ಎಫೆಸದವರಿಗೆ 2 - ಕನ್ನಡ ಸತ್ಯವೇದವು C.L. Bible (BSI)ಮೃತ್ಯುವಿನಿಂದ ಅಮೃತಕ್ಕೆ 1 ನಿಮ್ಮ ಅಪರಾಧಗಳ ಹಾಗೂ ಪಾಪಗಳ ದೆಸೆಯಿಂದ ಹಿಂದೊಮ್ಮೆ ನೀವು ಆಧ್ಯಾತ್ಮಿಕವಾಗಿ ಮೃತರಾಗಿದ್ದಿರಿ. 2 ಆಗ ನೀವು ಲೋಕದ ರೀತಿನೀತಿಗಳನ್ನು ಅನುಸರಿಸಿ ಬಾಳಿದಿರಿ. ವಾಯುಮಂಡಲದಲ್ಲಿನ ಅಶರೀರ ಶಕ್ತಿಗಳ ಅಧಿಪತಿಗೆ ಅಧೀನರಾಗಿದ್ದಿರಿ. ದುಷ್ಕರ್ಮಿಗಳನ್ನು ಪ್ರಚೋದಿಸುತ್ತಲಿರುವ ದುರಾತ್ಮನಿಗೆ ವಿಧೇಯರಾಗಿದ್ದಿರಿ. 3 ವಾಸ್ತವವಾಗಿ ಹಿಂದೊಮ್ಮೆ ನಾವೆಲ್ಲರು ಸಹ ಹಾಗೆಯೇ ಇದ್ದೆವು. ಶಾರೀರಿಕ ಆಶೆಆಮಿಷಗಳಿಗೆ ತುತ್ತಾಗಿದ್ದೆವು; ಮಾನಸಿಕ ಹಾಗೂ ಶಾರೀರಿಕ ದುರಿಚ್ಛೆಗಳನ್ನೇ ಈಡೇರಿಸುತ್ತಾ ಬಂದೆವು. ಸ್ವಭಾವತಃ ನಾವು ಸಹ ಇತರರಂತೆಯೇ ದೈವಕೋಪಕ್ಕೆ ಗುರಿಯಾಗಿದ್ದೆವು. 4 ಆದರೆ ಕರುಣಾಮಯ ದೇವರು ನಮ್ಮನ್ನು ಅಪಾರವಾಗಿ ಪ್ರೀತಿಸಿ, 5 ನಮ್ಮ ಅಪರಾಧಗಳ ನಿಮಿತ್ತ ಆಧ್ಯಾತ್ಮಿಕವಾಗಿ ಮೃತರಾಗಿದ್ದ ನಮ್ಮನ್ನು ಕ್ರಿಸ್ತಯೇಸುವಿನೊಡನೆ ಜೀವಂತರನ್ನಾಗಿ ಮಾಡಿದರು. (ದೈವಾನುಗ್ರಹದಿಂದಲೇ ನೀವೀಗ ಜೀವೋದ್ಧಾರ ಹೊಂದಿದ್ದೀರಿ). 6 ಯೇಸುಕ್ರಿಸ್ತರೊಡನೆ ನಮ್ಮನ್ನೂ ಎಬ್ಬಿಸಿ, ಸ್ವರ್ಗಲೋಕದಲ್ಲಿ ಅವರ ಸನ್ನಿಧಿಯಲ್ಲಿಯೇ ಮಂಡಿಸುವ ಅವಕಾಶ ಮಾಡಿಕೊಟ್ಟರು. 7 ದೇವರು ಯೇಸುಕ್ರಿಸ್ತರಲ್ಲಿ ನಮಗೆ ತೋರಿದ ದಯೆಯ ಮೂಲಕ ತಮ್ಮ ಅನುಗ್ರಹದ ಶ್ರೀಮಂತಿಕೆಯನ್ನು ಮುಂದಣ ಯುಗಗಳಲ್ಲಿ ತಿಳಿಯಪಡಿಸುವುದೇ ಅವರ ಉದ್ದೇಶವಾಗಿತ್ತು. 8 ದೈವಾನುಗ್ರಹದಿಂದಲೇ ನೀವು ವಿಶ್ವಾಸದ ಮೂಲಕ ಜೀವೋದ್ಧಾರ ಹೊಂದಿದ್ದೀರಿ. ಇದು ನಿಮ್ಮ ಪ್ರಯತ್ನದ ಫಲವಲ್ಲ; ದೇವರಿತ್ತ ವರಪ್ರಸಾದ. 9 ಇದು ಮಾನವರ ಪುಣ್ಯಕಾರ್ಯಗಳ ಪರಿಣಾಮವೂ ಅಲ್ಲ. ಆದುದರಿಂದ ಯಾರೂ ಹೆಮ್ಮೆಪಡಲು ಆಸ್ಪದವಿಲ್ಲ. 10 ನಾವಾದರೋ ದೇವರ ಕಲಾಕೃತಿಗಳು. ಕ್ರಿಸ್ತಯೇಸುವಿನಲ್ಲಿ ನಾವು ಸತ್ಕಾರ್ಯಗಳನ್ನು ಮಾಡುತ್ತಾ ಬಾಳಬೇಕೆಂದು ತಾವು ಮೊದಲೇ ನಿರ್ಣಯಿಸಿದ್ದಂತೆ ದೇವರು ನಮ್ಮನ್ನು ಸೃಷ್ಟಿಸಿದ್ದಾರೆ. ಒಂದೇ ಜನಾಂಗ 11 ಹಿಂದೊಮ್ಮೆ ನೀವು ಅನ್ಯಜನರಾಗಿದ್ದಿರಿ ಎಂಬುದು ನಿಮ್ಮ ನೆನಪಿನಲ್ಲಿರಲಿ; ಆಗ ಶಾರೀರಿಕ ಸುನ್ನತಿ ಪಡೆದವರು ನಿಮ್ಮನ್ನು ‘ಸುನ್ನತಿಯಿಲ್ಲದವರು’ ಎಂದು ತುಚ್ಛೀಕರಿಸಿ ಕರೆಯುತ್ತಿದ್ದರು. 12 ಆಗ ನೀವು ಯೇಸುಕ್ರಿಸ್ತರಿಂದ ದೂರವಿದ್ದಿರಿ; ದೇವರು ಆಯ್ದುಕೊಂಡ ಜನಾಂಗಕ್ಕೆ ಸೇರದೆ ಪರಕೀಯರಾಗಿದ್ದಿರಿ; ದೇವರು ತಮ್ಮ ಜನರೊಂದಿಗೆ ಮಾಡಿಕೊಂಡ ಒಡಂಬಡಿಕೆಯಲ್ಲಿ ಪಾಲಿಲ್ಲದವರಾಗಿದ್ದಿರಿ; ನಂಬಿಕೆ ನಿರೀಕ್ಷೆ ಇಲ್ಲದೆ ಬಾಳಿದಿರಿ ಮತ್ತು ದೇವರಿಲ್ಲದವರಂತೆ ಲೋಕದಲ್ಲಿ ಬದುಕಿದಿರಿ. 13 ಹೀಗೆ ಹಿಂದೊಮ್ಮೆ ದೇವರಿಂದ ದೂರವಾಗಿದ್ದ ನಿಮ್ಮನ್ನು ಕ್ರಿಸ್ತಯೇಸು ಸುರಿಸಿದ ರಕ್ತದ ಮೂಲಕ ದೇವರ ಹತ್ತಿರಕ್ಕೆ ತರಲಾಯಿತು. 14 ಯೇಸುಕ್ರಿಸ್ತರೇ ನಮ್ಮ ಶಾಂತಿದಾತ. ನಿಮ್ಮನ್ನೂ ನಮ್ಮನ್ನೂ ಒಂದುಗೂಡಿಸಿದವರು ಅವರೇ. ನಮ್ಮೀರ್ವರನ್ನು ಪ್ರತ್ಯೇಕಿಸಿದ್ದ ಹಗೆತನವೆಂಬ ಅಡ್ಡಗೋಡೆಯನ್ನು ತಮ್ಮ ಶರೀರದಿಂದಲೇ ಕೆಡವಿಹಾಕಿದ್ದಾರೆ. 15 ವಿಧಿನಿಯಮಗಳಿಂದ ಕೂಡಿದ ಧರ್ಮಶಾಸ್ತ್ರವನ್ನು ನಿರರ್ಥಕಗೊಳಿಸಿದ್ದಾರೆ. ಉಭಯರನ್ನು ಒಂದುಗೂಡಿಸಿ, ಶಾಂತಿ ಸಮಾಧಾನವನ್ನೇರ್ಪಡಿಸಿ, ನೂತನ ಮಾನವನನ್ನಾಗಿ ಪರಿವರ್ತಿಸಿದ್ದಾರೆ. 16 ತಮ್ಮ ಶಿಲುಬೆಯ ಮರಣದ ಮೂಲಕ ಹಗೆತನವನ್ನು ನಿರ್ಮೂಲಗೊಳಿಸಿ ಉಭಯತ್ರರನ್ನು ಒಂದೇ ದೇಹದಂತೆ ಮಾಡಿ ದೇವರೊಂದಿಗೆ ಸಂಧಾನಗೊಳಿಸಿದ್ದಾರೆ. 17 ಯೇಸುಕ್ರಿಸ್ತರು ಬಂದು ದೇವರಿಂದ ದೂರವಾಗಿದ್ದ ನಿಮಗೂ ಹತ್ತಿರವಾಗಿದ್ದ ನಮಗೂ ಶಾಂತಿಯ ಸಂದೇಶವನ್ನು ಸಾರಿದರು. 18 ಇದರ ಪರಿಣಾಮವಾಗಿ ಅವರ ಮುಖಾಂತರವೇ ಉಭಯತ್ರರು ಒಂದೇ ಪವಿತ್ರಾತ್ಮ ಅವರಲ್ಲಿ ಪಿತನ ಸಾನ್ನಿಧ್ಯವನ್ನು ಸೇರಲು ಮಾರ್ಗವಾಯಿತು. 19 ಹೀಗಿರಲಾಗಿ, ನೀವು ಇನ್ನು ಮೇಲೆ ಪರಕೀಯರೂ ಪರದೇಶಿಗಳೂ ಆಗಿರದೆ, ದೇವಜನರೊಂದಿಗೆ ಸಹಜೀವಿಗಳು ಮತ್ತು ದೇವರ ಮನೆತನದವರು ಆಗಿದ್ದೀರಿ. 20 ಪ್ರೇಷಿತರು ಹಾಗೂ ಪ್ರವಾದಿಗಳೂ ಹಾಕಿದ ತಳಹದಿಯ ಮೇಲೆ ನಿಮ್ಮನ್ನು ನಿರ್ಮಿಸಲಾಗಿದೆ. ಯೇಸುಕ್ರಿಸ್ತರೇ ಈ ತಳಹದಿಯ ಮುಖ್ಯಮೂಲೆಗಲ್ಲು. 21 ಇಡೀ ಕಟ್ಟಡವು ಅವರನ್ನೇ ಆಧರಿಸಿ, ಎಲ್ಲಾ ಭಾಗಗಳು ಒಂದಕ್ಕೊಂದು ಹೊಂದಿಕೆಯಾಗಿ ನಿಂತು, ಪ್ರಭುವಿಗೆ ಅರ್ಪಿತವಾದ ದೇವಮಂದಿರ ಆಗುತ್ತದೆ. 22 ಯೇಸುಕ್ರಿಸ್ತರ ಅನ್ಯೋನ್ಯತೆಯಲ್ಲಿ ನೀವು ಸಹ ಇತರರೆಲ್ಲರೊಡನೆ ದೇವರ ನಿವಾಸಕ್ಕೆ ತಕ್ಕ ಮಂದಿರವಾಗಿ ಪವಿತ್ರಾತ್ಮ ಅವರಿಂದ ಕಟ್ಟಲ್ಪಡುತ್ತಿದ್ದೀರಿ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India