ಇಬ್ರಿಯರಿಗೆ 11 - ಕನ್ನಡ ಸತ್ಯವೇದವು C.L. Bible (BSI)ವಿಶ್ವಾಸದಿಂದಲೇ ಸಿದ್ಧಿ 1 ವಿಶ್ವಾಸವೆಂಬುದು ನಾವು ನಿರೀಕ್ಷಿಸುವಂಥವುಗಳು ನಮಗೆ ದೊರಕುತ್ತವೆ ಎಂಬ ದೃಢ ನಂಬಿಕೆ ಹಾಗು ಕಣ್ಣಿಗೆ ಕಾಣದಂಥವುಗಳು ನಿಶ್ಚಯವಾದವು ಎಂಬ ನಿಲುವು ಆಗಿದೆ. 2 ನಮ್ಮ ಪೂರ್ವಜರು ದೈವಸಮ್ಮತಿಯನ್ನು ಪಡೆದದ್ದು ವಿಶ್ವಾಸದಿಂದಲೇ; 3 ವಿಶ್ವವು ದೇವರ ವಾಣಿಯಿಂದ ಉಂಟಾಯಿತು ಎಂಬುದನ್ನು ಮತ್ತು ಗೋಚರವಾದವುಗಳು ಅಗೋಚರವಾದವುಗಳಿಂದ ಉಂಟಾದವು ಎಂಬುದನ್ನು ವಿಶ್ವಾಸದಿಂದಲೇ ತಿಳಿಯುತ್ತೇವೆ. 4 ವಿಶ್ವಾಸವಿದ್ದುದರಿಂದಲೇ ಹೇಬೆಲನು ಕಾಯಿನನಿಗಿಂತ ಉತ್ತಮವಾದ ಬಲಿಯನ್ನು ದೇವರಿಗೆ ಸಮರ್ಪಿಸಿದನು. ವಿಶ್ವಾಸದಿಂದಲೇ ತಾನು ಸತ್ಪುರುಷನೆಂದು ಸನ್ಮಾನಿತನಾದನು. ಅವನ ಕಾಣಿಕೆ ತಮಗೆ ಸ್ವೀಕೃತವಾಯಿತೆಂದು ದೇವರೇ ಸಾದರಪಡಿಸಿದರು. ಅವನು ಮೃತನಾಗಿದ್ದರೂ ಅವನ ವಿಶ್ವಾಸದ ಮೂಲಕ ಇಂದಿಗೂ ಮಾತನಾಡುತ್ತಿದ್ದಾನೆ. 5 ವಿಶ್ವಾಸವಿದ್ದುದರಿಂದಲೇ ಹನೋಕನು ಮೃತ್ಯುವಿಗೆ ತುತ್ತಾಗದಂತೆ ದೇವರ ಬಳಿಗೆ ಒಯ್ಯಲ್ಪಟ್ಟನು. ದೇವರು ಆತನನ್ನು ಕರೆದುಕೊಂಡಿದ್ದರಿಂದ ಆತನು ಯಾರಿಗೂ ಕಾಣಸಿಗಲಿಲ್ಲ. ಆತನು ಹೀಗೆ ಒಯ್ಯಲ್ಪಡುವುದಕ್ಕೆ ಮುಂಚೆ ದೇವರಿಗೆ ಮೆಚ್ಚುಗೆಯಾಗಿದ್ದನು ಎಂಬುದಕ್ಕೆ ಸಾಕ್ಷ್ಯಾಧಾರವಿದೆ. 6 ವಿಶ್ವಾಸವಿಲ್ಲದೆ ದೇವರ ಮೆಚ್ಚುಗೆಗೆ ಪಾತ್ರರಾಗಲು ಯಾರಿಂದಲೂ ಸಾಧ್ಯವಿಲ್ಲ. ದೇವರ ಬಳಿಗೆ ಸಾಗುವವರು, ಅವರ ಅಸ್ತಿತ್ವವನ್ನು ವಿಶ್ವಾಸಿಸಬೇಕು; ಅವರನ್ನು ಅರಸುವವರಿಗೆ ತಕ್ಕ ಪ್ರತಿಫಲ ಸಿಗುವದೆಂದು ನಂಬಬೇಕು. 7 ವಿಶ್ವಾಸವಿದ್ದುದರಿಂದಲೇ ನೋವನು ಕಾಣದೆ ಇದ್ದ ತನ್ನ ಭವಿಷ್ಯದ ಬಗ್ಗೆ ದೇವರಿಂದ ಮುನ್ನೆಚ್ಚರಿಕೆ ಪಡೆದಾಗ ಅದನ್ನು ಲಕ್ಷ್ಯಕ್ಕೆ ತಂದುಕೊಂಡು ಕುಟುಂಬವನ್ನು ರಕ್ಷಿಸಿಕೊಳ್ಳಲು ನಾವೆಯೊಂದನ್ನು ನಿರ್ಮಿಸಿದನು. ಇಡೀ ಜಗತ್ತೇ ದಂಡನೆಗೆ ಗುರಿಯಾಯಿತು. ನೋವನಾದರೋ ತನ್ನ ವಿಶ್ವಾಸದ ಫಲವಾಗಿ ಸತ್ಸಂಬಂಧಕ್ಕೆ ಬಾಧ್ಯಸ್ಥನಾದನು. 8 ಅಬ್ರಹಾಮನು ದೇವರ ಕರೆಗೆ ಓಗೊಡುವುದಕ್ಕೂ ವಿಶ್ವಾಸವೇ ಕಾರಣವಾಗಿತ್ತು. ಆತನು ಆ ಕರೆಗನುಸಾರವಾಗಿ ತಾನು ಬಾಧ್ಯವಾಗಿ ಹೊಂದಬೇಕಾಗಿದ್ದ ನಾಡಿಗೆ ಹೊರಟನು. ತಾನು ಸೇರಬೇಕಾಗಿದ್ದ ಸ್ಥಳ ಯಾವುದೆಂದು ತಿಳಿಯದಿದ್ದರೂ ಸ್ವದೇಶವನ್ನು ಬಿಟ್ಟು ತೆರಳಿದನು. 9 ದೇವರು ವಾಗ್ದಾನ ಮಾಡಿದ ನಾಡಿಗೆ ಬಂದಾಗಲೂ ಆತನು ಅದೇ ವಿಶ್ವಾಸದ ನಿಮಿತ್ತ ಒಬ್ಬ ಅನ್ಯದೇಶಿಯನಂತೆ ಬಾಳಿದನು. ಡೇರೆಗಳಲ್ಲಿದ್ದುಕೊಂಡು ಒಬ್ಬ ಪ್ರವಾಸಿಗನಂತೆ ಜೀವಿಸಿದನು. ಅದೇ ವಾಗ್ದಾನಕ್ಕೆ ಸಹಬಾಧ್ಯಸ್ಥರಾದ ಇಸಾಕನೂ ಯಕೋಬನೂ ಅವನಂತೆಯೇ ಡೇರೆಗಳಲ್ಲಿ ವಾಸಿಸಿದರು. 10 ಏಕೆಂದರೆ, ಶಾಶ್ವತವಾದ ಅಸ್ತಿವಾರವುಳ್ಳ ಅಂದರೆ, ದೇವರೇ ನಿಯೋಜಿಸಿ ನಿರ್ಮಿಸಿದ ನಗರವನ್ನು ಆತನು ಎದುರುನೋಡುತ್ತಿದ್ದನು. 11 ಇದಲ್ಲದೆ, ಪ್ರಾಯಮೀರಿದ ಸಾರಳು ಕೂಡ ವಿಶ್ವಾಸದ ಮೂಲಕವಾಗಿಯೇ ಗರ್ಭವತಿ ಆಗುವ ಶಕ್ತಿಯನ್ನು ಪಡೆದಳು; ವಾಗ್ದಾನಮಾಡಿದ ದೇವರು ನಂಬಿಕಸ್ಥರು ಎಂಬ ಭರವಸೆ ಆಕೆಗಿತ್ತು. 12 ಹೀಗೆ ಮೃತಪ್ರಾಯನಾಗಿದ್ದ ಒಬ್ಬ ವ್ಯಕ್ತಿ ಆಕಾಶದ ನಕ್ಷತ್ರಗಳಂತೆಯೂ ಕಡಲ ತೀರದ ಮರಳಿನಂತೆಯೂ ಅಸಂಖ್ಯಾತವಾದ ಸಂತತಿಗೆ ತಂದೆಯಾದನು. 13 ಇವರೆಲ್ಲರೂ ವಿಶ್ವಾಸವುಳ್ಳವರಾಗಿಯೇ ಮೃತರಾದರು. ದೇವರು ವಾಗ್ದಾನಮಾಡಿದವುಗಳನ್ನು ಪಡೆಯದಿದ್ದರೂ ಅವುಗಳನ್ನು ದೂರದಿಂದಲೇ ನೋಡಿ ಸ್ವಾಗತಿಸಿ ಸಂತೋಷಪಟ್ಟರು; ತಾವು ಜಗತ್ತಿನಲ್ಲಿ ಕೇವಲ ಪರದೇಶಿಗಳೂ ಪ್ರವಾಸಿಗರೂ ಎಂಬುದನ್ನು ಒಪ್ಪಿಕೊಂಡರು. 14 ಹೀಗೆ ಒಪ್ಪಿಕೊಳ್ಳುವವರೇ ಸ್ವದೇಶವನ್ನು ಅರಸುವವರು ಎಂಬುದನ್ನು ಸ್ಪಷ್ಟವಾಗಿ ವ್ಯಕ್ತಪಡಿಸುತ್ತಾರೆ. 15 ತಾವು ಬಿಟ್ಟುಬಂದ ನಾಡಿನ ಮೇಲೆ ಅವರು ಮನಸ್ಸಿಡಲಿಲ್ಲ. ಹಾಗಿದ್ದಿದ್ದರೆ, ಮರಳಿ ಅಲ್ಲಿಗೆ ಹೋಗುವುದಕ್ಕೆ ಅವರಿಗೆ ಅವಕಾಶ ಯಾವಾಗಲೂ ಇರುತ್ತಿತ್ತು. 16 ಆದರೆ, ಅವರು ಬಯಸಿದ್ದು ಶ್ರೇಷ್ಠವಾದ ನಾಡನ್ನು, ಅಂದರೆ ಸ್ವರ್ಗವನ್ನು. ಆದ್ದರಿಂದಲೇ ದೇವರು, “ಅವರ ದೇವರು,” ಎಂದು ಕರೆಸಿಕೊಳ್ಳಲು ಅವಮಾನಪಡಲಿಲ್ಲ. ಅದಕ್ಕೆ ಬದಲು, ಅವರಿಗಾಗಿ ಒಂದು ನಗರವನ್ನು ಸಜ್ಜುಗೊಳಿಸಿದ್ದಾರೆ. 17 ವಿಶ್ವಾಸವಿದ್ದುದರಿಂದಲೇ ಅಬ್ರಹಾಮನು ತಾನು ಪರಿಶೋಧಿತನಾದಾಗ ಇಸಾಕನನ್ನು ಬಲಿಯಾಗಿ ಅರ್ಪಿಸಲು ಮುಂದೆ ಬಂದನು. 18 “ಇಸಾಕನಿಂದ ಹುಟ್ಟುವವರು ನಿನ್ನ ಸಂತತಿ ಎನಿಸಿಕೊಳ್ಳುವರು,” ಎಂಬ ವಾಗ್ದಾನವನ್ನು ಪಡೆದಿದ್ದರೂ ಅಬ್ರಹಾಮನು ತನ್ನ ಆ ಏಕಮಾತ್ರ ಪುತ್ರನನ್ನು ಬಲಿಕೊಡಲು ಹಿಂಜರಿಯಲಿಲ್ಲ. 19 ಏಕೆಂದರೆ, ಸತ್ತವರನ್ನು ದೇವರು ಜೀವಕ್ಕೆ ಎಬ್ಬಿಸಬಲ್ಲರು ಎಂಬುದನ್ನು ಅಬ್ರಹಾಮನು ತಿಳಿದಿದ್ದನು. ಅಂತೆಯೇ, ತನ್ನ ಮಗನನ್ನು ಸಾವಿನಿಂದ ಮರಳಿ ಪಡೆದನು. ಮುಂಬರಲಿರುವ ಘಟನೆಗೆ ಇಂದೊಂದು ಮುನ್ಸೂಚನೆಯಾಗಿತ್ತು. 20 ವಿಶ್ವಾಸವಿದ್ದುದರಿಂದಲೇ ಇಸಾಕನು ಸಹ ಮುಂದೆ ಸಂಭವಿಸಬೇಕಾದ್ದನ್ನು ಸೂಚಿಸಿ, ಯಕೋಬನನ್ನೂ ಏಸಾವನನ್ನೂ ಆಶೀರ್ವದಿಸಿದನು. 21 ವಿಶ್ವಾಸದಿಂದಲೇ ಯಕೋಬನು, ತಾನು ಸಾಯುವ ಸಮಯದಲ್ಲಿ ಜೋಸೆಫನ ಪ್ರತಿಯೊಬ್ಬ ಮಗನನ್ನೂ ಆಶೀರ್ವದಿಸಿದನು; ಊರುಗೋಲಿನ ಮೇಲೆ ಬಾಗಿಕೊಂಡೇ ದೇವರನ್ನು ಆರಾಧಿಸಿದನು. 22 ವಿಶ್ವಾಸದಿಂದಲೇ ಜೋಸೆಫನು, ತಾನು ಸಾಯುವ ಗಳಿಗೆಯು ಸಮೀಪಿಸಿದಾಗ, ಇಸ್ರಯೇಲಿನ ಜನರು ಈಜಿಪ್ಟಿನಿಂದ ಹೊರಬರುವುದನ್ನು ಸೂಚಿಸಿದನು. ಅಲ್ಲದೆ, ತನ್ನ ಶವಸಂಸ್ಕಾರದ ಬಗ್ಗೆ ಆದೇಶ ನೀಡಿದನು. 23 ವಿಶ್ವಾಸವಿದ್ದುದರಿಂದಲೇ ಮೋಶೆ ಹುಟ್ಟಿದಾಗ ಆ ಮಗುವಿನ ಸೌಂದರ್ಯವನ್ನು ಕಂಡು, ತಂದೆತಾಯಿಗಳು ರಾಜಾಜ್ಞೆಗೆ ಅಂಜದೆ, ಮೂರು ತಿಂಗಳವರೆಗೆ ಅದನ್ನು ಬಚ್ಚಿಟ್ಟರು. 24 ಮೋಶೆ ದೊಡ್ಡವನಾದ ಮೇಲೆ ತಾನು ಅರಸನಾದ ಫರೋಹನ ಕುಮಾರಿಯ ಪುತ್ರ ಎಂದು ಕರೆಸಿಕೊಳ್ಳಲು ನಿರಾಕರಿಸಿದುದೂ ಸಹ ವಿಶ್ವಾಸದಿಂದಲೇ. 25 ಕ್ಷಣಿಕ ಪಾಪಭೋಗಗಳನ್ನು ಸವಿಯುವುದಕ್ಕಿಂತಲೂ ದೇವಜನರೊಂದಿಗೆ ಕಷ್ಟಕ್ಕೆ ಈಡಾಗುವುದೇ ಲೇಸೆಂದು ಆತನು ತೀರ್ಮಾನಿಸಿಕೊಂಡನು. 26 ಈಜಿಪ್ಟಿನ ಸಕಲ ಐಶ್ವರ್ಯಕ್ಕಿಂತಲೂ ‘ಕ್ರಿಸ್ತ'ನಿಗೋಸ್ಕರ ನಿಂದೆಯನ್ನು ಅನುಭವಿಸುವುದು ದೊಡ್ಡ ಭಾಗ್ಯವೆಂದು ಆತನು ಎಣಿಸಿದನು. ಏಕೆಂದರೆ, ದೇವರಿಂದ ದೊರಕಲಿದ್ದ ಪ್ರತಿಫಲದ ಮೇಲೆಯೇ ಆತನ ಮನಸ್ಸು ನಾಟಿತ್ತು. 27 ವಿಶ್ವಾಸವಿದ್ದುದರಿಂದಲೇ ಆತನು ಅರಸನ ಕಡುಕೋಪಕ್ಕೂ ಅಂಜದೆ ಈಜಿಪ್ಟ್ ದೇಶವನ್ನು ಬಿಟ್ಟುಬಂದನು. ಕಣ್ಣಿಗೆ ಕಾಣದ ದೇವರನ್ನು ಕಣ್ಣಾರೆ ಕಾಣುತ್ತಿರುವನೋ ಎನ್ನುವಷ್ಟು ದೃಢಚಿತ್ತನಾಗಿ ಅವನು ಮುನ್ನಡೆದನು. 28 ಚೊಚ್ಚಲ ಮಕ್ಕಳನ್ನು ಸಂಹರಿಸುವಾತನು ಇಸ್ರಯೇಲರನ್ನು ಮುಟ್ಟದಂತೆ ರಕ್ತವನ್ನು ಚಿಮುಕಿಸಿ ಪಾಸ್ಕವನ್ನು ಆಚರಿಸುವಂತೆ ಮೋಶೆ ವಿಧಿಸಿದ್ದು ವಿಶ್ವಾಸದಿಂದಲೇ. 29 ವಿಶ್ವಾಸದಿಂದಲೇ ಇಸ್ರಯೇಲರು ಒಣನೆಲವನ್ನು ದಾಟುವಂತೆ, ಕೆಂಪು ಸಮುದ್ರವನ್ನು ದಾಟಿದರು. ಈಜಿಪ್ಟಿನವರು ಹಾಗೆಯೇ ದಾಟಲೆತ್ನಿಸಿದಾಗ ನೀರಿನ ಪಾಲಾದರು. 30 ಇಸ್ರಯೇಲರು ಏಳು ದಿನಗಳವರೆಗೆ ಜೆರಿಕೊ ಪಟ್ಟಣದ ಕೋಟೆಯನ್ನು ಪ್ರದಕ್ಷಿಣೆಮಾಡಿ ಬಂದ ನಂತರ ಅವು ತಮ್ಮಷ್ಟಕ್ಕೆ ತಾವೇ ಕುಸಿದು ಬಿದ್ದುದಕ್ಕೆ ಕಾರಣ ಆ ವಿಶ್ವಾಸವೇ. 31 ವಿಶ್ವಾಸವಿದ್ದುದರಿಂದಲೇ ರಹಾಬಳೆಂಬ ಜಾರಿಣಿ ಇಸ್ರಯೇಲ್ ಗೂಢಚಾರರಿಗೆ ಸೌಹಾರ್ದತೆಯಿಂದ ಆಶ್ರಯ ನೀಡಿ, ಅವಿಶ್ವಾಸಿಗಳೊಡನೆ ನಾಶವಾಗದೆ ಉಳಿದಳು. 32 ಇನ್ನೂ ಹೇಳಬೇಕೆ? ಗಿಡಿಯೋನ್, ಬಾರಾಕ್, ಸಂಸೋನ್, ಯೆಪ್ತಾಹ, ದಾವೀದ, ಸಮುವೇಲ ಇವರನ್ನೂ ಇತರ ಪ್ರವಾದಿಗಳನ್ನೂ ಕುರಿತು ಹೇಳಬೇಕಾದರೆ ನನಗೆ ಸಮಯ ಸಾಲದು. 33 ಇವರು ವಿಶ್ವಾಸದಿಂದಲೇ ರಾಜ್ಯಗಳನ್ನು ಗೆದ್ದರು; ನ್ಯಾಯನೀತಿಯಿಂದ ಆಳಿದರು; ದೇವರಿಂದ ವಾಗ್ದಾನಗಳನ್ನು ಪಡೆದರು; ಸಿಂಹಗಳ ಬಾಯನ್ನು ಬಂಧಿಸಿದರು. 34 ಅಗ್ನಿಜ್ವಾಲೆಯನ್ನು ಆರಿಸಿದರು; ಖಡ್ಗದ ಬಾಯಿಂದ ತಪ್ಪಿಸಿಕೊಂಡರು; ಬಲಹೀನರಾಗಿದ್ದರೂ ಬಲಿಷ್ಠರಾದರು; ಯುದ್ಧದಲ್ಲಿ ಪರಾಕ್ರಮಶಾಲಿಗಳಾದರು; ಶತ್ರುಗಳ ಸೈನ್ಯವನ್ನು ಸದೆಬಡಿದರು. 35 ವಿಶ್ವಾಸದಿಂದಲೇ ಮಹಿಳೆಯರು ಮೃತರಾಗಿದ್ದ ತಮ್ಮವರನ್ನು ಮರಳಿ ಜೀವಂತರಾಗಿ ಪಡೆದರು. ಕೆಲವರು ಇದಕ್ಕಿಂತ ಶ್ರೇಷ್ಠವಾದ ಪುನರುತ್ಥಾನವನ್ನು ಪಡೆಯುವ ಉದ್ದೇಶದಿಂದ ಬಿಡುಗಡೆಯನ್ನು ನಿರಾಕರಿಸಿ, ಹಿಂಸೆಬಾಧೆಗಳಿಗೆ ತುತ್ತಾಗಿ ಮರಣವನ್ನಪ್ಪಿದರು. 36 ಇನ್ನೂ ಕೆಲವರು ಹಾಸ್ಯ ಪರಿಹಾಸ್ಯ, ಏಟುಪೆಟ್ಟು, ಸೆರೆಸಂಕಲೆಗಳನ್ನು ಅನುಭವಿಸಿದರು. 37 ಮತ್ತೆ ಕೆಲವರನ್ನು ಜನರು ಕಲ್ಲೆಸೆದು ಕೊಂದರು; ಗರಗಸದಿಂದ ಸೀಳಿ ಸಾಯಿಸಿದರು; ಖಡ್ಗದಿಂದ ಕಡಿದುಹಾಕಿದರು. ಇನ್ನೂ ಕೆಲವರು ನಿರ್ಗತಿಕರಾಗಿ ಕುರಿಮೇಕೆಗಳ ಚರ್ಮಗಳನ್ನು ಹೊದ್ದುಕೊಂಡು ಅಲೆದಾಡಿದರು. ಬಡತನಕ್ಕೂ ಹಿಂಸೆಬಾಧೆಗಳಿಗೂ ಕಷ್ಟಸಂಕಟಗಳಿಗೂ ಈಡಾದರು; 38 ಇಂಥವರಿಗೆ ಈ ಲೋಕ ತಕ್ಕ ಸ್ಥಳವಾಗಿರಲಿಲ್ಲ. ಈ ಕಾರಣದಿಂದ, ಅವರು ಕಾಡು ಬೆಟ್ಟಗಳಲ್ಲೂ ಗುಹೆಕಣಿವೆಗಳಲ್ಲೂ ತಲೆಮರೆಸಿಕೊಂಡಿದ್ದರು. 39 ಇವರೆಲ್ಲರೂ ವಿಶ್ವಾಸವುಳ್ಳವರಾದುದರಿಂದಲೇ ಸಜ್ಜನರೆಂದು ಹೆಸರುವಾಸಿಯಾದರು. ಆದರೂ ದೇವರು ವಾಗ್ದಾನಮಾಡಿದ ಸತ್ಫಲಗಳನ್ನು ಸವಿಯಲಿಲ್ಲ. 40 ಏಕೆಂದರೆ, ದೇವರು ನಮ್ಮೆಲ್ಲರಿಗೋಸ್ಕರ, ಶ್ರೇಷ್ಠವಾದ ಯೋಜನೆಯೊಂದನ್ನು ರೂಪಿಸಿ, ನಮ್ಮೊಡನೆಯೇ ಅಂದಿನ ವಿಶ್ವಾಸಿಗಳೂ ಸಿದ್ಧಿಗೆ ಬರಬೇಕೆಂದು ಸಂಕಲ್ಪಿಸಿದರು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India