Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಇಬ್ರಿಯರಿಗೆ 3 - ಕನ್ನಡ ಸತ್ಯವೇದವು C.L. Bible (BSI)


ಮೋಶೆಗಿಂತ ಯೇಸು ಮಿಗಿಲಾದವರು

1 ಹೀಗಿರುವಲ್ಲಿ ದೇವಜನರಾದ ಸಹೋದರರೇ, ಸ್ವರ್ಗಸೌಭಾಗ್ಯದಲ್ಲಿ ಸಹಭಾಗಿಗಳಾಗಲು ಕರೆ ಹೊಂದಿದವರೇ, ದೇವರು ಕಳುಹಿಸಿದಂಥವರು ಹಾಗೂ ನಾವು ವಿಶ್ವಾಸಿಸುವ ಧರ್ಮದ ಪ್ರಧಾನಯಾಜಕರು ಆದ ಯೇಸುವನ್ನು ಭಕ್ತಿಯಿಂದ ಧ್ಯಾನಿಸಿರಿ.

2 ದೇವಮಂದಿರ ಸೇವೆಯಲ್ಲಿ ಮೋಶೆ ಪ್ರಾಮಾಣಿಕನಾಗಿದ್ದಂತೆಯೇ ಯೇಸುಸ್ವಾಮಿ ತಮ್ಮನ್ನು ನೇಮಿಸಿದವರಿಗೆ ಪ್ರಾಮಾಣಿಕರಾಗಿದ್ದರು.

3 ಆದರೆ, ಮನೆಕಟ್ಟುವವನು ಮನೆಗಿಂತ ಹೆಚ್ಚಿನ ಮಾನ್ಯತೆ ಉಳ್ಳವನಾಗಿರುವಂತೆ ಯೇಸು, ಮೋಶೆಗಿಂತಲೂ ಹೆಚ್ಚಿನ ಗೌರವಕ್ಕೆ ಪಾತ್ರರು.

4 ಪ್ರತಿಯೊಂದು ಮನೆಗೂ ಕಟ್ಟಿದವನೊಬ್ಬನು ಇರುತ್ತಾನೆ; ಸಮಸ್ತವನ್ನು ಕಟ್ಟಿದವರಾದರೋ ದೇವರೇ.

5 ಮೋಶೆ ದೇವರ ಮನೆಗೆಲ್ಲಾ ಪ್ರಾಮಾಣಿಕ ದಾಸನಾಗಿದ್ದನು; ಮುಂದೆ ಪ್ರಕಟವಾಗಬೇಕಿದ್ದ ಸಂಗತಿಗಳಿಗೆ ಸಾಕ್ಷಿಯಾಗಿದ್ದನು.

6 ಕ್ರಿಸ್ತಯೇಸುವಾದರೋ, ದೇವರ ಮನೆಯಲ್ಲಿ ಅಧಿಕಾರ ಹೊಂದಿದ ಪ್ರಾಮಾಣಿಕ ಪುತ್ರನಾಗಿದ್ದಾರೆ. ನಾವು ನಿರೀಕ್ಷಿಸುತ್ತಿರುವ ಭಾಗ್ಯದ ಬಗ್ಗೆ ನಮಗಿರುವ ಶ್ರದ್ಧೆಯನ್ನೂ ಶೌರ್ಯವನ್ನೂ ಕಳೆದುಕೊಳ್ಳದೆ ದೃಢವಾಗಿದ್ದರೆ, ನಾವೇ ಅವರ ಮನೆಯಾಗಿರುತ್ತೇವೆ.


ವಿಶ್ರಾಂತಿಯ ನೆಲೆ

7 ಆದಕಾರಣ ಪವಿತ್ರಾತ್ಮ ಹೇಳುವ ಪ್ರಕಾರ: “ದೇವರ ದನಿಯನು ಕೇಳುವಿರಾದರೆ ನೀವಿಂದು ನಿಮ್ಮ ಪೂರ್ವಜರಂತೆ ಕಲ್ಲಾಗಿಸದಿರಿ ಹೃದಯವನು.

8 ಮರುಭೂಮಿಯಲ್ಲವರು ದೇವರನು ಪರೀಕ್ಷಿಸಿದರು ಆತನ ವಿರುದ್ಧ ಅಲ್ಲೇ ದಂಗೆ ಎದ್ದರು.

9 ಎಂದೇ ದೇವರಿಂತೆಂದರು: ಮರುಭೂಮಿಯಲಿ ಅವರೆನ್ನನು ಕೆಣಕಿದರು; ನಲವತ್ತು ವರುಷ ನಾನೆಸಗಿದ ಮಹತ್ಕಾರ್ಯಗಳನು ಕಂಡರಾದರೂ ಎನ್ನ ಕೆಣಕಿ ಪರೀಕ್ಷಿಸಿದರು.

10 ಎಂತಲೇ ಆ ಜನರ ವಿರುದ್ಧ ಕೆರಳಿ ಇಂತೆಂದನು: ಹಾದಿ ತಪ್ಪಿದ ಹೃದಯಿಗಳು ಇವರೆಂದಿಗೂ, ಗ್ರಹಿಸಿಕೊಳ್ಳರಿವರು ಎನ್ನ ಮಾರ್ಗವನು

11 ಸೇರರು ಎನ್ನ ವಿಶ್ರಾಂತಿಯ ನೆಲೆಯನು ಇವರೆಂದಿಗೂ ಎಂದು ಸಿಟ್ಟುಗೊಂಡು ಶಪಥ ಮಾಡಿದೆನು.”

12 ಸಹೋದರರೇ, ಜೀವಸ್ವರೂಪರಾದ ದೇವರನ್ನು ಬಿಟ್ಟಗಲುವ ಕೆಟ್ಟಬುದ್ಧಿಯೂ ಅವಿಶ್ವಾಸವೂ ನಿಮ್ಮಲ್ಲಿ ಯಾರಿಗೂ ಇರದಂತೆ ಎಚ್ಚರಿಕೆಯಾಗಿರಿ.

13 ನಿಮ್ಮಲ್ಲಿ ಯಾರೂ ಪಾಪದಿಂದ ಮೋಸಹೋಗಿ ಕಠಿಣರಾಗದಂತೆ “ಇಂದು” ಎನ್ನುವ ಕಾಲವು ಇರುವ ತನಕ ಪ್ರತಿನಿತ್ಯವು ಒಬ್ಬರನ್ನೊಬ್ಬರು ಎಚ್ಚರಿಸಿರಿ.

14 ನಾವೆಲ್ಲರೂ ಕ್ರಿಸ್ತಯೇಸುವಿನೊಡನೆ ಸಹಬಾಧ್ಯರು; ಆದರೆ, ಪ್ರಾರಂಭದಲ್ಲಿ ನಮಗಿದ್ದ ನಂಬಿಕೆ-ನಿರೀಕ್ಷೆಯನ್ನು ಕೊನೆಯವರೆಗೂ ಸ್ಥಿರವಾಗಿ ಇರಿಸಿಕೊಳ್ಳಬೇಕು.

15 “ದೇವರ ದನಿಯನು ಕೇಳುವಿರಾದರೆ ನೀವಿಂದು ನಿಮ್ಮ ಪೂರ್ವಜರಂತೆ ಕಲ್ಲಾಗಿಸದಿರಿ ಹೃದಯವನು ಮರುಭೂಮಿಯಲಿ ದೇವರ ವಿರುದ್ಧ ದಂಗೆಯೆದ್ದವರವರು.”

16 ಇಲ್ಲಿ, ದೇವರ ದನಿಯನು ಕೇಳಿಯೂ ದಂಗೆ ಎದ್ದವರು ಯಾರು? ಮೋಶೆಯ ಮುಂದಾಳತ್ವದಲ್ಲಿ ಈಜಿಪ್ಟ್ ದೇಶವನ್ನು ಬಿಟ್ಟುಬಂದ ಎಲ್ಲರೂ ಅಲ್ಲವೇ?

17 ನಲವತ್ತು ವರ್ಷಗಳು ದೇವರು ಸಿಟ್ಟುಗೊಂಡದ್ದು ಯಾರ ಮೇಲೆ? ಪಾಪಮಾಡಿದವರ ಮೇಲಲ್ಲವೇ? ಅವರ ಶವಗಳು ಬಿದ್ದುದು ಮರುಭೂಮಿಯಲ್ಲಲ್ಲವೇ?

18 “ಸೇರರು ಎನ್ನ ವಿಶ್ರಾಂತಿಯ ನೆಲೆಯನು ಇವರೆಂದಿಗೂ” ಎಂದು ಯಾರನ್ನು ಕುರಿತು ಶಪಥ ಮಾಡಿದರು? ತಮಗೆ ಅವಿಧೇಯರಾದ ಜನರನ್ನು ಕುರಿತಲ್ಲವೇ?

19 ಆ ವಿಶ್ರಾಂತಿಯ ನೆಲೆಯನ್ನು ಅವರು ಸೇರದೆಹೋದದ್ದು ತಮ್ಮ ಅವಿಶ್ವಾಸದಿಂದಲೇ ಎಂಬುದು ನಮಗೆ ಸ್ಪಷ್ಟವಾಗುತ್ತದೆ.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು