ಇಬ್ರಿಯರಿಗೆ 10 - ಕನ್ನಡ ಸತ್ಯವೇದವು C.L. Bible (BSI)1 ಧರ್ಮಶಾಸ್ತ್ರವು ಬರಲಿದ್ದ ಸೌಭಾಗ್ಯದ ಛಾಯೆಯೇ ಹೊರತು ಅದರ ನಿಜಸ್ವರೂಪವಲ್ಲ. ವರ್ಷವರ್ಷವೂ ನಿರಂತರವಾಗಿ ಅದೇ ಬಲಿಗಳು ಅರ್ಪಿತವಾಗುತ್ತಿವೆ. ಹೀಗಿರುವಲ್ಲಿ, ದೇವರನ್ನು ಅರಸಿ ಬರುತ್ತಿರುವವರನ್ನು ಇಂಥ ಬಲಿಗಳಿಂದ ಸಿದ್ಧಿಗೆ ತರಲು ಹೇಗೆ ತಾನೆ ಸಾಧ್ಯ? 2 ಹಾಗೆ ಸಿದ್ಧಿಗೆ ತರಲು ಸಾಧ್ಯವಿದ್ದಿದ್ದರೆ ಬಲಿಯರ್ಪಣೆಯು ಎಂದೋ ನಿಂತುಹೋಗುತ್ತಿತ್ತು. ಏಕೆಂದರೆ, ಆಗ ಆರಾಧಕರು ಒಮ್ಮೆಗೇ ಶುದ್ಧಿಹೊಂದಿ ತಾವು ಪಾಪಿಗಳೆಂಬ ಮನವರಿಕೆಯೇ ಇಲ್ಲದೆ ಇರುತ್ತಿದ್ದರು. 3 ಬದಲಿಗೆ, ಪ್ರತಿವರ್ಷವೂ ಸಮರ್ಪಿಸಲಾಗುವ ಬಲಿಯರ್ಪಣೆಗಳು ಪಾಪನಿವಾರಣೆ ಆಗದ್ದನ್ನು ಜ್ಞಾಪಕಕ್ಕೆ ತರುತ್ತವೆ. 4 ಏಕೆಂದರೆ, ಹೋತ, ಹೋರಿಗಳ ರಕ್ತದಿಂದ ಪಾಪನಿವಾರಣೆ ಅಸಾಧ್ಯ. 5 ಆದ್ದರಿಂದಲೇ ಭೂಲೋಕಕ್ಕೆ ಬರಲಿದ್ದ ಕ್ರಿಸ್ತಯೇಸು ದೇವರಿಗೆ ಇಂತೆಂದರು: “ಬಲಿಯರ್ಪಣೆಗಳೂ ಕಾಣಿಕೆಗಳೂ ನಿಮಗೆ ಬೇಡವಾದವು ಎಂದೇ ಅಣಿಮಾಡಿ ಕೊಟ್ಟಿರಿ ನನಗೆ ದೇಹವೊಂದನು. 6 ಸರ್ವಾಂಗ ಹೋಮಗಳೂ ಪಾಪಪರಿಹಾರಕ ಬಲಿಗಳೂ ನಿಮಗೆ ತರಲಿಲ್ಲ ತೃಪ್ತಿಯನು. 7 ಆಗ ಇಂತೆಂದೆ ನಾನು : ಗ್ರಂಥದ ಸುರುಳಿಯಲಿ ನನ್ನನ್ನು ಕುರಿತು ಬರೆದಿರುವಂತೆ, ಓ ದೇವಾ, ಇಗೋ ನಾ ಬಂದೆ ನಿನ್ನ ಚಿತ್ತವನು ನೆರವೇರಿಸಲೆಂದೇ.” 8 ಧರ್ಮಶಾಸ್ತ್ರದ ವಿಧಿಗನುಸಾರ ಅರ್ಪಿಸಲಾಗುತ್ತಿದ್ದುವಾದರೂ “ಬಲಿಯರ್ಪಣೆಗಳು, ಕಾಣಿಕೆಗಳು, ದಹನಬಲಿಗಳು ಮತ್ತು ಪಾಪಪರಿಹಾರಕಬಲಿಗಳು ನಿಮಗೆ ಬೇಡವಾದವು; ಇವು ಯಾವುವು ನಿಮಗೆ ತರಲಿಲ್ಲ ತೃಪ್ತಿಯನು,” ಎಂದು ಮೊದಲು ಹೇಳುತ್ತಾರೆ. 9 ಅನಂತರ, “ಇಗೋ, ನಾ ಬಂದೆ ನಿಮ್ಮ ಚಿತ್ತವನು ನೆರವೇರಿಸಲೆಂದೇ,” ಎನ್ನುತ್ತಾರೆ. ಹೀಗೆ ಹೊಸದನ್ನು ಸ್ಥಾಪಿಸಲು ಹಳೆಯದನ್ನು ರದ್ದುಮಾಡಿದ್ದಾರೆ. 10 ಯೇಸುಕ್ರಿಸ್ತರು ಒಮ್ಮೆಗೇ ಎಲ್ಲಾ ಕಾಲಕ್ಕೂ ತಮ್ಮ ದೇಹವನ್ನು ಸಮರ್ಪಿಸಿ, ದೇವರ ಚಿತ್ತವನ್ನು ನೆರವೇರಿಸಿದ್ದರಿಂದಲೇ ನಾವು ಪುನೀತರಾಗಿದ್ದೇವೆ. 11 ಪ್ರತಿಯೊಬ್ಬ ಯಾಜಕನು ಅನುದಿನವೂ ತನ್ನ ಸೇವೆಯನ್ನು ನಿರ್ವಹಿಸುತ್ತಾನೆ. ಆದರೆ ಇವುಗಳಿಂದ ಎಂದಿಗೂ ಪಾಪನಿವಾರಣೆ ಆಗದು. 12 ಕ್ರಿಸ್ತಯೇಸು ಪಾಪನಿವಾರಣೆಗೆಂದು ಎಲ್ಲಾ ಕಾಲಕ್ಕೂ ಏಕೈಕ ಬಲಿಯನ್ನು ಅರ್ಪಿಸಿ ದೇವರ ಬಲಪಾರ್ಶ್ವದಲ್ಲಿ ಆಸೀನರಾಗಿದ್ದಾರೆ. 13 ಅವರ ಶತ್ರುಗಳು ತಮ್ಮ ಕಾಲಡಿಗೆ ಬರುವತನಕ ಅಲ್ಲೇ ಕಾದಿರುತ್ತಾರೆ. 14 ತಾವು ಪುನೀತಗೊಳಿಸಿದವರನ್ನು ಒಂದೇ ಒಂದು ಬಲಿಯರ್ಪಣೆಯಿಂದ ಯೇಸು ನಿರಂತರ ಸಿದ್ಧಿಗೆ ತಂದಿದ್ದಾರೆ. 15 ಇದನ್ನು ಕುರಿತು ಪವಿತ್ರಾತ್ಮರು ಕೂಡ ನಮಗೆ ಸಾಕ್ಷಿಕೊಡುತ್ತಾರೆ: 16 “ಆ ದಿನಗಳು ಬಂದಮೇಲೆ ನಾನು ಅವರೊಡನೆ ಮಾಡಿಕೊಳ್ಳುವ ಒಡಂಬಡಿಕೆ ಹೀಗಿರುವುದು : ನನ್ನ ಆಜ್ಞೆಗಳನ್ನು ಅವರ ಹೃದಯದಲ್ಲಿ ನಾಟಿಸುವೆನು; ಅವರ ಮನದಲ್ಲಿ ಬರೆಯುವೆನು.” ಎಂದು ಹೇಳಿದ ನಂತರವೇ, 17 “ಅವರ ಪಾಪಗಳನ್ನೂ ತಪ್ಪುನೆಪ್ಪುಗಳನ್ನೂ ನೆನಪಿಗೆ ತಂದುಕೊಳ್ಳೆನು,” ಎಂದಿದ್ದಾರೆ. 18 ಪಾಪಗಳ ಕ್ಷಮಾಪಣೆಯಾದ ಬಳಿಕ ಪಾಪಪರಿಹಾರಕಬಲಿಯ ಅವಶ್ಯಕತೆ ಇಲ್ಲ. ದೇವರ ಸಾನ್ನಿಧ್ಯವನ್ನು ಸೇರೋಣ 19 ಹೀಗಿರುವಲ್ಲಿ, ಪ್ರಿಯ ಸಹೋದರರೇ, ಯೇಸುಸ್ವಾಮಿ ತಮ್ಮ ದೇಹವೆಂಬ ತೆರೆಯ ಮೂಲಕ ನಮಗೆ ಹೊಸದಾದ ಸಜ್ಜೀವಮಾರ್ಗವನ್ನು ತೆರೆದಿಟ್ಟಿದ್ದಾರೆ. 20 ಅದರ ಮೂಲಕ ಗರ್ಭಗುಡಿಯನ್ನು ಧೈರ್ಯದಿಂದ ಪ್ರವೇಶಿಸುವ ಹಕ್ಕು ಅವರ ರಕ್ತಧಾರೆಯಿಂದಲೇ ನಮಗೆ ದೊರೆತಿದೆ. 21 ದೇವರ ಮನೆತನದ ಮೇಲೆ ಅಧಿಕಾರವಿರುವ ಶ್ರೇಷ್ಠಯಾಜಕ ನಮಗಿದ್ದಾರೆ. 