ಇಬ್ರಿಯರಿಗೆ 4 - ಕನ್ನಡ ಸತ್ಯವೇದವು C.L. Bible (BSI)1 ದೇವರು ತಮ್ಮ ವಿಶ್ರಾಂತಿಯ ನೆಲೆಯನ್ನು ನೀಡುವುದಾಗಿ ಮಾಡಿದ ವಾಗ್ದಾನ ಇನ್ನೂ ರದ್ದಾಗದೆ ಉಳಿದಿದೆ. ನಿಮ್ಮಲ್ಲಿ ಯಾರೂ ಆ ವಾಗ್ದಾನದ ಫಲವನ್ನು ಪಡೆಯದೆ ಇರಬಾರದು. ಎಂತಲೇ, ನಾವು ಭಯಭಕ್ತಿಯಿಂದ ಬಾಳೋಣ. 2 ಶುಭವಾರ್ತೆಯನ್ನು ಅವರಿಗೆ ಸಾರಲಾದಂತೆ ನಮಗೂ ಸಾರಲಾಯಿತು. ಅವರು ಅದನ್ನು ಆಲಿಸಿದರು; ಆದರೆ ಅವರಲ್ಲಿ ವಿಶ್ವಾಸವಿರಲಿಲ್ಲ. ಈ ಕಾರಣ, ಅವರು ಕೇಳಿದ ಸಂದೇಶದಿಂದ ಫಲ ಪಡೆಯದೆ ಹೋದರು. 3 ಲೋಕಾದಿಯಲ್ಲೇ, ದೇವರು ತಮ್ಮ ಸೃಷ್ಟಿಕಾರ್ಯವನ್ನು ಮುಗಿಸಿದ್ದರೂ ಅವರು, “ಸೇರರು ಎನ್ನ ವಿಶ್ರಾಂತಿಯ ನೆಲೆಯನು ಇವರೆಂದಿಗೂ ಎಂದು ಸಿಟ್ಟುಗೊಂಡು ಶಪಥ ಮಾಡಿದೆನು,” ಎಂದು ಹೇಳಿದ್ದಾರೆ. ವಿಶ್ವಾಸಿಸುವ ನಾವಾದರೋ ಆ ವಿಶ್ರಾಂತಿಯ ನೆಲೆಯನ್ನು ಸೇರುತ್ತೇವೆ. 4 ಪವಿತ್ರಗ್ರಂಥದ ಒಂದೆಡೆಯಲ್ಲಿ, ಏಳನೆಯ ದಿನವನ್ನು ಕುರಿತು: “ದೇವರು ತಮ್ಮ ಸೃಷ್ಟಿಕಾರ್ಯಗಳನ್ನೆಲ್ಲಾ ಮುಗಿಸಿ ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡರು,” ಎಂದು ಬರೆದದೆ. 5 ಮೇಲೆ ಹೇಳಿದ ವಚನದಲ್ಲಾದರೋ, “ಸೇರರು ಎನ್ನ ವಿಶ್ರಾಂತಿಯ ನೆಲೆಯನು ಇವರೆಂದಿಗೂ,” ಎಂದಿದೆ. 6 ಆದುದರಿಂದ, ಈ ವಿಶ್ರಾಂತಿಯ ನೆಲೆಯನ್ನು ಸೇರುವ ಸಾಧ್ಯತೆ ಬೇರೆಯವರಿಗಾದರೂ ಇದೆ ಎಂಬುದು ಸ್ಪಷ್ಟವಾಗುತ್ತದೆ. ದೇವರ ವಾಕ್ಯವನ್ನು ಮೊದಲು ಕೇಳಿದವರಾದರೋ, ತಮ್ಮ ಅವಿಶ್ವಾಸದಿಂದ ಅದನ್ನು ಸೇರದೆಹೋದರು. 7 ಈ ಕಾರಣದಿಂದಲೇ ದೇವರು, “ಇಂದು” ಎಂದು ಬೇರೊಂದು ದಿನವನ್ನು ಗೊತ್ತುಮಾಡುತ್ತಾರೆ. ಈ ದಿನವನ್ನು ಕುರಿತೇ ದೀರ್ಘಕಾಲದ ನಂತರ ದಾವೀದನ ಮುಖಾಂತರ : “ದೇವರ ದನಿಯನು ಕೇಳುವಿರಾದರೆ ನೀವಿಂದು ನಿಮ್ಮ ಪೂರ್ವಜರಂತೆ ಕಲ್ಲಾಗಿಸದಿರಿ ಹೃದಯವನು,” ಎಂದು ಹೇಳಿದ್ದಾರೆ. 8 ಯೆಹೋಶುವನು ಆ ಜನರನ್ನು ವಾಗ್ದತ್ತ ವಿಶ್ರಾಂತಿಗೆ ಸೇರಿಸಿದ್ದರೆ ದೇವರು ಬೇರೊಂದು ದಿನವನ್ನು ಗೊತ್ತುಮಾಡುತ್ತಿರಲಿಲ್ಲ. 9 ಆದಕಾರಣ, ದೇವಜನರು ಅನುಭವಿಸುವುದಕ್ಕಿರುವ ಸಬ್ಬತ್ತೆಂಬ ವಿಶ್ರಾಂತಿ ಇನ್ನೂ ಉಳಿದಿದೆ. 10 ದೇವರು ತಮ್ಮ ಸೃಷ್ಟಿಕಾರ್ಯವನ್ನು ಮುಗಿಸಿ ವಿಶ್ರಾಂತಿಪಡೆದಂತೆ ದೇವರ ವಿಶ್ರಾಂತಿಯನ್ನು ಪಡೆದವನು ಸಹ ತನ್ನ ಕೆಲಸಕಾರ್ಯಗಳನ್ನು ಮುಗಿಸಿ ವಿಶ್ರಾಂತಿಯನ್ನು ಪಡೆಯುತ್ತಾನೆ. 11 ಆದ್ದರಿಂದ ಈ ವಿಶ್ರಾಂತಿಯನ್ನು ಪಡೆಯಲು ನಾವು ಪ್ರಯತ್ನಪಡೋಣ. ನಮ್ಮಲ್ಲಿ ಯಾರೂ ಆ ಜನರಂತೆ ಅವಿಧೇಯತೆಯಿಂದ ವರ್ತಿಸಿ ವಿಶ್ವಾಸಭ್ರಷ್ಟರಾಗದೆ ಇರೋಣ. 12 ದೇವರ ವಾಕ್ಯ ಜೀವಂತವಾದುದು, ಕ್ರಿಯಾತ್ಮಕವಾದುದು; ಎಂಥ ಇಬ್ಬಾಯಿ ಕತ್ತಿಗಿಂತಲೂ ಹರಿತವಾದುದು. ಪ್ರಾಣ ಮತ್ತು ಆತ್ಮಗಳ, ಕೀಲು ಮತ್ತು ಮಜ್ಜೆಗಳ ಭೇದವನ್ನು ಛೇದಿಸುವಂತಾದ್ದು; ಹೃದಯದ ಆಶೆ ಆಲೋಚನೆಗಳನ್ನು ವಿವೇಚಿಸುವಂತಾದ್ದು. 13 ನಾವು ಯಾರಿಗೆ ಲೆಕ್ಕ ಒಪ್ಪಿಸಬೇಕಾಗಿದೆಯೋ, ಅವರ ಕಣ್ಣಿಗೆ ಮುಚ್ಚುಮರೆಯಾದುದು ಯಾವುದೂ ಇಲ್ಲ. ಅವರ ದೃಷ್ಟಿಗೆ ಎಲ್ಲವೂ ಬಟ್ಟಬಯಲು. ಶ್ರೇಷ್ಠಯಾಜಕ ಯೇಸು 14 ಸ್ವರ್ಗಲೋಕಕ್ಕೆ ಏರಿಹೋದ ದೇವರ ಪುತ್ರನಾದ ಯೇಸುವೇ ನಮಗೆ ಶ್ರೇಷ್ಠ ಹಾಗೂ ಪ್ರಧಾನಯಾಜಕ ಆಗಿರುವುದರಿಂದ ನಾವು ನಿವೇದಿಸುವ ವಿಶ್ವಾಸದಲ್ಲಿ ಸದೃಢರಾಗಿರೋಣ. 15 ಈ ಪ್ರಧಾನಯಾಜಕ, ನಮ್ಮ ದೌರ್ಬಲ್ಯಗಳನ್ನು ಕಂಡು ಅನುಕಂಪ ತೋರದೆ ಇರುವವರಲ್ಲ. ಅವರು, ನಮ್ಮಂತೆಯೇ ಇದ್ದುಕೊಂಡು ಎಲ್ಲಾ ವಿಷಯಗಳಲ್ಲೂ ಶೋಧನೆ ಸಂಕಟಗಳನ್ನು ಅನುಭವಿಸಿದರು. ಆದರೆ ಪಾಪವನ್ನು ಮಾತ್ರ ಮಾಡಲಿಲ್ಲ. 16 ಆದಕಾರಣ, ನಾವು ಸಮಯೋಚಿತ ಸಹಾಯವನ್ನು ಅವರ ಅನುಗ್ರಹದಿಂದ ಪಡೆಯಲು ಮತ್ತು ಅವರ ಕರುಣೆಯನ್ನು ಸವಿಯಲು ಧೈರ್ಯದಿಂದ ಅವರ ಕೃಪಾಸನವನ್ನು ಸಮೀಪಿಸೋಣ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India