ಇಬ್ರಿಯರಿಗೆ 5 - ಕನ್ನಡ ಸತ್ಯವೇದವು C.L. Bible (BSI)1 ಪ್ರತಿಯೊಬ್ಬ ಪ್ರಧಾನಯಾಜಕ ಜನರ ಮಧ್ಯದಿಂದ ಆರಿಸಲಾದವನು; ಜನರ ಪರವಾಗಿ ದೇವರ ಸನ್ನಿಧಿಯಲ್ಲಿ ಸೇವೆಸಲ್ಲಿಸಲು ಮತ್ತು ಪಾಪಪರಿಹಾರಕ್ಕಾಗಿ ಬಲಿಗಳನ್ನೂ ಕಾಣಿಕೆಗಳನ್ನೂ ಸಮರ್ಪಿಸಲು ನೇಮಕಗೊಂಡವನು. 2 ತಾನೂ ದುರ್ಬಲ ಮಾನವನಾದ ಕಾರಣ, ಆತನು ಅಜ್ಞಾನಿಗಳನ್ನೂ ದುರ್ಮಾರ್ಗಿಗಳನ್ನೂ ಸಹಾನುಭೂತಿಯಿಂದ ಕಾಣಬಲ್ಲನು. 3 ಜನರಿಗೋಸ್ಕರ ಹೇಗೋ ಹಾಗೆಯೇ ತನ್ನ ದೌರ್ಬಲ್ಯದ ನಿಮಿತ್ತ ತನಗೋಸ್ಕರವೂ ಆತನು ಪಾಪಪರಿಹಾರಕಬಲಿಯನ್ನು ಅರ್ಪಿಸಬೇಕಾಗಿದೆ. 4 ಅಲ್ಲದೆ, ಪ್ರಧಾನಯಾಜಕನೆಂಬ ಗೌರವಪದವಿಯನ್ನು ತನ್ನಷ್ಟಕ್ಕೆ ತಾನೇ ಯಾರೂ ವಹಿಸಿಕೊಳ್ಳರು. ಆರೋನನಂತೆ ಅವರೂ ದೇವರಿಂದ ಕರೆ ಹೊಂದಿದವರಾಗಿರಬೇಕು. 5 ಅದೇ ರೀತಿ ಕ್ರಿಸ್ತಯೇಸು, ಪ್ರಧಾನಯಾಜಕನೆಂಬ ಉನ್ನತ ಪದವಿಗೆ ತನ್ನನ್ನೇ ಏರಿಸಿಕೊಳ್ಳಲಿಲ್ಲ. “ನೀನೇ ನನ್ನ ಪುತ್ರನು; ನಾನೇ ನಿನ್ನನ್ನು ಪಡೆದಿದ್ದೇನೆ,” ಎಂದ ದೇವರೇ ಅವರನ್ನು ಆ ಪದವಿಗೆ ಏರಿಸಿದರು. 6 ಅವರೇ ಮತ್ತೊಂದು ಕಡೆಯಲ್ಲಿ : “ನೀನು ಸದಾಕಾಲವೂ ಮೆಲ್ಕಿಸದೇಕನ ಪರಂಪರೆಗೆ ಸೇರಿದ ಯಾಜಕ,” ಎಂದಿದ್ದಾರೆ. 7 ಕ್ರಿಸ್ತಯೇಸು ಈ ಭೂಲೋಕದಲ್ಲಿದ್ದಾಗ, ತಮ್ಮನ್ನು ಮರಣದಿಂದ ಕಾಪಾಡಲು ಶಕ್ತರಾದ ದೇವರನ್ನು ಉಚ್ಚಸ್ವರದಿಂದ ಕೂಗುತ್ತಾ ಕಣ್ಣೀರಿಡುತ್ತಾ ವಿನಂತಿಸಿ ಪ್ರಾರ್ಥಿಸಿದರು. ಅವರ ಭಯಭಕ್ತಿಯನ್ನು ನೋಡಿ ದೇವರು ಅವರ ಮೊರೆಯನ್ನು ಆಲಿಸಿದರು. 8 ಯೇಸು, ದೇವರ ಪುತ್ರರಾಗಿದ್ದರೂ ಹಿಂಸೆಬಾಧೆಗಳನ್ನು ತಪ್ಪಿಸಿಕೊಳ್ಳದೆ ವಿಧೇಯತೆಯನ್ನು ಅನುಭವದಿಂದ ಅರಿತುಕೊಂಡರು. 9 ಹೀಗೆ, ಅವರು ಸ್ವತಃ ಪರಿಪೂರ್ಣರಾಗಿ ತಮಗೆ ವಿಧೇಯರಾಗುವ ಎಲ್ಲರಿಗೂ ಶಾಶ್ವತ ಜೀವೋದ್ಧಾರಕ್ಕೆ ಕಾರಣರಾದರು. 10 ಅಲ್ಲದೆ, ದೇವರಿಂದ, “ಮೆಲ್ಕಿಸದೇಕನ ಪರಂಪರೆಗೆ ಸೇರಿದ ಪ್ರಧಾನಯಾಜಕ,” ಎನಿಸಿಕೊಂಡರು. ವಿಶ್ವಾಸದಲ್ಲಿ ಪ್ರಗತಿ 11 ಈ ವಿಷಯದಲ್ಲಿ ನಾವು ಹೇಳಬೇಕಾದುದು ಎಷ್ಟೋ ಇದೆ. ಆದರೆ ನಿಮ್ಮ ಬುದ್ಧಿಯು ಮಂದವಾಗಿರುವುದರಿಂದ ಅದನ್ನೆಲ್ಲಾ ವಿವರಿಸುವುದು ಕಷ್ಟವಾಗಿದೆ. 12 ಇಷ್ಟರೊಳಗೆ ನೀವು ಇತರರಿಗೆ ಬೋಧಿಸಲು ಶಕ್ತರಾಗಬೇಕಾಗಿತ್ತು; ಆದರೆ ದೇವರ ವಾಕ್ಯದ ಮೂಲ ಪಾಠಗಳನ್ನೇ ಇತರರು ನಿಮಗೆ ಮತ್ತೆ ಹೇಳಿಕೊಡಬೇಕಾಗಿದೆ. ಗಟ್ಟಿಯಾದ ಆಹಾರವನ್ನು ಉಣ್ಣುವ ಬದಲು ನೀವಿನ್ನೂ ಹಾಲನ್ನೇ ಕುಡಿಯಬೇಕಾಗಿದೆ. 13 ಹಾಲು ಕುಡಿಯಬೇಕಾದವನು ಹಸುಗೂಸು. ನ್ಯಾಯನೀತಿಯ ಅನುಭವ ಅವನಿಗಿಲ್ಲ. 14 ಗಟ್ಟಿಯಾದ ಆಹಾರ ಬೆಳೆದವರಿಗೆ; ಸ್ವಂತ ಅನುಭವದಿಂದ ಒಳ್ಳೆಯದಾವುದು ಕೆಟ್ಟದ್ದಾವುದು ಎಂದು ಅರಿತುಕೊಳ್ಳಬಲ್ಲವರಿಗೆ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India