22 ಆದಕಾರಣ, ನಾವು ಕೆಟ್ಟ ಮನಸ್ಸಾಕ್ಷಿಯನ್ನು ತೊರೆದ ಹೃದಯದಿಂದಲೂ ಪುಣ್ಯಜಲದಿಂದ ತೊಳೆದ ದೇಹದಿಂದಲೂ ಕೂಡಿದವರಾಗಿ ಶುದ್ಧ ಅಂತರಂಗದಿಂದಲೂ ಪೂರ್ಣವಿಶ್ವಾಸದಿಂದಲೂ ದೇವರ ಬಳಿಗೆ ಸಾಗೋಣ. 23 ಕೊಟ್ಟ ಮಾತನ್ನು ದೇವರು ಮೀರುವುದಿಲ್ಲ. ಆದ್ದರಿಂದ ನಾವು ನಿವೇದಿಸುವ ನಂಬಿಕೆ ನಿರೀಕ್ಷೆಯಲ್ಲಿ ಚಂಚಲರಾಗದೆ ಸದೃಢರಾಗಿರೋಣ. 24 ಪರಸ್ಪರ ಹಿತಚಿಂತಕರಾಗಿರೋಣ; ಪ್ರೀತಿಸಬೇಕು, ಒಳಿತನ್ನು ಮಾಡಬೇಕು ಎಂದು ಒಬ್ಬರನ್ನೊಬ್ಬರು ಹುರಿದುಂಬಿಸೋಣ. 25 ಸಭೆ ಸೇರುವ ರೂಢಿಯನ್ನು ಕೆಲವರು ಕೈಬಿಟ್ಟಿದ್ದಾರೆ. ನಾವು ಹಾಗೆ ಮಾಡದಿರೋಣ. ನಿಮಗೆ ತಿಳಿದಿರುವಂತೆ ಪ್ರಭು ಪ್ರತ್ಯಕ್ಷರಾಗುವ ದಿನವು ಸಮೀಪಿಸುತ್ತಿರುವುದರಿಂದ ಮತ್ತಷ್ಟು ಹೆಚ್ಚಾಗಿ ಒಬ್ಬರನ್ನೊಬ್ಬರು ಪ್ರೋತ್ಸಾಹಿಸೋಣ. 26 ನಾವು ಸತ್ಯವನ್ನು ಅರಿತವರಾದ ಮೇಲೂ ಬೇಕುಬೇಕಾಗಿ ಪಾಪಮಾಡುತ್ತಲೇ ಇದ್ದರೆ, ಪಾಪಪರಿಹಾರಕ್ಕೆ ಇನ್ನು ನಮಗೆ ಬೇರೆ ಯಾವ ಬಲಿಯೂ ಇರುವುದಿಲ್ಲ; 27 ಬದಲಿಗೆ, ಅತ್ಯಂತ ಭಯದಿಂದ ಎದುರುನೋಡಬೇಕಾದ ದಂಡನಾತೀರ್ಪು ಹಾಗೂ ದೇವರ ಶತ್ರುಗಳನ್ನು ದಹಿಸುವ ಉಗ್ರಕೋಪಾಗ್ನಿ - ಇವುಗಳು ಮಾತ್ರ ನಮಗೆ ಉಳಿದಿರುತ್ತವೆ. 28 ಮೋಶೆಯ ಆಜ್ಞಾವಿಧಿಗಳನ್ನು ಉಲ್ಲಂಘಿಸಿದವನು, ಇಬ್ಬರು ಅಥವಾ ಮೂವರು ಸಾಕ್ಷಿಗಳು ನೀಡುವ ಸಾಕ್ಷ್ಯದ ಆಧಾರದ ಮೇಲೆ ಕರುಣೆಯಿಲ್ಲದೆ ಮರಣದಂಡನೆಗೆ ಗುರಿ ಆಗುತ್ತಾನೆ. 29 ಹೀಗಿರುವಲ್ಲಿ, ದೇವರ ಪುತ್ರನನ್ನು ತುಚ್ಛೀಕರಿಸುವವನೂ ತನ್ನನ್ನು ಶುದ್ಧೀಕರಿಸಿದ ಹಾಗು ಒಡಂಬಡಿಕೆಯನ್ನು ಸ್ಥಿರಪಡಿಸುವ ರಕ್ತವನ್ನು ತೃಣೀಕರಿಸುವವನೂ ವರಪ್ರಸಾದವನ್ನು ತರುವ ಪವಿತ್ರಾತ್ಮ ಅವರನ್ನು ತಿರಸ್ಕರಿಸುವವನೂ ಎಂಥಾ ಕ್ರೂರದಂಡನೆಗೆ ಗುರಿ ಆಗುತ್ತಾನೆಂದು ನೀವೇ ಯೋಚಿಸಿನೋಡಿ! 30 “ಮುಯ್ಯಿಗೆ ಮುಯ್ಯಿ ತೀರಿಸುವುದು ನನ್ನ ಕೆಲಸ; ನಾನೇ ಪ್ರತೀಕಾರವನ್ನು ಸಲ್ಲಿಸುವೆನು,” ಎಂದು ಹೇಳಿದವರು ಯಾರೆಂದು ಬಲ್ಲೆವು. ಅಲ್ಲದೆ, “ಸರ್ವೇಶ್ವರ ತಮ್ಮ ಪ್ರಜೆಗಳಿಗೆ ನ್ಯಾಯತೀರ್ಪನ್ನು ನೀಡುವರು,” ಎಂದೂ ಹೇಳಲಾಗಿದೆ. 31 ಜೀವಸ್ವರೂಪರಾದ ದೇವರ ಕೈಯಲ್ಲಿ ಸಿಕ್ಕಿಬೀಳುವುದು ಅದೆಷ್ಟು ಭಯಂಕರ! 32 ನಿಮ್ಮ ಹಿಂದಿನ ದಿನಗಳನ್ನು ನೆನಪಿಗೆ ತಂದುಕೊಳ್ಳಿ: ನಿಮಗೆ ಜ್ಞಾನೋದಯವಾದ ತರುವಾಯ, ಕಷ್ಟಸಂಕಟಗಳಿಂದ ಕೂಡಿದ ಹೋರಾಟವನ್ನು ಎದುರಿಸಿದಿರಿ! 33 ಕೆಲವೊಮ್ಮೆ ಬಹಿರಂಗವಾಗಿ ಹಿಂಸೆಬಾಧೆಗಳಿಗೂ ನಿಂದೆ ಅವಮಾನಗಳಿಗೂ ಗುರಿಯಾದಿರಿ; ಮತ್ತೆ ಕೆಲವೊಮ್ಮೆ ನಿಮ್ಮಂತೆ ಸಂಕಟಪಡುವವರ ಸಂಗಡ ಸಹಭಾಗಿಗಳಾದಿರಿ; 34 ಸೆರೆಯಾಳುಗಳಿಗೆ ಸಂತಾಪ ತೋರಿಸಿದಿರಿ, ನಿಮ್ಮ ಸೊತ್ತನ್ನು ಸುಲಿಗೆಮಾಡಿದಾಗ ಸಂತೋಷದಿಂದ ಬಿಟ್ಟುಕೊಟ್ಟಿರಿ. ಏಕೆಂದರೆ, ಇದಕ್ಕೂ ಶ್ರೇಷ್ಠವಾದ ಹಾಗೂ ಶಾಶ್ವತವಾದ ಸೊತ್ತು ನಿಮಗಿದೆಯೆಂದು ಚೆನ್ನಾಗಿ ಅರಿತಿದ್ದಿರಿ. 35 ಆ ದೃಢ ನಂಬಿಕೆಯನ್ನು ಕಳೆದುಕೊಳ್ಳಬೇಡಿ; ಅದರ ಪ್ರತಿಫಲ ಮಹತ್ತಾದುದು. 36 ದೇವರ ಚಿತ್ತವನ್ನು ನೆರವೇರಿಸಿ, ಅವರು ವಾಗ್ದಾನಮಾಡಿರುವುದನ್ನು ಪಡೆದುಕೊಳ್ಳುವಂತೆ, ನೀವೂ ದೃಢಮನಸ್ಕರಾಗಿರಬೇಕು. 37 ಏಕೆಂದರೆ : “ಇನ್ನು ಅಲ್ಪ, ಅತ್ಯಲ್ಪ ಕಾಲದಲ್ಲೇ ಬರುವಾತನು ಬಂದೇ ಬರುವನು, ವಿಳಂಬಮಾಡನು. 38 ಸಜ್ಜನರಾದ ನನ್ನ ಭಕ್ತರು ವಿಶ್ವಾಸದಿಂದಲೇ ಬಾಳುವರು ಅವರು ಹಿಂಜರಿದರಾದರೆ ಮೆಚ್ಚೆನು ನಾನವರನು,” ಎನ್ನುತ್ತದೆ ಪವಿತ್ರಗ್ರಂಥ. 39 ಆದರೆ ನಾವು ಹಿಮ್ಮೆಟ್ಟಿ ಹಾಳಾಗುವ ಜನರಲ್ಲ; ವಿಶ್ವಾಸವುಳ್ಳವರಾಗಿ ಜೀವೋದ್ಧಾರವನ್ನು ಪಡೆಯುವವರು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India