Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಇಬ್ರಿಯರಿಗೆ 6 - ಕನ್ನಡ ಸತ್ಯವೇದವು C.L. Bible (BSI)

1 ಆದುದರಿಂದ ಕ್ರಿಸ್ತಯೇಸುವನ್ನು ಕುರಿತಾದ ಪ್ರಾಥಮಿಕ ಪಾಠಗಳಲ್ಲೇ ನಿಂತುಬಿಡದೆ ಪ್ರೌಢ ವಿಷಯಗಳತ್ತ ಸಾಗೋಣ.

2 ಜಡ ಕರ್ಮಗಳನ್ನು ಬಿಟ್ಟು ದೇವರಲ್ಲಿ ವಿಶ್ವಾಸವಿಡುವುದು, ಸ್ನಾನಸಂಸ್ಕಾರಗಳು, ಹಸ್ತನಿಕ್ಷೇಪ, ಸತ್ತವರ ಪುನರುತ್ಥಾನ, ನಿತ್ಯವಾದ ನ್ಯಾಯತೀರ್ಪು - ಈ ಬೋಧನಾ ಅಸ್ತಿವಾರವನ್ನು ಮತ್ತೆ ಮತ್ತೆ ಹಾಕಬೇಕಾಗಿಲ್ಲ.

3 ದೇವರ ಚಿತ್ತವಾದರೆ ಪ್ರೌಢ ವಿಷಯಗಳತ್ತ ಪ್ರಗತಿಪರರಾಗೋಣ.

4 ಒಬ್ಬನು, ಒಮ್ಮೆ ಜ್ಞಾನೋದಯವನ್ನು ಪಡೆದು, ಸ್ವರ್ಗೀಯ ವರದಾನಗಳನ್ನು ಆಸ್ವಾದಿಸಿ, ಪವಿತ್ರಾತ್ಮ ಅವರ ಸಹಭಾಗಿಯಾಗಿ,

5 ದೇವರ ವಾಕ್ಯದ ಸವಿಯುಂಡು, ಬರಲಿರುವ ಯುಗದ ವೈಭವವನ್ನು ಮನಗಂಡು,

6 ಅನಂತರವೂ ವಿಶ್ವಾಸಭ್ರಷ್ಟನಾದರೆ, ಅಂಥವನು ಪಶ್ಚಾತ್ತಾಪಪಟ್ಟು ದೈವಾಭಿಮುಖನಾಗುವುದು ಅಸಾಧ್ಯ. ಏಕೆಂದರೆ, ಅಂಥವನು ತನ್ನ ಪಾಲಿಗೆ ದೇವರ ಪುತ್ರನನ್ನು ಪುನಃ ಶಿಲುಬೆಗೆ ಏರಿಸಿ ಅವರನ್ನು ಬಹಿರಂಗವಾಗಿ ಅವಮಾನಗೊಳಿಸುವವನಾಗುತ್ತಾನೆ.

7 ಭೂಮಿಯು ಕಾಲಾನುಕಾಲಕ್ಕೆ ತನ್ನ ಮೇಲೆ ಬೀಳುವ ಮಳೆಯ ನೀರನ್ನು ಹೀರಿಕೊಂಡು ವ್ಯವಸಾಯಗಾರನಿಗೆ ಅನುಕೂಲವಾದ ಬೆಳೆಯನ್ನು ಕೊಟ್ಟರೆ ದೇವರ ಆಶೀರ್ವಾದವನ್ನು ಪಡೆಯುತ್ತದೆ.

8 ಆದರೆ, ಅದು ಮುಳ್ಳುಗಿಡಗಳನ್ನೂ ಕಳೆಗಳನ್ನೂ ಬೆಳೆಸಿದರೆ ಅಪ್ರಯೋಜಕವೆನಿಸಿಕೊಂಡು ಶಾಪಕ್ಕೆ ಗುರಿಯಾಗುತ್ತದೆ; ಕೊನೆಗದು ಬೆಂಕಿಗೆ ತುತ್ತಾಗುತ್ತದೆ.

9 ಪ್ರಿಯರೇ, ನಾವು ಈ ರೀತಿ ಹೇಳಿದೆವಾದರೂ ನಿಮ್ಮ ಪರಿಸ್ಥಿತಿ ಉತ್ತಮವಾಗಿದೆ ಮತ್ತು ನೀವು ಜೀವೋದ್ಧಾರದ ಮಾರ್ಗದಲ್ಲಿ ಇದ್ದೀರಿ ಎಂಬ ದೃಢವಾದ ನಂಬಿಕೆ ನನಗಿದೆ.

10 ನೀವು ದೇವಜನರಿಗೆ ಉಪಚಾರಮಾಡಿದ್ದೀರಿ, ಮಾಡುತ್ತಲೂ ಇದ್ದೀರಿ. ದೇವರ ಹೆಸರಿನಲ್ಲಿ ನೀವು ಮಾಡಿದ ಪ್ರೀತಿಪೂರ್ವಕವಾದ ಸೇವೆಯನ್ನು ದೇವರು ಮರೆಯುವಂತಿಲ್ಲ, ಅವರು ಅನ್ಯಾಯ ಮಾಡುವವರೇನೂ ಅಲ್ಲ.

11 ನೀವು ಹೊಂದಿರುವ ನಿರೀಕ್ಷೆ ಪೂರ್ಣವಾಗಿ ಕೈಗೂಡುವಂತೆ ನಿಮ್ಮಲ್ಲಿ ಪ್ರತಿಯೊಬ್ಬನೂ ಮೊದಲಿನ ಆಸಕ್ತಿಯನ್ನು ಕಡೆಯತನಕವೂ ತೋರಿಸಬೇಕೆಂದು ಹಾರೈಸುತ್ತೇನೆ.

12 ನೀವು ಆಲಸಿಗಳಾಗಿರಬಾರದು; ವಿಶ್ವಾಸದಿಂದಲೂ ಬಹು ತಾಳ್ಮೆಯಿಂದಲೂ ದೈವ ವಾಗ್ದಾನಗಳನ್ನು ಬಾಧ್ಯವಾಗಿಸಿಕೊಂಡವರನ್ನು ಅನುಸರಿಸಬೇಕು.


ದೇವರ ಸ್ಥಿರವಾಗ್ದಾನ

13 ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದಾಗ ತಮ್ಮ ಮಾತನ್ನು ಈಡೇರಿಸುವುದಾಗಿ ಶಪಥಮಾಡಿದರು. ತಮಗಿಂತಲೂ ಮೇಲಾದವರಾರೂ ಇಲ್ಲವಾದ ಕಾರಣ ತಮ್ಮ ಸ್ವಂತ ಹೆಸರಿನಲ್ಲೇ ಶಪಥಮಾಡಿದರು.

14 “ಖಂಡಿತವಾಗಿಯೂ ನಾನು ನಿನ್ನನ್ನು ಆಶೀರ್ವದಿಸುವೆನು; ನಿನ್ನ ಸಂತಾನವನ್ನು ಹೆಚ್ಚಿಸಿಯೇ ತೀರುವೆನು,” ಎಂದರು.

15 ಅಂತೆಯೇ, ಅಬ್ರಹಾಮನು ದೀರ್ಘಕಾಲ ಕಾದಿದ್ದು ದೇವರ ವಾಗ್ದಾನದ ಫಲವನ್ನು ಪಡೆದನು.

16 ಮನುಷ್ಯರು ತಮಗಿಂತಲೂ ಹೆಚ್ಚಿನವರ ಮೇಲೆ ಆಣೆಯಿಡುವುದು ವಾಡಿಕೆ. ಹೀಗೆ ಆಣೆಯಿಟ್ಟು ಪ್ರಮಾಣಮಾಡಿದರೆ ಎಲ್ಲ ವಿವಾದಗಳು ಕೊನೆಗೊಳ್ಳುತ್ತವೆ.

17 ಹಾಗೆಯೇ, ದೇವರು ತಮ್ಮ ವಾಗ್ದಾನವನ್ನು ಬಾಧ್ಯವಾಗಿ ಪಡೆಯುವವರಿಗೆ ತಮ್ಮ ಸಂಕಲ್ಪ ಅಚಲವಾದುದು ಎಂಬುದನ್ನು ಸ್ಪಷ್ಟಪಡಿಸಲು, ಶಪಥಮಾಡಿ ಸ್ಥಿರಪಡಿಸಿದರು.

18 ದೇವರ ವಾಗ್ದಾನ ಮತ್ತು ಶಪಥ ಇವೆರಡೂ ಅಚಲವಾದ ಆಧಾರಗಳು. ಇವುಗಳ ವಿಷಯವಾಗಿ ದೇವರು ನಮಗೆ ಮೋಸಮಾಡುವವರೇ ಅಲ್ಲ. ಇದರಿಂದಾಗಿ, ದೇವರ ಆಶ್ರಯಕ್ಕಾಗಿ ಧಾವಿಸಿಬಂದಿರುವ ನಾವು, ನಮ್ಮ ಮುಂದಿರಿಸಿರುವ ನಂಬಿಕೆ ನಿರೀಕ್ಷೆಯಲ್ಲಿ ಸ್ಥಿರವಾಗಿ ನಿಲ್ಲಲು ಬಲವಾದ ಪ್ರೋತ್ಸಾಹ ದೊರೆತಂತಾಯಿತು.

19 ಈ ನಂಬಿಕೆ, ನಿರೀಕ್ಷೆ, ನಮ್ಮ ಬಾಳನೌಕೆಯ ಸ್ಥಿರವಾದ ಹಾಗೂ ಸುರಕ್ಷಿತವಾದ ಲಂಗರಿನಂತಿದೆ. ಇದು ತೆರೆಯ ಹಿಂದಿರುವ ಸ್ವರ್ಗೀಯ ಗರ್ಭಗುಡಿಯನ್ನು ಪ್ರವೇಶಿಸುವಂಥದ್ದು.

20 ಸದಾಕಾಲವೂ ಮೆಲ್ಕಿಸದೇಕನ ಪರಂಪರೆಗೆ ಸೇರಿದ ಪ್ರಧಾನಯಾಜಕರಾದ ಯೇಸು ನಮ್ಮ ಮುಂದಾಳಾಗಿ ಹೋಗಿ ಆ ಗರ್ಭಗುಡಿಯನ್ನು ಪ್ರವೇಶಿಸಿದ್ದಾರೆ.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು