ಮುನ್ನುಡಿ
ಈ ಲೇಖನ ಪ್ರಾರಂಭದಲ್ಲಿ ಪತ್ರದಂತಿಲ್ಲವಾದರೂ ಅಂತ್ಯದಲ್ಲಿ ಪತ್ರದ ರೂಪವನ್ನೇ ತಾಳುತ್ತದೆ. ಅಂದು ಹೆಚ್ಚುಹೆಚ್ಚಿನ ಅಡ್ಡಿ ಆತಂಕಗಳಿಗೆ ಒಳಗಾಗಿ ಕಂಗೆಟ್ಟಿದ್ದ ಕ್ರೈಸ್ತವಿಶ್ವಾಸಿಗಳು ಯೆಹೂದ್ಯ ಧರ್ಮಕ್ಕೆ ಹಿಂದಿರುಗುವ ಅಪಾಯವಿತ್ತು. ಅಂಥವರನ್ನೇ ಉದ್ದೇಶಿಸಿ ಬರೆದ ಪತ್ರ ಇದು. ಯೇಸುಕ್ರಿಸ್ತರೇ ಸತ್ಯವಾದ ಹಾಗೂ ಅಂತಿಮ ಹಾಗು ಸಂಪೂರ್ಣವಾದ ದೈವಶೃತಿ. ಆದ್ದರಿಂದ ಅವರಲ್ಲಿ ವಿಶ್ವಾಸವಿಟ್ಟವರು ಅಚಲರಾಗಿರಬೇಕೆಂದು ಲೇಖಕನು ಒತ್ತಿಹೇಳುತ್ತಾನೆ. ಮೂರು ತತ್ವಗಳನ್ನು ಈ ಪತ್ರದಲ್ಲಿ ಎತ್ತಿ ಹಿಡಿಯಲಾಗಿದೆ: 1. ಯೇಸುಸ್ವಾಮಿ ದೇವಪಿತನ ನಿತ್ಯಪುತ್ರ, ದೇವಪಿತನಿಗೆ ವಿಧೇಯನಾಗಿ ಸಾವುನೋವನ್ನು ಅನುಭವಿಸಿದಾತ. ದೇವರ ಏಕೈಕ ಪುತ್ರನಾಗಿದ್ದುದರಿಂದ ಯೇಸು ಹಳೆಯ ಒಡಂಬಡಿಕೆಯ ಎಲ್ಲಾ ಪ್ರವಾದಿಗಳಿಗೂ ದೇವದೂತರಿಗೂ ಮೋಶೆಗೂ ಮಿಗಿಲಾದ ವ್ಯಕ್ತಿ. 2. ಹಳೆಯ ಒಡಂಬಡಿಕೆಯ ಯಾಜಕರೆಲ್ಲರಿಗಿಂತಲೂ ಯೇಸುಸ್ವಾಮಿ ಎಷ್ಟೋ ಶ್ರೇಷ್ಠಯಾಜಕರು ಹಾಗೂ ಚಿರಂತಗುರು ಎಂದು ದೇವರೇ ಸ್ಪಷ್ಟಪಡಿಸಿದ್ದಾರೆ. 3. ಯೇಸುವಿನಲ್ಲಿ ವಿಶ್ವಾಸವಿಡುವವನು ಪಾಪ, ಪರಿತಾಪ ಮತ್ತು ಮೃತ್ಯುವಿನಿಂದ ವಿಮುಕ್ತನಾಗುತ್ತಾನೆ. ಶ್ರೇಷ್ಠ ಹಾಗೂ ಪ್ರಧಾನಯಾಜಕರಾದ ಯೇಸು ನಿಜವಾದ ಜೀವೋದ್ಧಾರಕ. ಯೆಹೂದ್ಯ ಧರ್ಮದ ವಿಧಿನಿಯಮಗಳೂ ಪ್ರಾಣಿಬಲಿಯರ್ಪಣೆಗಳೂ ಕೇವಲ ಸನ್ನೆಸಂಕೇತಗಳು ಮಾತ್ರ.
ಇಸ್ರಯೇಲಿನ ಐತಿಹಾಸಿಕ ಗಣ್ಯವ್ಯಕ್ತಿಗಳ ಆದರ್ಶವನ್ನು ನಿರೂಪಿಸಿ, ಓದುಗರು ತಮ್ಮ ವಿಶ್ವಾಸದಲ್ಲಿ ದೃಢವಾಗಿರುವಂತೆ (ಅಧ್ಯಾಯ 11) ಯೇಸುಸ್ವಾಮಿಯನ್ನೇ ಗುರಿಯಾಗಿಟ್ಟುಕೊಂಡು ಕೊನೆಯವರೆಗೂ ಸದೃಢರಾಗಿ ಬಾಳುವಂತೆ (ಅಧ್ಯಾಯ 12) ಲೇಖಕ ಉಪದೇಶಿಸುತ್ತಾನೆ. ತಮಗೆ ಬಂದೊದಗಬಹುದಾದ ಕಷ್ಟಸಂಕಟಗಳನ್ನೂ ಬಾಧೆಗಳನ್ನೂ ಸಹಿಸಿಕೊಳ್ಳಬೇಕೆಂದು ಪ್ರೋತ್ಸಾಹಿಸುತ್ತಾನೆ.
ಪರಿವಿಡಿ
ಕ್ರಿಸ್ತೇಸುವೇ ದೇವರ ಸಂಪೂರ್ಣ ಪ್ರಕಟನೆ 1:1-3
ಕ್ರಿಸ್ತೇಸು ದೇವದೂತರಿಗಿಂತಲೂ ಶ್ರೇಷ್ಠರು 1:4—2:18
ಕ್ರಿಸ್ತೇಸು ಮೋಶೆ ಹಾಗೂ ಯೆಹೋಶುವನಿಗಿಂತಲೂ ಶ್ರೇಷ್ಠರು 3:1—4:13
ಕ್ರಿಸ್ತೇಸುವಿನ ಯಾಜಕತ್ವದ ಶ್ರೇಷ್ಠತೆ 4:14—7:28
ಕ್ರಿಸ್ತೇಸುವಿನ ಒಡಂಬಡಿಕೆಯ ಶ್ರೇಷ್ಠತೆ 8:1—9:28
ಕ್ರಿಸ್ತೇಸುವಿನ ಬಲಿಯರ್ಪಣೆಯ ಶ್ರೇಷ್ಠತೆ 10:1-39
ಕ್ರೈಸ್ತವಿಶ್ವಾಸ ನಮ್ಮ ಬಾಳ್ವೆಗೆ ಪ್ರಧಾನ ಆಧಾರ 11:1—12:29
ಅಂತಿಮ ಬುದ್ಧಿವಾದ, ಆಶೀರ್ವಚನ 13:1-25