ಮುನ್ನುಡಿ
ಶ್ರೀಬೈಬಲ್ಲಿನ “ಎಜ್ರನು” ಎಂಬ ಈ ಭಾಗ “ಪೂರ್ವಕಾಲದ ಇತಿಹಾಸ” ಎಂಬ ಗ್ರಂಥಗಳಲ್ಲಿ ವಿವರಿಸಲಾಗಿರುವ ಚರಿತ್ರೆಯನ್ನು ಮುಂದುವರಿಸುತ್ತದೆ. ಯೆಹೂದ್ಯರನ್ನು ಬಾಬಿಲೋನಿನ ಅರಸ ನೆಬೂಕದ್ನೆಚ್ಚರನು ತನ್ನ ದೇಶಕ್ಕೆ ಸೆರೆಯಾಳುಗಳನ್ನಾಗಿ ಎಳೆದೊಯ್ಯುತ್ತಾನೆ. ಅಲ್ಲಿ ಸುಮಾರು ಎಪ್ಪತ್ತು ವರ್ಷಕಾಲ ಗುಲಾಮಗಿರಿಯನ್ನೂ ಅನುಭವಿಸುತ್ತಾರೆ. ಪರ್ಷಿಯಾದ ಅರಸ ಸೈರಸನು ಕ್ರಿ.ಪೂ. 538ರಲ್ಲಿ ಬಾಬಿಲೋನನ್ನು ವಶಪಡಿಸಿಕೊಳ್ಳುತ್ತಾನೆ. ಸುದೈವದಿಂದ ಅದೇ ವರ್ಷದಲ್ಲಿ ಯೆಹೂದ್ಯರಿಗೆ ಬಿಡುಗಡೆಯನ್ನು ಘೋಷಿಸುತ್ತಾನೆ.
ಯೆಹೂದ್ಯರು ಬಾಬಿಲೋನಿನಿಂದ ತಂಡತಂಡವಾಗಿ ಹಿಂದಿರುಗುತ್ತಾರೆ. ಮೊದಲನೆಯ ತಂಡ ಜೆರುಬ್ಬಾಬೆಲ್ ಎಂಬವನ ಮುಂದಾಳತ್ವದಲ್ಲಿ ಜೆರುಸಲೇಮಿಗೆ ಬರುತ್ತದೆ. ನೆಲಸಮವಾಗಿದ್ದ ಮಹಾದೇವಾಲಯವನ್ನು ಪುನಃ ಕಟ್ಟಿಸಿ ಕ್ರಿ.ಪೂ.515ರಲ್ಲಿ ಪ್ರತಿಷ್ಠಾಪಿಸುತ್ತಾರೆ. ಅಲ್ಲಿ ಆರಾಧನಾವಿಧಿಗಳು ಮತ್ತೆ ಆರಂಭವಾಗುತ್ತವೆ.
ಕೆಲವು ವರ್ಷಗಳಾದ ಬಳಿಕ ಮತ್ತೊಂದು ತಂಡ ಎಜ್ರ ಎಂಬವನ ಮುಂದಾಳತ್ವದಲ್ಲಿ ಹಿಂದಕ್ಕೆ ಬರುತ್ತದೆ. ಈ ಎಜ್ರ ಒಬ್ಬ ಗುರು ಹಾಗು ಧರ್ಮಶಾಸ್ತ್ರ ಪಂಡಿತ. ಈತ ಯೆಹೂದ್ಯರ ಧಾರ್ಮಿಕ, ಸಾಮಾಜಿಕ ಹಾಗು ಸಾಂಸ್ಕೃತಿಕ ಸುಧಾರಣೆಯನ್ನು ಕೈಗೊಳ್ಳುತ್ತಾನೆ. ಅನ್ಯಜನರೊಡನೆ ಯೆಹೂದ್ಯರ ವಿವಾಹ ಸಂಬಂಧವನ್ನು ರದ್ದುಗೊಳಿಸಲು ಅವನು ಮಾಡಿದ ಪ್ರಯತ್ನ ಇಲ್ಲಿ ಗಮನಾರ್ಹ.
ಈ ಗ್ರಂಥದ ಕೆಲವುಭಾಗ ಹಿಬ್ರು ಭಾಷೆಯಲ್ಲಿದ್ದರೆ ಕೆಲವು ಭಾಗ (4:8-6; 7:12—2:6) ಅರಮಾಯಿಕ್ ಭಾಷೆಯಲ್ಲಿವೆ.
ಪರಿವಿಡಿ
ಬಾಬಿಲೋನಿನಿಂದ ಹಿಂದಿರುಗಿದ ಮೊದಲನೆಯ ತಂಡ 1:1—2:70
ಮಹಾದೇವಾಲಯದ ಪುನರ್ ನಿರ್ಮಾಣ ಹಾಗು ಪ್ರತಿಷ್ಠಾಪನೆ 3:1—6:22
ಹಿಂದಿರುಗಿದ ಎಜ್ರನ ತಂಡ 7:1—10:44