Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಇಬ್ರಿಯರಿಗೆ 1 - ಕನ್ನಡ ಸತ್ಯವೇದವು C.L. Bible (BSI)


ಪುತ್ರನ ಮುಖೇನ ಪಿತನ ಸಂದೇಶ

1 ಪೂರ್ವಕಾಲದಲ್ಲಿ ದೇವರು ನಮ್ಮ ಪಿತೃಗಳೊಡನೆ ಹಲವಾರು ವಿಧದಲ್ಲಿ, ಅನೇಕ ಸಾರಿ ಪ್ರವಾದಿಗಳ ಮುಖಾಂತರ ಮಾತನಾಡಿದರು.

2 ಆದರೆ, ಇತ್ತೀಚಿನ ಅಂತಿಮ ದಿನಗಳಲ್ಲಿ ಅವರು ತಮ್ಮ ಪುತ್ರನ ಮುಖೇನ ನಮ್ಮೊಡನೆ ಮಾತನಾಡಿದ್ದಾರೆ. ದೇವರು ಇಡೀ ವಿಶ್ವವನ್ನು ಉಂಟುಮಾಡಿದ್ದು ಇವರ ಮುಖಾಂತರವೇ; ಸಮಸ್ತಕ್ಕೂ ಬಾಧ್ಯನನ್ನಾಗಿ ನೇಮಿಸಿರುವುದು ಇವರನ್ನೇ.

3 ಇವರೇ ದೇವರ ಮಹಿಮೆಯ ತೇಜಸ್ಸು; ಇವರೇ ದೈವತ್ವದ ಪಡಿಯಚ್ಚು; ತಮ್ಮ ಶಕ್ತಿಯುತ ವಾಕ್ಯದಿಂದ ಇವರೇ ಸಮಸ್ತಕ್ಕೂ ಆಧಾರ; ನಮ್ಮ ಪಾಪಗಳನ್ನು ತೊಡೆದುಹಾಕಿ, ಸ್ವರ್ಗದಲ್ಲಿ ಮಹೋನ್ನತ ದೇವರ ಬಲಪಾರ್ಶ್ವದಲ್ಲಿ ಆಸೀನರಾಗಿರುವವರೂ ಇವರೇ.


ದೇವದೂತರಿಗಿಂತ ಪುತ್ರನೇ ಶ್ರೇಷ್ಠ

4 ಹೀಗೆ ದೇವರ ಪುತ್ರನು ದೇವದೂತರಿಗಿಂತಲೂ ಶ್ರೇಷ್ಠ; ಅವರಿಗಿಂತಲೂ ಹೆಸರುವಾಸಿಯಾದಾತ.

5 ಏಕೆಂದರೆ, ದೇವರು ತಮ್ಮ ದೂತರಲ್ಲಿ ಯಾರಿಗಾದರೂ - “ನೀನೇ ನನ್ನ ಪುತ್ರ; ನಾನೇ ನಿನ್ನನಿಂದು ಪಡೆದವ,” ಎಂದು ಎಂದಾದರೂ ಹೇಳಿದ್ದುಂಟೇ? ಅಥವಾ, “ನಾನಾತನಿಗೆ ಪಿತನು, ಆತನೆನಗೆ ಪುತ್ರನು,” ಎಂದಾಗಲಿ ಹೇಳಿದ್ದುಂಟೇ?

6 ಇದಲ್ಲದೆ ದೇವರು ತಮ್ಮ ಚೊಚ್ಚಲ ಮಗನನ್ನು ಭೂಲೋಕಕ್ಕೆ ಕಳುಹಿಸುವಾಗ” “ದೇವದೂತರೆಲ್ಲರೂ ಆತನನ್ನು ಆರಾಧಿಸಲಿ,” ಎಂದಿದ್ದಾರೆ.

7 ದೇವದೂತರ ವಿಷಯದಲ್ಲಿ - “ದೇವರು ತಮ್ಮ ದೂತರನ್ನು ಬೀಸುಗಾಳಿಯನ್ನಾಗಿಯೂ ತಮ್ಮ ಸೇವಕರನ್ನು ಅಗ್ನಿಜ್ವಾಲೆಯನ್ನಾಗಿಯೂ ಮಾಡುತ್ತಾರೆ,” ಎಂದು ಹೇಳಿದ್ದಾರೆ.

8 ತಮ್ಮ ಪುತ್ರನನ್ನು ಕುರಿತಾದರೋ: “ದೇವಾ, ನಿನ್ನ ಸಿಂಹಾಸನವು ಶಾಶ್ವತವಾದುದು; ನ್ಯಾಯದಂಡವೇ ನಿನ್ನ ರಾಜದಂಡವಾಗಿದೆ.

9 ನ್ಯಾಯನೀತಿಗಳನ್ನು ನೀನು ಪ್ರೀತಿಸಿದೆ ಅನ್ಯಾಯ, ಅಕ್ರಮಗಳನ್ನು ದ್ವೇಷಿಸಿದೆ. ಆದ್ದರಿಂದ ದೇವರು, ಹೌದು ನಿನ್ನ ದೇವರು ನಿನ್ನನ್ನು ನಿನ್ನ ಮಿತ್ರನಿಗಿಂತ ಮಿಗಿಲಾಗಿ ಸನ್ಮಾನಿಸಿ ಪರಮಾನಂದ ತೈಲದಿಂದ ಅಭಿಷೇಕಿಸಿದ್ದಾರೆ,” ಎಂದು ಹೇಳಿದ್ದಾರೆ.

10 ಇದಲ್ಲದೆ, “ಸರ್ವೇಶ್ವರಾ, ಆದಿಯಲ್ಲಿ ನೀ ಭೂಮಿಯನು ಸೃಜಿಸಿದೆ ನಭಮಂಡಲದಲ್ಲಿ ನಿನ್ನ ಕೈಚಳಕವ ತೋರಿದೆ.

11 ಇವುಗಳೆಲ್ಲವೂ ಅಳಿಯುತ್ತವೆ ನೀನಾದರೋ ಸದಾ ಉಳಿಯುವೆ. ಹಳತಾಗುವುವು ಇವೆಲ್ಲಾ ಬಟ್ಟೆಬರೆಯಂತೆ.

12 ಮುದುರಿ ಮೂಲೆಗೆಸೆಯುವೆ ಇವನ್ನು ಮೇಲಂಗಿಯಂತೆ. ಬದಲಾಯಿಸುವೆ ನೀ ಅವನ್ನು ಉಡುಪಿನಂತೆ ನೀನಾದರೋ ಬದಲಾಗದೆ ಇರುವೆ ಮೊದಲಿನಂತೆ. ಮುಗಿವೇ ಇರದು ನಿನ್ನ ಬಾಳುವೆಗೆ,” ಎಂದೂ ಸಹ ದೇವರು ನುಡಿದಿದ್ದಾರೆ.

13 ಯಾವ ದೇವದೂತನಿಗಾದರೂ ದೇವರು, “ನಿನ್ನ ಶತ್ರುಗಳನ್ನು ನಾನು ನಿನ್ನ ಪಾದದಡಿ ಹಾಕುವತನಕ ನನ್ನ ಬಲಗಡೆಯಲ್ಲಿ ಆಸೀನನಾಗಿರು,” ಎಂದು ಎಂದಾದರೂ ಹೇಳಿದ್ದುಂಟೇ?

14 ದೂತರೆಲ್ಲರೂ ಕೇವಲ ಸೇವೆಮಾಡುವ ಆತ್ಮಗಳಲ್ಲವೇ? ಜೀವೋದ್ಧಾರವನ್ನು ಬಾಧ್ಯವಾಗಿ ಹೊಂದಬೇಕಾದವರ ಊಳಿಗಕ್ಕಾಗಿ ಕಳುಹಿಸಲಾದವರಲ್ಲವೇ?

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು