ಎಫೆಸದವರಿಗೆ 4 - ಕನ್ನಡ ಸತ್ಯವೇದವು C.L. Bible (BSI)ವಿವಿಧ ವರದಾನಗಳು 1 ಪ್ರಭುವಿನ ಸೇವೆಯ ನಿಮಿತ್ತ ಸೆರೆಯಾಳಾಗಿ ಇರುವ ನಾನು ನಿಮ್ಮಲ್ಲಿ ಬಿನ್ನವಿಸುವುದು ಏನೆಂದರೆ: ದೇವರ ಕರೆಗೆ ಅನುಗುಣವಾಗಿ ಯೋಗ್ಯ ಬಾಳುವೆ ನಡೆಸಿರಿ. 2 ಯಾವಾಗಲೂ ದೀನದಯಾಳತೆ, ವಿನಯಶೀಲತೆ ಹಾಗೂ ಶಾಂತಿಸಮಾಧಾನವುಳ್ಳವರಾಗಿರಿ. ಪರಸ್ಪರ ಪ್ರೀತಿಯಿಂದಲೂ ಸಹನೆಯಿಂದಲೂ ವರ್ತಿಸಿರಿ. 3 ಪವಿತ್ರಾತ್ಮರಿಂದ ಉಂಟಾಗುವ ಐಕ್ಯತೆಯನ್ನು ಕಾಪಾಡಿಕೊಳ್ಳಲು ಆಸಕ್ತರಾಗಿರಿ. ಅದು ನಿಮ್ಮನ್ನು ಸಮಾಧಾನದಲ್ಲಿ ಬಂಧಿಸುವುದು. 4 ನೀವೆಲ್ಲರೂ ಒಂದೇ ಶರೀರಕ್ಕೆ ಸೇರಿದವರು; ಒಬ್ಬರೇ ಪವಿತ್ರಾತ್ಮರನ್ನು ಪಡೆದವರು; ಒಂದೇ ನಿರೀಕ್ಷೆಗಾಗಿ ಕರೆಹೊಂದಿದವರು. 5 ನಮ್ಮೆಲ್ಲರಿಗೂ ಪ್ರಭು ಒಬ್ಬರೇ; ವಿಶ್ವಾಸವೂ ಒಂದೇ; ದೀಕ್ಷಾಸ್ನಾನವೂ ಒಂದೇ. 6 ದೇವರು ಒಬ್ಬರೇ, ಸರ್ವರ ತಂದೆಯು ಅವರೇ; ಸರ್ವಶ್ರೇಷ್ಠರೂ ಅವರೇ; ಸರ್ವರ ಮೂಲಕ ಕಾರ್ಯ ನಿರ್ವಹಿಸುವವರೂ ಅವರೇ ಮತ್ತು ಸಮಸ್ತರಲ್ಲಿ ವಾಸಿಸುವವರೂ ಅವರೇ. 7 ಆದರೂ ನಮ್ಮಲ್ಲಿ ಪ್ರತಿಯೊಬ್ಬನೂ ಕ್ರಿಸ್ತಯೇಸು ಅನುಗ್ರಹಿಸುವ ಪ್ರಕಾರವೇ ವರಗಳನ್ನು ಪಡೆದಿದ್ದಾನೆ. 8 ಎಂತಲೇ ಪವಿತ್ರಗ್ರಂಥದಲ್ಲಿ ಹೀಗಿದೆ: “ಆತನು ಉನ್ನತಿಗೇರಿದನು ಶತ್ರುಗಳನು ಸೆರೆಯಾಳಾಗಿ ಕೊಂಡೊಯ್ದನು ನರಮಾನವರಿಗಿತ್ತನು ವರದಾನಗಳನು.” 9 ‘ಏರಿದನು’ ಎನ್ನುವುದರ ಅರ್ಥವಾದರೂ ಏನು? ಆತನು ಮೊದಲು ಭೂಗರ್ಭಕ್ಕೂ ಇಳಿದಿದ್ದನು ಎಂಬ ಅರ್ಥವನ್ನೂ ಒಳಗೊಂಡಿದೆ. 10 ಇಳಿದು ಬಂದಿದ್ದಾತನೇ ಲೋಕಗಳಿಗೆಲ್ಲ ಮೇಲೇರಿಹೋಗಿದ್ದಾನೆ. ತನ್ನ ಪ್ರಸನ್ನತೆಯಿಂದ ಇಡೀ ಜಗತ್ತನ್ನೇ ಆವರಿಸಿದ್ದಾನೆ. 11 ಈ ವ್ಯಕ್ತಿ ನರಮಾನವರಿಗೆ ವರದಾನಗಳನ್ನಿತ್ತರು. ಕೆಲವರನ್ನು ಪ್ರೇಷಿತರನ್ನಾಗಿಯೂ ಕೆಲವರನ್ನು ಸಭಾಪಾಲಕರನ್ನಾಗಿಯೂ ಮತ್ತು ಬೋಧಕರನ್ನಾಗಿಯೂ ನೇಮಿಸಿದರು. 12 ದೇವಜನರನ್ನು ಪರಿಣಿತರನ್ನಾಗಿಸಿ ದೇವರ ಸೇವೆಗೆ ಸಿದ್ಧಗೊಳಿಸಲೆಂದು ಮತ್ತು ಯೇಸುಕ್ರಿಸ್ತರ ದೇಹವಾದ ಧರ್ಮಸಭೆ ಅಭಿವೃದ್ಧಿಹೊಂದಲೆಂದು ಈ ವರಗಳನ್ನು ಅವರಿಗೆ ನೀಡಿದರು. 13 ಹೀಗೆ ನಾವೆಲ್ಲರೂ ಒಂದೇ ವಿಶ್ವಾಸದಿಂದಲೂ ದೇವರ ಪುತ್ರನನ್ನು ಕುರಿತ ಜ್ಞಾನದಿಂದಲೂ ಐಕಮತ್ಯವನ್ನು ಮತ್ತು ಪರಿಪಕ್ವತೆಯನ್ನು ಪಡೆಯುತ್ತೇವೆ. ಜ್ಞಾನಾರ್ಜನೆಯನ್ನು ಪಡೆದವರಾಗಿ, ಕ್ರಿಸ್ತಯೇಸುವಿನ ಪರಿಪೂರ್ಣತೆಯ ಮಟ್ಟವನ್ನು ಮುಟ್ಟುತ್ತೇವೆ. 14 ಇನ್ನು ಮೇಲೆ ನಾವು ಸಣ್ಣ ಮಕ್ಕಳಂತೆ ದುರ್ಜನರ ವಂಚನೆಗೂ ದುರ್ಬೋಧಕರ ಕುಯುಕ್ತಿಗೂ ಒಳಪಟ್ಟು ಅತ್ತಿತ್ತ ಅಲೆದಾಡುವುದಿಲ್ಲ. ಗಾಳಿ ಬಂದಂತೆ ತೂರಾಡುವುದಿಲ್ಲ. 15 ಬದಲಾಗಿ, ಪ್ರೀತಿಯಿಂದ ಸತ್ಯವನ್ನೇ ನುಡಿಯುತ್ತೇವೆ. ಶಿರಸ್ಸಾದ ಕ್ರಿಸ್ತಯೇಸುವಿನ ಅನ್ಯೋನ್ಯತೆಯಲ್ಲಿ ಸರ್ವತೋಮುಖವಾಗಿ ಬೆಳೆಯುತ್ತೇವೆ. 16 ಇಡೀ ದೇಹವು ಕ್ರಿಸ್ತಯೇಸುವನ್ನೇ ಆಧರಿಸಿದೆ. ಅವರಲ್ಲಿಯೇ ಎಲ್ಲ ನರನಾಡಿಗಳು, ಕೀಲುಗಂಟು಼ಗಳು ಒಂದಾಗಿ ಕೆಲಸಮಾಡುತ್ತವೆ. ಪ್ರತಿಯೊಂದು ಅಂಗವೂ ತನ್ನ ಕೆಲಸವನ್ನು ಸೂಕ್ತರೀತಿಯಲ್ಲಿ ನಿರ್ವಹಿಸುವುದರಿಂದ ಇಡೀ ದೇಹ ಬೆಳೆಯುತ್ತಾ, ಪ್ರೀತಿಯಲ್ಲಿ ಪ್ರವರ್ಧಿಸುತ್ತಾ ಕ್ಷೇಮಾಭಿವೃದ್ಧಿಯನ್ನು ಪಡೆಯುತ್ತದೆ. ಹೊಸ ಬಾಳಿನೆಡೆಗೆ 17 ಪ್ರಭುವಿನ ಹೆಸರಿನಲ್ಲಿ ನಾನು ನಿಮಗೆ ಒತ್ತಿ ಹೇಳುತ್ತೇನೆ: ಇನ್ನು ಮುಂದೆ ನೀವು ಅನ್ಯಜನರಂತೆ ಜೀವಿಸುವುದನ್ನು ತ್ಯಜಿಸಿರಿ. ಅವರ ಆಲೋಚನೆಗಳು ಹುರುಳಿಲ್ಲದವು. 18 ಅವರ ಮನಸ್ಸಿಗೆ ಕತ್ತಲು ಕವಿದಿದೆ. ಅವರು ಅಜ್ಞಾನಿಗಳೂ ಕಠಿಣ ಹೃದಯಿಗಳೂ ಆಗಿರುವುದರಿಂದ ದೇವರು ಕೊಡುವ ಜೀವಕ್ಕೆ ಹೊರತಾಗಿದ್ದಾರೆ. 19 ಲಜ್ಜೆಗೆಟ್ಟವರಾಗಿ ದುರಿಚ್ಛೆಗಳಿಗೆ ಮಾರುಹೋಗಿದ್ದಾರೆ; ಅಶುದ್ಧ ಕಾರ್ಯಗಳಲ್ಲೇ ನಿರತರಾಗಿದ್ದಾರೆ. 20 ಕ್ರಿಸ್ತಯೇಸುವಿನಿಂದ ನೀವು ಇಂಥದ್ದೇನನ್ನು ಕಲಿಯಲಿಲ್ಲ. 21 ಅವರ ವಿಷಯವಾಗಿ ನೀವು ಕೇಳಿದ್ದು ಮತ್ತು ಕಲಿತದ್ದು ಅವರಲ್ಲಿರುವ ಸತ್ಯಕ್ಕೆ ಅನುಸಾರವಾಗಿತ್ತಲ್ಲವೇ? 22 ಆದ್ದರಿಂದ ನೀವು ನಿಮ್ಮ ಹಿಂದಿನ ನಡತೆಯನ್ನು ಅನುಸರಿಸದೆ ಹಳೆಯ ಸ್ವಭಾವವನ್ನು ಕಿತ್ತೊಗೆಯಿರಿ; ಅದು ಕಾಮಾಭಿಲಾಷೆಯಿಂದ ಕಲುಷಿತವಾಗಿದೆ. 23 ನಿಮ್ಮ ಹೃನ್ಮನಗಳು ನವೀಕೃತವಾಗಲಿ. 24 ನೂತನ ಸ್ವಭಾವವನ್ನು ಧರಿಸಿಕೊಳ್ಳಿರಿ. ಇದು ದೇವರ ಅನುರೂಪದಲ್ಲಿ ನಿರ್ಮಿತವಾದ ಸ್ವಭಾವ; ದೇವರೊಂದಿಗೆ ಸತ್ಸಂಬಂಧವುಳ್ಳ ಹಾಗೂ ನೈಜವಾದ ಪಾವನ ಸ್ವಭಾವ. 25 ಆದುದರಿಂದ, ಸುಳ್ಳಾಡುವುದನ್ನು ಬಿಟ್ಟುಬಿಡಿ. ಒಬ್ಬರೊಡನೊಬ್ಬರು ಸತ್ಯವನ್ನೇ ನುಡಿಯಿರಿ. ಏಕೆಂದರೆ, ನಾವೆಲ್ಲರೂ ಒಂದೇ ಶರೀರದ ಅಂಗಗಳು. 26 ಕೋಪಮಾಡಬೇಕಾಗಿ ಬಂದರೂ ಪಾಪಮಾಡಬೇಡಿರಿ; ಸೂರ್ಯನು ಮುಳುಗುವ ಮುನ್ನ ನಿಮ್ಮ ಕೋಪವು ಇಳಿಯಲಿ. 27 ಸೈತಾನನಿಗೆ ಅವಕಾಶ ಕೊಡಬೇಡಿ. 28 ಕಳ್ಳತನ ಮಾಡುವವನು ಕಳ್ಳತನವನ್ನು ಬಿಟ್ಟುಬಿಡಲಿ; ಶ್ರಮಪಟ್ಟು ದುಡಿದು ಸಂಪಾದಿಸಲಿ. ಆಗ ತನ್ನ ಪ್ರಾಮಾಣಿಕ ದುಡಿಮೆಯಿಂದ ಕಷ್ಟದಲ್ಲಿರುವವರಿಗೆ ನೆರವು ನೀಡಲು ಸಾಧ್ಯವಾಗುವುದು. 29 ನಿಮ್ಮ ಬಾಯಿಂದ ಕೆಟ್ಟಮಾತುಗಳು ಬಾರದಿರಲಿ. ಪ್ರತಿಯಾಗಿ ನಿಮ್ಮ ಮಾತುಗಳು ಆದರ್ಶಕರವಾಗಿರಲಿ; ಸಮಯೋಚಿತವಾಗಿರಲಿ, ಕೇಳುವವರ ಕಿವಿಗದು ಹಿತಕರವಾಗಿರಲಿ. 30 ದೇವರ ಪವಿತ್ರಾತ್ಮರನ್ನು ನೋಯಿಸದಿರಿ; ವಿಮೋಚನೆಯ ದಿನದಂದು ನೀವು ದೇವರಿಗೆ ಸೇರಿದವರು ಎಂಬುದನ್ನು ತೋರಿಸಲು ನಿಮ್ಮ ಮೇಲೆ ಒತ್ತಲಾಗಿರುವ ಮುದ್ರೆಯು ಅವರೇ. 31 ಎಲ್ಲ ವಿಧವಾದ ದ್ವೇಷ-ದೂಷಣೆ, ಕೋಪ-ಕ್ರೋಧ ಮತ್ತು ಕೆಡುಕುತನವನ್ನು ನಿಮ್ಮಿಂದ ದೂರಮಾಡಿರಿ. 32 ಪರಸ್ಪರ ಕರುಣೆಯಿಂದಲೂ ಕನಿಕರದಿಂದಲೂ ವರ್ತಿಸಿರಿ. ಯೇಸುಕ್ರಿಸ್ತರಲ್ಲಿ ದೇವರು ನಿಮ್ಮನ್ನು ಕ್ಷಮಿಸಿದಂತೆಯೇ, ನೀವು ಸಹ ಒಬ್ಬರನ್ನೊಬ್ಬರು ಕ್ಷಮಿಸಿರಿ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India