Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಇಬ್ರಿಯರಿಗೆ 8 - ಕನ್ನಡ ಸತ್ಯವೇದವು C.L. Bible (BSI)


ಹೊಸ ಒಡಂಬಡಿಕೆಯ ಹೊಸ ಯಾಜಕತ್ವ

1 ಈಗ ಹೇಳುತ್ತಿರುವುದರ ಮುಖ್ಯಾಂಶ ಏನೆಂದರೆ: ಸ್ವರ್ಗದಲ್ಲಿ ಮಹೋನ್ನತ ದೇವರ ಸಿಂಹಾಸನದ ಬಲಗಡೆಯಲ್ಲಿ ಆಸೀನರಾಗಿರುವಂಥ ಪ್ರಧಾನಯಾಜಕ ನಮಗಿದ್ದಾರೆ.

2 ಅಲ್ಲಿ, ಆ ಪವಿತ್ರಸ್ಥಾನದಲ್ಲಿ ಮನುಷ್ಯರಿಂದಲ್ಲ, ದೇವರಿಂದಲೇ ನಿರ್ಮಿತವಾದ ನಿಜವಾದ ಗರ್ಭಗುಡಿಯಲ್ಲಿ, ಅವರು ಯಾಜಕ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

3 ಪ್ರತಿಯೊಬ್ಬ ಪ್ರಧಾನಯಾಜಕನು ಕಾಣಿಕೆಗಳನ್ನೂ ಬಲಿಗಳನ್ನೂ ಅರ್ಪಿಸುವುದಕ್ಕಾಗಿಯೇ ನೇಮಕಗೊಂಡಿರುತ್ತಾನೆ. ಆದ್ದರಿಂದ ಸಮರ್ಪಿಸುವುದಕ್ಕೆ ನಮ್ಮ ಈ ಪ್ರಧಾನಯಾಜಕರಿಗೂ ಏನಾದರೂ ಇರಲೇಬೇಕು.

4 ಇವರು ಧರೆಯಲ್ಲೇ ಇದ್ದಿದ್ದರೆ ಯಾಜಕರಾಗಿರುತ್ತಿರಲಿಲ್ಲ. ಏಕೆಂದರೆ ಧರ್ಮಶಾಸ್ತ್ರ ವಿಧಿಸುವ ಕಾಣಿಕೆಗಳನ್ನು ಸಮರ್ಪಿಸುವುದಕ್ಕೆ ಬೇರೆ ಯಾಜಕರು ಇದ್ದಾರೆ.

5 ಸ್ವರ್ಗೀಯ ಗರ್ಭಗುಡಿಯ ಚಿಹ್ನೆ ಹಾಗೂ ಛಾಯೆಯಾಗಿರುವ ಆಲಯಗಳಲ್ಲಿ ಇಲ್ಲಿಯ ಯಾಜಕರು ಉಪಾಸನೆ ಮಾಡುತ್ತಾರೆ. ಮೋಶೆ ಗರ್ಭಗುಡಿಯನ್ನು ನಿರ್ಮಿಸಲು ಆರಂಭಿಸಿದಾಗ, ದೇವರು ಆತನಿಗೆ, “ಬೆಟ್ಟದ ಮೇಲೆ ನಾನು ತೋರಿಸಿದ ನಕ್ಷೆಯ ಪ್ರಕಾರವೇ ನೀನು ಎಲ್ಲವನ್ನೂ ನಿರ್ಮಿಸಬೇಕು,” ಎಂದು ಆಜ್ಞೆಯನ್ನಿತ್ತರು.

6 ಯೇಸು, ಆ ಯಾಜಕರ ಸೇವೆಗಿಂತಲೂ ಶ್ರೇಷ್ಠವಾದ ಯಾಜಕಸೇವೆಯನ್ನು ಕೈಗೊಂಡಿದ್ದಾರೆ. ಯೇಸುವನ್ನು ಮಧ್ಯಸ್ಥರನ್ನಾಗಿ ಪಡೆದಿರುವ ಒಡಂಬಡಿಕೆಯು ಅಷ್ಟೇ ಶ್ರೇಷ್ಠವಾದುದು. ಏಕೆಂದರೆ ಅದು, ಹಿಂದಿನ ವಾಗ್ದಾನಗಳಿಗಿಂತಲೂ ಉತ್ತಮವಾದ ವಾಗ್ದಾನಗಳನ್ನು ಆಧರಿಸಿದೆ.

7 ಮೊದಲನೆಯ ಒಡಂಬಡಿಕೆ ದೋಷರಹಿತ ಆಗಿದ್ದಿದ್ದರೆ, ಎರಡನೆಯ ಒಡಂಬಡಿಕೆಯ ಅವಶ್ಯಕತೆಯೇ ಇರುತ್ತಿರಲಿಲ್ಲ.

8 ಆದರೆ ದೇವರು ಆ ಒಡಂಬಡಿಕೆಗೆ ಸೇರಿದ ಜನರನ್ನು ಆರೋಪಿಸುತ್ತಾ ಇಂತೆಂದಿದ್ದಾರೆ : “ಇಗೋ, ನಾನು ಇಸ್ರಯೇಲ್ ವಂಶದವರೊಂದಿಗೂ ಯೆಹೂದ್ಯ ವಂಶದವರೊಂದಿಗೂ ಹೊಸ ಒಡಂಬಡಿಕೆಯನ್ನು ಮಾಡಿಕೊಳ್ಳುವ ಕಾಲವು ಬರಲಿದೆ, ಎಂದರು ಸರ್ವೇಶ್ವರ.

9 ಈ ಒಡಂಬಡಿಕೆ, ನಾನು ಪೂರ್ವಜರನ್ನು ಈಜಿಪ್ಟ್ ದೇಶದಿಂದ ಕೈಹಿಡಿದು ಕರೆತಂದಾಗ ಮಾಡಿದ ಒಡಂಬಡಿಕೆಯಂತಲ್ಲ; ಅವರು ನನ್ನ ಒಡಂಬಡಿಕೆಯಲ್ಲಿ ಸ್ಥಿರವಾಗಿ ನಿಲ್ಲಲಿಲ್ಲ; ಎಂದೇ, ನಾನು ಅವರನ್ನು ಲಕ್ಷಿಸಲೂ ಇಲ್ಲ, ಎಂದರು ಸರ್ವೇಶ್ವರ.

10 ಆ ದಿನಗಳು ಬಂದಮೇಲೆ ಇಸ್ರಯೇಲ್ ವಂಶದವರೊಡನೆ ನಾನು ಮಾಡಿಕೊಳ್ಳುವ ಒಡಂಬಡಿಕೆ ಹೀಗಿರುವುದು, ಎಂದರು ಸರ್ವೇಶ್ವರ. ನಾಟಿಸುವೆನು ನನ್ನಾಜ್ಞೆಗಳನು ಅವರ ಮನದಲಿ ಬರೆಯುವೆನು ಅವುಗಳನು ಅವರ ಹೃದಯದಲಿ ದೇವನಾಗಿರುವೆನು ನಾನವರಿಗೆ ಅವರಾಗುವರು ಪ್ರಜೆಗಳು ನನಗೆ.

11 ‘ಸರ್ವೇಶ್ವರನನ್ನು ಅರಿತುಕೊಳ್ಳಿರಿ’ ಎಂದು ನೆರೆಯವನಿಗಾಗಲಿ, ಸೋದರನಿಗಾಗಲಿ ಯಾರೂ ಬೋಧಿಸಬೇಕಾಗಿಲ್ಲ. ಹಿರಿಯಕಿರಿಯರು ಎಲ್ಲರೂ ನನ್ನನ್ನು ಅರಿಯುವರು.

12 ಅವರ ಪಾಪಗಳನ್ನು ಕ್ಷಮಿಸುವೆನು ಅವರ ತಪ್ಪುನೆಪ್ಪುಗಳನು ನೆನಪಿಗೆ ತಂದುಕೊಳ್ಳೆನು ಎಂದರು ಸರ್ವೇಶ್ವರ.”

13 ಇಲ್ಲಿ ‘ಹೊಸ ಒಡಂಬಡಿಕೆ’ ಎಂದು ಹೇಳಿ, ಹಿಂದಿನದನ್ನು ಹಳೆಯದಾಗಿಸಿದ್ದಾರೆ. ಹಳತಾದುದು ಹಾಗೂ ಮುದಿಯಾದುದು ಅಳಿದುಹೋಗುವಂಥಾದ್ದು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು