಉಂಟಾಗುವುದು.

19 ಅರಸರು ಸಮ್ಮತಿಸುವುದಾದರೆ, ವಷ್ಟಿರಾಣಿಯು ಅರಸರ ಸನ್ನಿಧಿಗೆ ಇನ್ನೆಂದೂ ಬಾರದಂತೆ ನಿಷೇಧಾಜ್ಞೆಯಾಗಬೇಕು. ಪಟ್ಟದರಸಿ ಆದ ಆಕೆಯ ಸ್ಥಾನವನ್ನು ಅವಳಿಗಿಂತಲೂ ಉತ್ತಮಳಾದ ಮತ್ತೊಬ್ಬಳಿಗೆ ಕೊಡುವಂತಾಗಬೇಕು. ಈ ಬಗ್ಗೆ ರಾಜಾಜ್ಞೆಯೊಂದನ್ನು ಹೊರಡಿಸಿ ಅದು ರದ್ದಾಗದಂತೆ ಪರ್ಷಿಯರ, ಮೇದ್ಯರ ಶಾಸನಗಳಲ್ಲಿ ಲಿಖಿತವಾಗಬೇಕು.

20 ಅರಸರ ಈ ನಿರ್ಣಯವು ತಮ್ಮ ಹಿರಿಯರಿಂದ ಹಿಡಿದು ಕಿರಿಯರವರೆಗೂ ಎಲ್ಲಾ ಮಹಿಳೆಯರು ತಮ್ಮ ಗಂಡಂದಿರೊಂದಿಗೆ ಗೌರವದಿಂದ ವರ್ತಿಸುವರು,” ಎಂದು ಸಲಹೆ ನೀಡಿದನು.

21 ಮೆಮೂಕನು ನೀಡಿದ ಈ ಸಲಹೆ ಅರಸನಿಗೂ ಪದಾಧಿಕಾರಿಗಳಿಗೂ ಸರಿಕಂಡುಬಂತು. ಅರಸನು ಅದರಂತೆ ಮಾಡಿದನು.

22 ಪ್ರತಿಯೊಂದು ಕುಟುಂಬದಲ್ಲೂ ಪುರುಷನೇ ಅಧಿಕಾರ ವಹಿಸಬೇಕು, ಅವನು ಸ್ವಜನರ ಭಾಷೆಯಲ್ಲೇ ವ್ಯವಹಾರ ನಡೆಸಬೇಕು ಎಂದು ತನ್ನ ಎಲ್ಲಾ ರಾಜಸಂಸ್ಥಾನಗಳಲ್ಲಿ ಪತ್ರಗಳ ಮುಖೇನ ಪ್ರಕಟಿಸಿದನು. ಇವು ಆಯಾ ಪ್ರಾಂತ್ಯಗಳ ಹಾಗೂ ಜನಸಾಮಾನ್ಯರ ಭಾಷೆಗಳಲ್ಲೂ ಬರೆಯಲಾದವು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು