Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಇಬ್ರಿಯರಿಗೆ 2 - ಕನ್ನಡ ಸತ್ಯವೇದವು C.L. Bible (BSI)


ಉತ್ಕೃಷ್ಟ ಜೀವೋದ್ಧಾರ

1 ಆದ್ದರಿಂದಲೇ ಹುಚ್ಚುಹೊಳೆಯಲ್ಲಿ ಕೊಚ್ಚಿಹೋಗದ ಹಾಗೆ ನಾವು ಕೇಳಿರುವ ಸತ್ಯಗಳಿಗೆ ಬಿಗಿಯಾಗಿ ಕಚ್ಚಿಕೊಳ್ಳಬೇಕು.

2 ಏಕೆಂದರೆ, ದೇವದೂತರ ಮುಖಾಂತರ ನಮ್ಮ ಪೂರ್ವಜರಿಗೆ ಕೊಡಲಾದ ಸಂದೇಶವು ಅಕ್ಷಯವಾಗಿದ್ದು ಅದನ್ನು ಮೀರಿ ಮಾಡಿದ ಪ್ರತಿಯೊಂದು ತಪ್ಪು ಮತ್ತು ಅವಿಧೇಯತೆಯು ಶಿಕ್ಷಾರ್ಹವಾಗಿದ್ದರೆ,

3 ಇಂಥ ಉತ್ಕೃಷ್ಟ ಜೀವೋದ್ಧಾರವನ್ನು ಪಡೆದಿರುವ ನಾವು ಅದನ್ನು ಅಲಕ್ಷ್ಯಮಾಡಿದಲ್ಲಿ ಶಿಕ್ಷೆಯಿಂದ ಹೇಗೆತಾನೆ ತಪ್ಪಿಸಿಕೊಳ್ಳಬಲ್ಲೆವು? ಈ ಜೀವೋದ್ಧಾರವನ್ನು ಮೊತ್ತಮೊದಲು ಸಾರಿದವರು ಪ್ರಭುವೇ. ಅವರನ್ನು ಆಗ ಆಲಿಸಿದವರು ಅದನ್ನು ನಮಗೆ ಪ್ರಮಾಣೀಕರಿಸಿದ್ದಾರೆ.

4 ಸೂಚಕಕಾರ್ಯಗಳಿಂದಲೂ ಅದ್ಭುತಕಾರ್ಯಗಳಿಂದಲೂ ಹಲವಾರು ಮಹತ್ಕಾರ್ಯಗಳಿಂದಲೂ ಮತ್ತು ತಮ್ಮ ಚಿತ್ತಾನುಸಾರ ಅನುಗ್ರಹಿಸಿದ ಪವಿತ್ರಾತ್ಮ ಅವರ ವರದಾನಗಳಿಂದಲೂ ದೇವರು ಆ ಪ್ರಮಾಣವನ್ನು ಪುಷ್ಟೀಕರಿಸಿದ್ದಾರೆ.


ಉದ್ಧಾರ ಪ್ರವರ್ತಕ ಯೇಸು

5 ನಾವು ಪ್ರಸ್ತಾಪಿಸುತ್ತಿರುವ ನೂತನ ಸಾಮ್ರಾಜ್ಯವನ್ನು ದೇವರು ತಮ್ಮ ದೂತರಿಗೆ ಅಧೀನಪಡಿಸಲಿಲ್ಲ.

6 ಅದಕ್ಕೆ ಬದಲಾಗಿ, ಪವಿತ್ರಗ್ರಂಥದಲ್ಲಿ ಒಂದೆಡೆ ಹೀಗೆಂದು ಸ್ಪಷ್ಟವಾಗಿ ಹೇಳಲಾಗಿದೆ: “ಓ ದೇವಾ, ಹುಲುಮಾನವನೆಷ್ಟರವನು ನೀನವನ ಗಮನಿಸಲು?

7 ನರಪುತ್ರನು ಎನಿತರವನು ನೀನವನ ಅರಸಿಬರಲು? ದೇವದೂತರಿಗಿಂತಲೂ ಆತನನು ತುಸುವೇ ತಗ್ಗಿಸಿದೆ ಘನಗೌರವವನು, ಸಿರಿಮಹಿಮೆಯನು ಮುಕುಟವಾಗಿ ಮುಡಿಸಿದೆ;

8 ಆತನಿಗೆ ನೀನೆಲ್ಲವನು ಅಧೀನವಾಗಿಸಿದೆ.” ಹೀಗೆ ದೇವರು ಎಲ್ಲವನ್ನು ಆತನಿಗೆ ಅಧೀನಪಡಿಸಿರುವುದರಿಂದ ಆತನಿಗೆ ಅಧೀನವಲ್ಲದ್ದು ಏನೂ ಇಲ್ಲವೆಂದಾಯಿತು. ಆದರೂ ಸದ್ಯಕ್ಕೆ ಎಲ್ಲವೂ ಆತನಿಗೆ ಅಧೀನವಾಗಿರುವುದನ್ನು ನಾವು ಕಾಣುತ್ತಿಲ್ಲ.

9 ದೇವದೂತರಿಗಿಂತ ಕೊಂಚಕಾಲವೇ ತುಸು ತಗ್ಗಿಸಲಾದ ಒಬ್ಬರನ್ನು, ಅಂದರೆ ಯೇಸುವನ್ನು ಮಾತ್ರ ನಾವು ಕಾಣುತ್ತೇವೆ. ಇವರು ಯಾತನಾ ಮರಣವನ್ನು ಅನುಭವಿಸಿದ್ದರಿಂದ ‘ಘನಗೌರವವನ್ನೂ ಸಿರಿಮಹಿಮೆಯನ್ನೂ ಮುಕುಟವಾಗಿ’ ಪಡೆದುದನ್ನು ನಾವು ಕಾಣುತ್ತೇವೆ. ದೈವಾನುಗ್ರಹದಿಂದ ಎಲ್ಲಾ ಮಾನವರ ಕಲ್ಯಾಣಕ್ಕಾಗಿ ಅವರು ಸಾವನ್ನು ಅನುಭವಿಸಬೇಕಾಗಿತ್ತು.

10 ಸಮಸ್ತವನ್ನೂ ಸೃಷ್ಟಿಸಿ ಪರಿಪಾಲಿಸಿಕೊಂಡುಬರುವ ದೇವರು ತಮ್ಮ ಮಹಿಮೆಯಲ್ಲಿ ಪಾಲುಗೊಳ್ಳಲು ಮಕ್ಕಳನೇಕರನ್ನು ಕರೆತರುವಂತೆ ಉದ್ಧಾರ ಪ್ರವರ್ತಕರಾದ ಯೇಸುವನ್ನು ಹಿಂಸೆಬಾಧೆಗಳ ಮೂಲಕ ಪರಿಪೂರ್ಣವಾಗಿಸಿದ್ದು ಯುಕ್ತವೇ ಸರಿ.

11 ಪವಿತ್ರಗೊಳಿಸುವವನಿಗೂ ಪವಿತ್ರರಾಗುವವರಿಗೂ ಒಬ್ಬನೇ ತಂದೆ. ಈ ಕಾರಣ, ಪವಿತ್ರಗೊಳಿಸುವ ಯೇಸು, ಪವಿತ್ರರಾಗುವವರನ್ನು ‘ಸಹೋದರರು’ ಎಂದು ಕರೆಯಲು ನಾಚಿಕೆಪಡಲಿಲ್ಲ.

12 “ಸಾರುವೆನು ನನ್ನ ಸೋದರರಿಗೆ ನಿನ್ನ ಮಹಿಮೆಯನು ಮಾಡುವೆನು ಸಭಾಮಧ್ಯೆ ನಿನ್ನ ಗುಣಗಾನವನು,” ಎಂದೂ

13 “ದೇವರಲ್ಲಿ ಭರವಸೆಯಿಡುವೆನು ನಾನು,” ಎಂದೂ “ಇಗೋ, ಇರುವೆವು ನಾನು ಮತ್ತು ದೇವರೆನಗಿತ್ತ ಕುವರರು,” ಎಂದು ಹೇಳಿದ್ದಾರೆ.

14-15 ಇದಲ್ಲದೆ, ಮಕ್ಕಳು ರಕ್ತಮಾಂಸಧಾರಿಗಳಾಗಿರುವುದರಿಂದ ಯೇಸುವು ಅವರಂತೆ ರಕ್ತಮಾಂಸಧಾರಿಯಾದರು. ಹೀಗೆ ಮರಣಾಧಿಕಾರಿಯಾಗಿದ್ದ ಸೈತಾನನನ್ನು ತಮ್ಮ ಮರಣದಿಂದಲೇ ಸೋಲಿಸಲು ಮತ್ತು ಮರಣಭಯದ ನಿಮಿತ್ತ ತಮ್ಮ ಜೀವನದುದ್ದಕ್ಕೂ ದಾಸ್ಯದಲ್ಲಿದ್ದವರನ್ನು ಬಿಡುಗಡೆಮಾಡಲು ಅವರು ಮನುಷ್ಯರಾದರು.

16 ಅವರು ಉದ್ಧಾರ ಮಾಡಬಂದುದು ಖಂಡಿತವಾಗಿ ದೇವದೂತರನ್ನಲ್ಲ, ಅಬ್ರಹಾಮನ ಸಂತತಿಯನ್ನು.

17 ಆದಕಾರಣ, ಎಲ್ಲದರಲ್ಲೂ ತಮ್ಮ ಸಹೋದರರಿಗೆ ಸಮಾನರಾಗಬೇಕಾಗಿತ್ತು; ಜನರ ಪಾಪನಿವಾರಣೆಗಾಗಿ ದೇವರ ಕಾರ್ಯಗಳನ್ನು ನಿರ್ವಹಿಸುವ ದಯಾಮಯನೂ ನಂಬಿಕಸ್ಥನೂ ಆದ ಪ್ರಧಾನ ಯಾಜಕನಾಗಬೇಕಾಗಿತ್ತು.

18 ಸ್ವತಃ ತಾವೇ ಶೋಧನೆಗೊಳಗಾಗಿ ಯಾತನೆಯನ್ನು ಅನುಭವಿಸಿದ್ದರಿಂದ ಶೋಧನೆಗೊಳಗಾಗುವವರಿಗೆ ನೆರವಾಗಲು ಯೇಸು ಸಮರ್ಥರಾದರು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು