ಮುನ್ನುಡಿ
“ಕಾಲವು ಸಂಪೂರ್ಣಗೊಂಡಾಗ ಇಹಪರಗಳಲ್ಲಿರುವ ಸಮಸ್ತವನ್ನು ಕ್ರಿಸ್ತಯೇಸುವಿನಲ್ಲಿ ಒಂದು ಕೂಡಿಸುವುದೇ ದೇವರ ಸಂಕಲ್ಪ,” ಇದೇ ಪೌಲನು ಎಫೆಸಿಯರಿಗೆ ಬರೆದ ಪತ್ರದ ತಿರುಳು. ಈ ವಿಷಯವನ್ನು ವಿಷದವಾಗಿಯೂ ಸವಿಸ್ತಾರವಾಗಿಯೂ ವಿವರಿಸಿದ ನಂತರ, ದೇವಜನರು ಪ್ರಭು ಯೇಸುವಿನ ಅನ್ಯೋನ್ಯತೆಯಲ್ಲಿದ್ದರೆ ಮಾತ್ರ ಅವರು ದೇವರ ಸಂಕಲ್ಪಕ್ಕನುಗುಣವಾಗಿ ಬಾಳಿ, ಮಾನವಕೋಟಿಯನ್ನು ವಿಶ್ವಾಸದಲ್ಲಿ ಐಕ್ಯಗೊಳಿಸಲು ಸಾಧ್ಯ ಎಂದು ಲೇಖಕನು ನಿರೂಪಿಸಿದ್ದಾನೆ.
ಪತ್ರದ ಮೊದಲನೆಯ ಭಾಗದಲ್ಲಿ, ಮಾನವಕೋಟಿಯ ಐಕಮತ್ಯವನ್ನು ಸಾಧಿಸಲು ದೇವರು ಹೇಗೆ ನಿಯೋಜಿಸಿದ್ದಾರೆಂದು ವಿವರಿಸಲಾಗಿದೆ. ದೇವರು ಕೆಲವರನ್ನು ತಮ್ಮ ಜನರನ್ನಾಗಿ ಆಯ್ಕೆಮಾಡಿಕೊಳ್ಳುತ್ತಾರೆ; ಜನರು ವಿಶ್ವಾಸಭ್ರಷ್ಟರಾದಾಗ ಅವರನ್ನು ಕ್ಷಮಿಸಿ, ಕ್ರಿಸ್ತಯೇಸುವಿನ ಮುಖಾಂತರ ಉದ್ಧರಿಸುತ್ತಾರೆ; ಪವಿತ್ರಾತ್ಮರನ್ನು ಪ್ರದಾನಮಾಡಿ, ತಮ್ಮ ಯೋಜನೆಯನ್ನು ಈಡೇರಿಸುವುದಾಗಿ ವಾಗ್ದಾನಮಾಡುತ್ತಾರೆ.
ಎರಡನೆಯ ಭಾಗದಲ್ಲಿ, ಓದುಗರು ಇತರರೊಂದಿಗೆ ಅನ್ಯೋನ್ಯವಾಗಿ ಬಾಳಿ, ಕ್ರಿಸ್ತಯೇಸುವಿನೊಂದಿಗೆ ತಮಗಿರುವ ನಿಕಟ ಬಾಂಧವ್ಯವನ್ನು ವ್ಯಕ್ತಪಡಿಸಬೇಕೆಂದು ಕರೆಕೊಡಲಾಗಿದೆ.
ದೇವಜನರಿಗೆ ತಮ್ಮತಮ್ಮೊಳಗೂ ಕ್ರಿಸ್ತಯೇಸುವಿನೊಂದಿಗೂ ಇರುವ ಅನ್ಯೋನ್ಯತೆಯನ್ನು ಲೇಖಕನು ವಿವಿಧ ಅಲಂಕಾರಗಳಿಂದ ಬಣ್ಣಿಸುತ್ತಾನೆ: ಸರ್ವಸದಸ್ಯರಿಂದ ಕೂಡಿದ ಧರ್ಮಸಭೆ ಒಂದು ಶರೀರ, ಕ್ರಿಸ್ತಯೇಸುವೇ ಅದರ ಶಿರಸ್ಸು; ಧರ್ಮಸಭೆ ಒಂದು ಕಟ್ಟಡ, ಕ್ರಿಸ್ತಯೇಸುವೇ ಅದರ ಮೂಲೆಗಲ್ಲು; ಧರ್ಮಸಭೆ ಒಬ್ಬ ಧರ್ಮಪತ್ನಿ, ಕ್ರಿಸ್ತಯೇಸುವೇ ಆಕೆಯ ಪತಿ. ಕ್ರಿಸ್ತಯೇಸುವಿನಲ್ಲಿ ತೋರಿಬರುವ ಸಮೃದ್ಧವಾದ ದೈವಾನುಗ್ರಹ ಲೇಖಕನನ್ನು ಗಹನವಾದ ಆಲೋಚನೆಗಳಲ್ಲಿ ತಲ್ಲೀನನಾಗುವಂತೆ ಮಾಡುತ್ತದೆ. ಕ್ರಿಸ್ತರ ಪ್ರೀತಿ, ಕೃಪೆ, ತ್ಯಾಗ, ಪಾಪಕ್ಷಮೆ, ಪರಿಶುದ್ಧತೆ ಇವುಗಳ ಹಿನ್ನೆಲೆಯಲ್ಲಿ ಲೇಖಕನು ಪ್ರತಿಯೊಂದನ್ನೂ ಅವಲೋಕಿಸುತ್ತಾನೆ.
ಪರಿವಿಡಿ
ಪೀಠಿಕೆ 1:1-2
ಕ್ರಿಸ್ತಯೇಸು ಮತ್ತು ಧರ್ಮಸಭೆ 1:3—3:21
ಕ್ರಿಸ್ತಯೇಸುವಿನಲ್ಲಿ ಹೊಸಜೀವ 4:1—6:20
ಸಮಾಪ್ತಿ 6:21-24