Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಇಬ್ರಿಯರಿಗೆ 7 - ಕನ್ನಡ ಸತ್ಯವೇದವು C.L. Bible (BSI)


ಮೆಲ್ಕಿಸದೇಕನ ಪರಂಪರೆಯ ಯಾಜಕ

1 ಈ ಮೆಲ್ಕಿಸದೇಕನು ಸಾಲೇಮ್ ನಗರದ ರಾಜನೂ ಮಹೋನ್ನತ ದೇವರ ಯಾಜಕನೂ ಆಗಿದ್ದನು. ಶತ್ರುರಾಜರನ್ನು ಗೆದ್ದು ಹಿಂದಿರುಗುತ್ತಿದ್ದ ಅಬ್ರಹಾಮನನ್ನು ಈತನು ಎದುರುಗೊಂಡು ಆಶೀರ್ವದಿಸಿದನು.

2 ಆಗ ಅಬ್ರಹಾಮನು ತಾನು ಗೆದ್ದು ತಂದಿದ್ದ ಎಲ್ಲದರಲ್ಲೂ ದಶಮಾಂಶವನ್ನು ಆತನಿಗೆ ಕೊಟ್ಟು ಗೌರವಿಸಿದನು. ಮೆಲ್ಕಿಸದೇಕ ಎಂಬ ಹೆಸರಿನ ಮೂಲಾರ್ಥ, ‘ನ್ಯಾಯನೀತಿಯ ಅರಸ.’ ಅಲ್ಲದೆ, ಆತನು ಸಾಲೇಮಿನ ಅರಸನೂ ಆಗಿದ್ದನು. ಆದ್ದರಿಂದ ‘ಶಾಂತಿಸಮಾಧಾನದ ಅರಸ’ ಎಂಬ ಅರ್ಥವೂ ಉಂಟು.

3 ಆತನಿಗೆ ತಂದೆತಾಯಿಯಾಗಲಿ ವಂಶಾವಳಿಯಾಗಲಿ ಇಲ್ಲ. ಆತನ ಜನ್ಮಕ್ಕೆ ಆದಿಯಾಗಲಿ, ಜೀವನಕ್ಕೆ ಅಂತ್ಯವಾಗಲಿ ಇಲ್ಲ. ಆತನು ದೇವಪುತ್ರನನ್ನು ಹೋಲುತ್ತಾನೆ. ಶಾಶ್ವತ ಯಾಜಕನಾಗಿ ಉಳಿಯುತ್ತಾನೆ.

4 ನಮ್ಮ ಪಿತಾಮಹ ಅಬ್ರಹಾಮನೇ ತಾನು ಗೆದ್ದುತಂದ ಶ್ರೇಷ್ಠ ವಸ್ತುಗಳಲ್ಲಿ ದಶಮಾಂಶವನ್ನು ಈ ಮೆಲ್ಕಿಸದೇಕನಿಗೆ ಸಲ್ಲಿಸಿ ಗೌರವಿಸಬೇಕಾದರೆ ಆತನು ಎಂಥ ಮಹಾಪುರುಷನೆಂದು ನೀವೇ ಆಲೋಚಿಸಿ ನೋಡಿ.

5 ಲೇವಿಯ ಕುಲದವರಲ್ಲಿ ಯಾಜಕ ಪದವಿಯನ್ನು ಹೊಂದಿದವರು ಜನರಿಂದ, ಅಂದರೆ ಅಬ್ರಹಾಮನ ವಂಶಜರಾದ ತಮ್ಮ ಸ್ವಜನರಿಂದ, ದಶಮಾಂಶವನ್ನು ತೆಗೆದುಕೊಳ್ಳುವುದಕ್ಕೆ ಧರ್ಮಶಾಸ್ತ್ರದಲ್ಲಿ ಅಪ್ಪಣೆ ಉಂಟು.

6 ಆದರೆ ಲೇವಿಯ ಕುಲದವನಲ್ಲದ ಮೆಲ್ಕಿಸದೇಕನು ಅಬ್ರಹಾಮನಿಂದಲೇ ದಶಮಾಂಶವನ್ನು ಪಡೆದನು; ಮಾತ್ರವಲ್ಲದೆ, ದೇವರ ವಾಗ್ದಾನವನ್ನು ಪಡೆದ ಅಬ್ರಹಾಮನನ್ನೇ ಆಶೀರ್ವದಿಸಿದನು.

7 ಆಶೀರ್ವದಿಸುವವನು, ಆಶೀರ್ವಾದ ಪಡೆದವನಿಗಿಂತ ದೊಡ್ಡವನು ಎನ್ನುವುದು ನಿರ್ವಿವಾದ.

8 ಇದಲ್ಲದೆ, ದಶಮಾಂಶವನ್ನು ಪಡೆಯುತ್ತಿರುವ ಲೇವಿಯರು ಕೇವಲ ಮರ್ತ್ಯ ಮಾನವರು; ಅದನ್ನು ಪಡೆದ ಮೆಲ್ಕಿಸದೇಕನು ತಾನು ಅಮರ್ತ್ಯ ಯಾಜಕನೆಂದು ಸಾಕ್ಷ್ಯಾಧಾರ ಪಡೆದವನು.

9 ಅಷ್ಟೇ ಅಲ್ಲ, ದಶಮಾಂಶವನ್ನು ತೆಗೆದುಕೊಳ್ಳುತ್ತಿದ್ದ ಲೇವಿಯೂ ಕೂಡ ಅಬ್ರಹಾಮನ ಮುಖಾಂತರ ದಶಮಾಂಶವನ್ನು ತೆತ್ತನು ಎಂದು ಹೇಳಬಹುದು.

10 ಹೇಗೆಂದರೆ, ಮೆಲ್ಕಿಸದೇಕನು ಅಬ್ರಹಾಮನನ್ನು ಎದುರುಗೊಂಡಾಗ, ಲೇವಿಯು ಇನ್ನೂ ಹುಟ್ಟಿರಲಿಲ್ಲವಾದರೂ ತತ್ವಶಃ ಆತನು ತನ್ನ ಪೂರ್ವಜ ಅಬ್ರಹಾಮನ ಉದರದಲ್ಲಿದ್ದನು.

11 ಇಸ್ರಯೇಲರಿಗೆ ಕೊಡಲಾದ ಧರ್ಮಶಾಸ್ತ್ರ ಲೇವಿಯರ ಯಾಜಕತ್ವದ ಮೇಲೆಯೇ ಆಧಾರಗೊಂಡಿದೆ. ಲೇವಿಯರ ಈ ಯಾಜಕತ್ವದಿಂದಲೇ ಸಂಪೂರ್ಣ ಸಿದ್ಧಿ ಪ್ರಾಪ್ತವಾಗುತ್ತಿತ್ತಾದರೆ, ಆರೋನನ ಪರಂಪರೆಗೆ ಸೇರದೆ ಮೆಲ್ಕಿಸದೇಕನ ಪರಂಪರೆಗೆ ಸೇರಿದ ಬೇರೊಬ್ಬ ಯಾಜಕನು ಕಾಣಿಸಿಕೊಳ್ಳುವ ಅವಶ್ಯಕತೆ ಏನಿತ್ತು?

12 ಯಾಜಕತ್ವ ಬದಲಾವಣೆಗೊಂಡರೆ ಧರ್ಮಶಾಸ್ತ್ರವೂ ಬದಲಾವಣೆಗೊಳ್ಳಬೇಕಾದುದು ಅಗತ್ಯ.

13 ಇದನ್ನೆಲ್ಲಾ ಯಾರನ್ನು ಕುರಿತು ಹೇಳಲಾಗಿದೆಯೋ ಆ ವ್ಯಕ್ತಿ ಹುಟ್ಟಿದ್ದು ಬೇರೊಂದು ಕುಲದಲ್ಲಿ. ಆ ಕುಲದಲ್ಲಿ ಎಂದೂ ಯಾರೂ ಬಲಿಪೀಠದ ಸೇವೆ ಮಾಡಿದವರಲ್ಲ.

14 ನಮ್ಮ ಪ್ರಭು ಹುಟ್ಟಿದ್ದು ಯೂದನ ಕುಲದಲ್ಲಿ ಎಂಬುದು ತಿಳಿದ ವಿಷಯ. ಮೋಶೆ ಯಾಜಕರನ್ನು ಕುರಿತು ಮಾತನಾಡಿದಾಗ ಈ ಕುಲದ ಬಗ್ಗೆ ಏನನ್ನೂ ಹೇಳಲಿಲ್ಲ.


ಮೆಲ್ಕಿಸದೇಕನಂಥ ಪ್ರಧಾನಯಾಜಕ

15 ಹೀಗೆ ಕಾಣಿಸಿಕೊಂಡ ಯಾಜಕ ಮೆಲ್ಕಿಸದೇಕನನ್ನು ಹೋಲುವುದರಿಂದ ನಾವು ಹೇಳುವ ವಿಷಯ ಇನ್ನೂ ಸ್ಪಷ್ಟವಾಗುತ್ತದೆ.

16 ಇವರು ಯಾಜಕರಾದುದು ಅಳಿವಿಲ್ಲದ ಜೀವಶಕ್ತಿಯಿಂದ; ಕುಲಗೋತ್ರಗಳ ನಿಯಮಾನುಸಾರವಾದ ದೈಹಿಕ ಹುಟ್ಟಿನಿಂದಲ್ಲ.

17 “ನೀನು ಸದಾಕಾಲವೂ ಮೆಲ್ಕಿಸದೇಕನ ಪರಂಪರೆಗೆ ಸೇರಿದ ಯಾಜಕನು,” ಎಂದು ಪವಿತ್ರಗ್ರಂಥ ಸಮರ್ಥಿಸುತ್ತದೆ.

18 ಹಳೆಯ ಶಾಸನವು ಶಿಥಿಲವೂ ವಿಫಲವೂ ಆದಕಾರಣ, ಅದನ್ನು ರದ್ದುಗೊಳಿಸಲಾಯಿತು.

19 ಏಕೆಂದರೆ, ಧರ್ಮಶಾಸ್ತ್ರವು ಏನನ್ನೂ ಸಿದ್ಧಿಗೆ ತರಲಿಲ್ಲ. ಅದಕ್ಕೆ ಬದಲಾಗಿ ದೇವರ ಸನ್ನಿಧಿಗೆ ನಮ್ಮನ್ನು ಕೊಂಡೊಯ್ಯಬಲ್ಲ ನಂಬಿಕೆ ನಿರೀಕ್ಷೆಯನ್ನು ನಮಗೆ ಒದಗಿಸಲಾಗಿದೆ.

20 ಇದಲ್ಲದೆ, ಲೇವಿಯರು ಯಾಜಕರಾದಾಗ, ದೇವರು ಯಾವ ಶಪಥವನ್ನೂ ಮಾಡಲಿಲ್ಲ.

21 ಇವರಾದರೋ “ಎಂದೆಂದಿಗೂ ನೀ ಯಾಜಕನೆಂದು ಸರ್ವೇಶ್ವರನೇ ಪ್ರಮಾಣಿಸಿಹರು ಮನಸ್ಸನ್ನೆಂದೂ ಬದಲಾಯಿಸರವರು,” ಎಂಬ ಶಪಥ ಪಡೆದಿರುವ ಯಾಜಕರು.

22 ಆದ್ದರಿಂದಲೇ, ಯೇಸು ಅತ್ಯಂತ ಶ್ರೇಷ್ಠವಾದ ಒಡಂಬಡಿಕೆಗೆ ಆಧಾರಪುರುಷರಾಗಿದ್ದಾರೆ.

23 ಲೇವಿಯರ ಯಾಜಕಸೇವೆಯನ್ನು ಮರಣವು ಮೊಟಕುಗೊಳಿಸುತ್ತಿದ್ದುದರಿಂದ ಅನೇಕರು ಯಾಜಕರಾಗಬೇಕಾಗುತ್ತಿತ್ತು.

24 ಯೇಸುವಾದರೋ ಚಿರಂಜೀವಿಯಾದುದರಿಂದ ಅವರ ಯಾಜಕತ್ವವು ಶಾಶ್ವತವಾಗಿ ಉಳಿಯುವಂಥಾದ್ದು.

25 ಆದಕಾರಣ, ತಮ್ಮ ಮುಖಾಂತರ ದೇವರನ್ನು ಅರಸುವವರನ್ನು ಯೇಸು ಸಂಪೂರ್ಣವಾಗಿ ಉದ್ಧಾರಮಾಡಬಲ್ಲರು. ಅಂಥವರ ಪರವಾಗಿ ವಿಜ್ಞಾಪಿಸಲೆಂದೇ ಯೇಸು ಸದಾ ಬದುಕಿರುವರು.

26 ನಮಗೆ ಬೇಕಾಗಿದ್ದ ಪ್ರಧಾನ ಯಾಜಕರು ಯೇಸುವೇ. ಇವರು ಪರಿಶುದ್ಧರು, ನಿರ್ದೋಷಿ, ನಿಷ್ಕಳಂಕರು, ಪಾಪಿಗಳಿಂದ ಪ್ರತ್ಯೇಕಿಸಲಾದವರು, ಗಗನಮಂಡಲಗಳಿಗಿಂತಲೂ ಉನ್ನತದಲ್ಲಿರುವವರು.

27 ಇವರು ಮಿಕ್ಕ ಪ್ರಧಾನಯಾಜಕರಂತೆ ಮೊದಲು ಸ್ವಂತ ಪಾಪಗಳಿಗಾಗಿಯೂ ಅನಂತರ ಜನರ ಪಾಪಗಳಿಗಾಗಿಯೂ ದಿನಂಪ್ರತಿ ಪರಿಹಾರಬಲಿಯನ್ನು ಒಪ್ಪಿಸಬೇಕಾಗಿಲ್ಲ. ಏಕೆಂದರೆ, ಜನರ ಪಾಪಪರಿಹಾರಕ್ಕಾಗಿ ಒಮ್ಮೆಗೇ ಶಾಶ್ವತವಾಗಿ ತಮ್ಮನ್ನು ತಾವೇ ಬಲಿಯಾಗಿ ಸಮರ್ಪಿಸಿಕೊಂಡರು.

28 ಧರ್ಮಶಾಸ್ತ್ರ ನೇಮಿಸುವ ಪ್ರಧಾನಯಾಜಕರು ಕುಂದುಕೊರತೆಯುಳ್ಳ ಮಾನವರು. ಆದರೆ, ಧರ್ಮಶಾಸ್ತ್ರದ ತರುವಾಯ ಬಂದ ಹಾಗೂ ಶಪಥದಿಂದ ಕೂಡಿದ ದೈವವಾಕ್ಯವು ಸದಾ ಸರ್ವಸಂಪೂರ್ಣರಾದ ಪುತ್ರನನ್ನೇ ಪ್ರಧಾನಯಾಜಕರನ್ನಾಗಿ ನೇಮಿಸುತ್ತದೆ.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು