ಇಬ್ರಿಯರಿಗೆ 9 - ಕನ್ನಡ ಸತ್ಯವೇದವು C.L. Bible (BSI)ರಕ್ತದಿಂದ ಪ್ರತಿಷ್ಠಾಪಿತವಾದ ಒಡಂಬಡಿಕೆ 1 ಹಳೆಯ ಒಡಂಬಡಿಕೆಯಲ್ಲಿ ದೇವಾರಾಧನೆಗೆ ವಿಧಿನಿಯಮಗಳಿದ್ದವು; ಮಾನವ ನಿರ್ಮಿತ ದೇವಾಲಯವೂ ಇತ್ತು. 2 ಅಂದರೆ, ಒಂದು ಗುಡಾರವನ್ನು ಕಟ್ಟುತ್ತಿದ್ದರು. ಅದರಲ್ಲಿ ಎರಡು ಭಾಗಗಳು ಇದ್ದವು. ಮೊದಲನೆಯ ಭಾಗಕ್ಕೆ ಪವಿತ್ರಸ್ಥಳ ಎಂದು ಹೆಸರು. ಅಲ್ಲಿ, ಒಂದು ದೀಪಸ್ತಂಭ ಮತ್ತು ಒಂದು ಮೇಜು ಇದ್ದವು. ಆ ಮೇಜಿನ ಮೇಲೆ ಅರ್ಪಣೆಯ ನೈವೇದ್ಯ ರೊಟ್ಟಿಗಳನ್ನು ಇಡುತ್ತಿದ್ದರು. 3 ಅದರ ಎರಡನೆಯ ಭಾಗಕ್ಕೆ ಗರ್ಭಗುಡಿ ಎಂದು ಹೆಸರು. ಈ ಎರಡು ಭಾಗಗಳ ನಡುವೆ ತೆರೆಯಿತ್ತು. ಗರ್ಭಗುಡಿಯನ್ನು ಈ ತೆರೆ ಮರೆಮಾಡಿತ್ತು. 4 ಗರ್ಭಗುಡಿಯಲ್ಲಿ ಚಿನ್ನದ ಧೂಪಾರತಿ ಮತ್ತು ಚಿನ್ನದ ತಗಡನ್ನು ಸುತ್ತಲೂ ಹೊದಿಸಿದ್ದ ಒಡಂಬಡಿಕೆಯ ಮಂಜೂಷ ಇದ್ದವು. ಈ ಮಂಜೂಷದಲ್ಲಿ ಮನ್ನವನ್ನು ಇಟ್ಟಿದ್ದ ಚಿನ್ನದ ಪಾತ್ರೆ ಆರೋನನ ಚಿಗುರಿದ ಕೋಲು ಮತ್ತು ಒಡಂಬಡಿಕೆಯ ಶಿಲಾಶಾಸನಗಳು ಇದ್ದವು. 5 ಮಂಜೂಷದ ಮೇಲೆ ದೇವರ ಸಾನ್ನಿಧ್ಯವನ್ನು ಸೂಚಿಸುವ ಕೆರೂಬಿ ಎಂಬ ದೂತರ ಆಕೃತಿಗಳಿದ್ದವು. ಅವುಗಳ ರೆಕ್ಕೆಗಳು ಕೃಪಾಸನವನ್ನು ಆವರಿಸಿಕೊಂಡಿದ್ದವು. ಸದ್ಯಕ್ಕೆ ಇವನ್ನು ಸವಿಸ್ತಾರವಾಗಿ ವಿವರಿಸಲು ಸಾಧ್ಯವಿಲ್ಲ. 6 ಹೀಗೆ ಇದೆಲ್ಲಾ ವ್ಯವಸ್ಥಿತವಾಗಿರಲು, ಯಾಜಕರು ಮೊದಲನೆಯ ಭಾಗವಾದ ಪವಿತ್ರಸ್ಥಳವನ್ನು ಮಾತ್ರ ಪ್ರವೇಶಿಸಿ, ಅಲ್ಲಿ ದೇವಾರಾಧನೆಯ ವಿಧಿಗಳನ್ನು ನಿರಂತರವಾಗಿ ನೆರವೇರಿಸುತ್ತಿದ್ದರು. 7 ಆದರೆ ಎರಡನೆಯ ಭಾಗವಾದ ಗರ್ಭಗುಡಿಯನ್ನು ಪ್ರಧಾನ ಯಾಜಕನೊಬ್ಬನೇ ಪ್ರವೇಶಿಸುತ್ತಿದ್ದನು; ಅದೂ ವರ್ಷಕ್ಕೆ ಒಮ್ಮೆ ಮಾತ್ರ. ತನ್ನೊಡನೆ ಬಲಿರಕ್ತವನ್ನು ತೆಗೆದುಕೊಳ್ಳದೆ ಅವನು ಅಲ್ಲಿಗೆ ಹೋಗುವಂತಿರಲಿಲ್ಲ. ಆ ರಕ್ತವನ್ನು ತನಗಾಗಿಯೂ ಜನರು ತಿಳಿಯದೆ ಮಾಡಿದ ಅಪರಾಧಗಳಿಗಾಗಿಯೂ ಅರ್ಪಿಸಬೇಕಾಗಿತ್ತು. 8 ಈ ವ್ಯವಸ್ಥೆಯಲ್ಲಿ ಗುಡಾರದ ಮೊದಲನೆಯ ಭಾಗ ಇರುವ ತನಕ ಗರ್ಭಗುಡಿಯನ್ನು ಪ್ರವೇಶಿಸುವ ಮಾರ್ಗ ತೆರೆದಿರುವುದಿಲ್ಲ, ಎಂಬುದನ್ನು ಪವಿತ್ರಾತ್ಮ ಸಾಂಕೇತಿಕವಾಗಿ ತಿಳಿಯಪಡಿಸುತ್ತಾರೆ. 9 ಇವೆಲ್ಲವೂ ಈ ಕಾಲದ ಪರಿಸ್ಥಿತಿಗೆ ಒಂದು ನಿದರ್ಶನವಾಗಿವೆ. ಈ ವ್ಯವಸ್ಥೆಯ ಪ್ರಕಾರ ಸಮರ್ಪಣೆಯಾಗುತ್ತಿದ್ದ ಕಾಣಿಕೆಗಳೂ ಬಲಿಗಳೂ ಆರಾಧಕನ ಅಂತರಂಗವನ್ನು ಪೂರ್ಣವಾಗಿ ಶುದ್ಧಗೊಳಿಸಲು ಅಸಮರ್ಥವಾಗಿದ್ದವು. 10 ಏಕೆಂದರೆ, ಈ ಕಾಣಿಕೆಗಳು ಮತ್ತು ಬಲಿಗಳು ಕೇವಲ ಲೌಕಿಕವಾದುವು. ಅನ್ನಪಾನೀಯಗಳಿಂದಲೂ ನಾನಾ ತರದ ಸ್ನಾನವಿಧಿಗಳಿಂದಲೂ ಕೂಡಿದ ಇವು ಸುಧಾರಣೆಯ ಕಾಲದವರೆಗೆ ಮಾತ್ರ ಇರಬೇಕಾದುವು. 11 ಆದರೆ ಕ್ರಿಸ್ತಯೇಸು ಈಗಾಗಲೇ ಪ್ರಧಾನಯಾಜಕರಾಗಿ ಬಂದಿದ್ದಾರೆ. ಅವರು ಅನುಗ್ರಹಿಸುವ ಸತ್ಫಲಗಳು ಈಗಾಗಲೇ ನಮಗೆ ದೊರೆತಿವೆ. ಅವರು ಸೇವೆ ಸಲ್ಲಿಸುತ್ತಿರುವ ಗುಡಾರವು ಹಿಂದಿನವುಗಳಿಗಿಂತ ಶ್ರೇಷ್ಠವಾದುದು ಮತ್ತು ಪರಿಪೂರ್ಣವಾದುದು. ಇದು ಕೈಯಿಂದ ಕಟ್ಟಿದ್ದಲ್ಲ. ಇಹಲೋಕದ ಸೃಷ್ಟಿಗೆ ಸಂಬಂಧಪಟ್ಟಿದ್ದಲ್ಲ. 12 ಇಂಥ ಗರ್ಭಗುಡಿಯನ್ನು ಅವರು ಒಮ್ಮೆಗೇ ಶಾಶ್ವತವಾಗಿ ಪ್ರವೇಶಿಸಿದ್ದಾರೆ. ಹೋತಗಳ ಅಥವಾ ಹೋರಿಕರುಗಳ ರಕ್ತವನ್ನು ತೆಗೆದುಕೊಂಡು ಅವರು ಪ್ರವೇಶಿಸಲಿಲ್ಲ. ತಮ್ಮ ಸ್ವಂತ ರಕ್ತವನ್ನೇ ತೆಗೆದುಕೊಂಡು ಪ್ರವೇಶಿಸಿ ನಮಗೆ ಶಾಶ್ವತ ಜೀವೋದ್ಧಾರವು ದೊರಕುವಂತೆ ಮಾಡಿದ್ದಾರೆ. 13 ಹೋತಹೋರಿಗಳ ರಕ್ತವನ್ನೂ ಯಜ್ಞಪಶುಗಳ ಬೂದಿಯನ್ನೂ ಮಲಿನರಾದವರ ಮೇಲೆ ಚಿಮುಕಿಸುವುದರ ಮೂಲಕ ಶಾರೀರಕ ಮೈಲಿಗೆಯನ್ನು ಹೋಗಲಾಡಿಸಿ ಅವರನ್ನು ಪರಿಶುದ್ಧಗೊಳಿಸಬಹುದಾದರೆ, 14 ಯೇಸುವಿನ ರಕ್ತವು ಮತ್ತಷ್ಟು ಹೆಚ್ಚಾಗಿ ನಮ್ಮನ್ನು ಪರಿಶುದ್ಧಗೊಳಿಸುತ್ತದಲ್ಲವೇ? ನಿತ್ಯಾತ್ಮದ ಮೂಲಕ ಅವರು ತಮ್ಮನ್ನೇ ನಿಷ್ಕಳಂಕಬಲಿಯಾಗಿ ದೇವರಿಗೆ ಸಮರ್ಪಿಸಿದ್ದಾರೆ; ನಾವು ಜೀವಸ್ವರೂಪರಾದ ದೇವರನ್ನು ಆರಾಧಿಸುವಂತೆ, ಜಡಕರ್ಮಗಳಿಂದ ನಮ್ಮನ್ನು ಬಿಡುಗಡೆಮಾಡಿ ನಮ್ಮ ಅಂತರಂಗವನ್ನು ಪರಿಶುದ್ಧಗೊಳಿಸುತ್ತಾರೆ. 15 ಈ ಕಾರಣ, ಯೇಸು ಹೊಸ ಒಡಂಬಡಿಕೆಯನ್ನು ಏರ್ಪಡಿಸಿದ ಮಧ್ಯಸ್ಥರಾಗಿದ್ದಾರೆ. ದೈವಕರೆ ಹೊಂದಿದವರು ದೇವರು ವಾಗ್ದಾನಮಾಡಿದ ಅಮರ ಸೌಭಾಗ್ಯವನ್ನು ಬಾಧ್ಯವಾಗಿ ಪಡೆಯುವಂತೆ ಈ ಒಡಂಬಡಿಕೆಯನ್ನು ಏರ್ಪಡಿಸಲಾಯಿತು. ಇದು ಯೇಸುವಿನ ಮರಣದ ಮೂಲಕವೇ ಉಂಟಾಯಿತು. ಈ ಮರಣವು ಹಳೆಯ ಒಡಂಬಡಿಕೆಯನ್ನು ಮೀರಿ ಮಾಡಿದ ಅಪರಾಧಗಳನ್ನೂ ಪರಿಹರಿಸುತ್ತದೆ. 16 ಒಂದು ಮರಣ ಶಾಸನವು ಪರಿಣಾಮಕಾರಿಯಾಗಬೇಕಾದರೆ, ಅದನ್ನು ಬರೆದಾತನು ಸತ್ತಿದ್ದಾನೆಂಬುದು ಖಚಿತವಾಗಬೇಕು; 17 ಅವನು ಸತ್ತನಂತರ ಮಾತ್ರ ಆ ಶಾಸನವು ಕಾರ್ಯರೂಪಕ್ಕೆ ಬರುತ್ತದೆಯೇ ಹೊರತು ಅವನು ಜೀವದಿಂದ ಇರುವಾಗ ಅಲ್ಲ. 18 ಆದ್ದರಿಂದಲೇ, ಮೊದಲನೆಯ ಒಡಂಬಡಿಕೆ ಕೂಡ ರಕ್ತಧಾರೆ ಇಲ್ಲದೆ ಪ್ರತಿಷ್ಠಾಪನೆಗೊಳ್ಳಲಿಲ್ಲ. 19 ಮೋಶೆ ಧರ್ಮಶಾಸ್ತ್ರದ ಆಜ್ಞೆಗಳನ್ನೆಲ್ಲ ಸಾರಿ ಹೇಳಿ, ಹೋತ ಹಾಗೂ ಹೋರಿಕರುಗಳ ರಕ್ತವನ್ನು ತೆಗೆದುಕೊಂಡು ಅದಕ್ಕೆ ನೀರು ಬೆರೆಸಿದನು; ಅದನ್ನು ಕೆಂಪು ಉಣ್ಣೆಯ ನೂಲಿನಿಂದ ಕಟ್ಟಿದ ಹಿಸ್ಸೋಪ್ ಕಡ್ಡಿಗಳಿಂದ ಪವಿತ್ರಗ್ರಂಥದ ಮೇಲೂ ಜನರ ಮೇಲೂ ಚಿಮುಕಿಸಿದನು. 20 ಹೀಗೆ ಚಿಮುಕಿಸುವಾಗ, “ದೇವರು ನಿಮಗೆ ಆಜ್ಞಾಪಿಸಿರುವ ಒಡಂಬಡಿಕೆಯ ರಕ್ತವಿದು,” ಎಂದು ಹೇಳಿದನು. 21 ಅಂತೆಯೇ ಗುಡಾರದ ಮೇಲೂ ದೇವಾರಾಧನೆಗೆ ಬೇಕಾದ ಎಲ್ಲಾ ಪೂಜಾಸಾಮಗ್ರಿಗಳ ಮೇಲೂ ಆ ರಕ್ತವನ್ನು ಚಿಮುಕಿಸಿದನು. 22 ಎಂದೇ, ಧರ್ಮಶಾಸ್ತ್ರದ ಪ್ರಕಾರ ಹೆಚ್ಚುಕಡಿಮೆ ಎಲ್ಲವೂ ರಕ್ತದಿಂದಲೇ ಶುದ್ಧೀಕರಣ ಹೊಂದುತ್ತವೆ. ರಕ್ತಧಾರೆ ಇಲ್ಲದೆ ಪಾಪಪರಿಹಾರವಿಲ್ಲ. ಪಾಪನಿವಾರಕ ಕ್ರಿಸ್ತಬಲಿ 23 ಸ್ವರ್ಗೀಯವಾದವುಗಳ ಛಾಯೆಯಂತೆ ಇರುವ ಈ ವಸ್ತುಗಳೇ ಈ ಪ್ರಕಾರ ಶುದ್ಧೀಕರಣ ಹೊಂದಬೇಕಾಗಿತ್ತಾದರೆ, ನಿಜವಾಗಿ ಸ್ವರ್ಗೀಯವಾದವುಗಳ ಶುದ್ಧೀಕರಣಕ್ಕೆ ಮತ್ತಷ್ಟು ಶ್ರೇಷ್ಠವಾದ ಬಲಿಗಳು ಬೇಕಾಗಿತ್ತು. 24 ಕ್ರಿಸ್ತಯೇಸು ಪ್ರವೇಶಿಸಿದ್ದು ನೈಜದೇವಾಲಯದ ಛಾಯೆಯಂತಿರುವ ಮಾನವನಿರ್ಮಿತ ಗರ್ಭಗುಡಿಯನ್ನಲ್ಲ, ನಮ್ಮ ಪರವಾಗಿ ದೇವರ ಸಮ್ಮುಖದಲ್ಲಿ ಉಪಸ್ಥಿತರಾಗಲು ಸಾಕ್ಷಾತ್ ಸ್ವರ್ಗವನ್ನೇ ಅವರು ಪ್ರವೇಶಿಸಿದರು. 25 ಪ್ರಧಾನ ಯಾಜಕನು ಪ್ರತಿವರ್ಷವೂ ಪ್ರಾಣಿಗಳ ರಕ್ತವನ್ನು ತೆಗೆದುಕೊಂಡು ಗರ್ಭಗುಡಿಯನ್ನು ಪ್ರವೇಶಿಸುವಂತೆ ಯೇಸು ಪ್ರವೇಶಿಸಲಿಲ್ಲ. ಅವರು ಸ್ವರ್ಗವನ್ನು ಪ್ರವೇಶಿಸಿದ್ದು ಪದೇಪದೇ ತಮ್ಮನ್ನು ಸಮರ್ಪಿಸಿಕೊಳ್ಳುವುದಕ್ಕೂ ಅಲ್ಲ. 26 ಹಾಗೆ ಸಮರ್ಪಿಸಬೇಕಾಗಿದ್ದ ಪಕ್ಷದಲ್ಲಿ ಲೋಕಾದಿಯಿಂದಲೂ ಅವರು ಅನೇಕ ಸಾರಿ ಮರಣಯಾತನೆಯನ್ನು ಅನುಭವಿಸಬೇಕಾಗಿ ಬರುತ್ತಿತ್ತು; ಅದಕ್ಕೆ ಬದಲಾಗಿ ಯುಗಾಂತ್ಯವಾದ ಈ ಕಾಲದಲ್ಲಿ ಪಾಪನಿವಾರಣೆ ಮಾಡಬೇಕೆಂಬ ಉದ್ದೇಶದಿಂದ ಒಮ್ಮೆಗೇ ತಮ್ಮನ್ನು ತಾವೇ ಬಲಿಯಾಗಿ ಸಮರ್ಪಿಸಿಕೊಳ್ಳಲೆಂದು ಯೇಸು ಪ್ರತ್ಯಕ್ಷರಾದರು. 27 ಪ್ರತಿಯೊಬ್ಬ ಮಾನವನು ಸಾಯುವುದು ಒಂದೇ ಸಾರಿ. ಅನಂತರ ಅವನು ನ್ಯಾಯತೀರ್ಪಿಗೆ ಗುರಿಯಾಗಬೇಕು. 28 ಹಾಗೆಯೇ, ಎಲ್ಲಾ ಮಾನವರ ಪಾಪಗಳನ್ನು ಹೊತ್ತು ಹೋಗಲಾಡಿಸಲು ಕ್ರಿಸ್ತಯೇಸು ಒಮ್ಮೆಗೇ ಎಲ್ಲಾ ಕಾಲಕ್ಕೂ ತಮ್ಮನ್ನೇ ಬಲಿಯಾಗಿ ಸಮರ್ಪಿಸಿಕೊಂಡರು. ಅವರು ಮತ್ತೆ ಪ್ರತ್ಯಕ್ಷರಾಗುವರು; ಪಾಪನಿವಾರಣೆ ಮಾಡಲೆಂದು ಅಲ್ಲ, ತಮ್ಮನ್ನು ನಂಬಿ ನಿರೀಕ್ಷಿಸಿಕೊಂಡಿರುವವರನ್ನು ಜೀವೋದ್ಧಾರ ಮಾಡಲೆಂದು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India