ಮುನ್ನುಡಿ
ಪವಿತ್ರಗ್ರಂಥದಲ್ಲಿ ಸವಿಸ್ತಾರವಾಗಿ ಲಿಖಿತವಾದ ಪ್ರವಾದನೆಗಳಲ್ಲಿ ಆಮೋಸನ ಗ್ರಂಥ ಒಂದು ವಿಶೇಷಸ್ಥಾನವನ್ನು ಪಡೆದಿದೆ. ಈ ದೃಷ್ಟಿಯಲ್ಲಿ ಆಮೋಸನೇ ಪ್ರಪ್ರಥಮ ಪ್ರವಾದಿಯೆಂದು ತಜ್ಞರು ಅಭಿಪ್ರಾಯಪಡುತ್ತಾರೆ. ಆಮೋಸನು ದಕ್ಷಿಣದ ಜುದೇಯ ಪ್ರಾಂತ್ಯದವನಾಗಿದ್ದರೂ ಅವನು ಪ್ರವಾದನೆಮಾಡಿದ್ದು ಉತ್ತರ ಪ್ರಾಂತ್ಯದ ಜನರಿಗೆ. ಕಾಲ ಸುಮಾರು ಕ್ರಿ. ಪೂ. 800. ದೇಶದಲ್ಲಿ ಸುಖಸಂಪತ್ತು ಹೇರಳವಾಗಿತ್ತು. ಧಾರ್ಮಿಕ ಆಚರಣೆಗಳು ಸಾಂಗೋಪಾಂಗವಾಗಿ ನಡೆಯುತ್ತಿದ್ದವು. ಹೊರನೋಟಕ್ಕೆ ವಾತಾವರಣ ನೆಮ್ಮದಿಯಾಗಿತ್ತು.
ಪರಿಸ್ಥಿತಿ ಹೀಗಿದ್ದರೂ ಆಮೋಸನ ದೃಷ್ಟಿಗೆ ಎಲ್ಲವೂ ಸರಿಬೀಳಲಿಲ್ಲ. ಸುಖಸಂಪತ್ತು ಕೇವಲ ಐಶ್ವರ್ಯವಂತರಿಗೆ ಮಾತ್ರ ಸೀಮಿತವಾಗಿತ್ತು. ಎಂದಿನಂತೆ ಬಡಬಗ್ಗರ ಶೋಷಣೆ, ದೀನದಲಿತರ ತುಳಿತ, ಧನವಂತರ ಜೀವನದ ಲಕ್ಷಣಗಳಾಗಿದ್ದವು. ಬಾಹ್ಯದಲ್ಲಿ ಧಾರ್ಮಿಕ ಆಚರಣೆಗಳು ನಿಯಮಾನುಸಾರ ನಡೆಯುತ್ತಿದ್ದರೂ ಜನರ ಅಂತರಂಗದಲ್ಲಿ ವಿಶ್ವಾಸವಿರಲಿಲ್ಲ. ಪರಿಶುದ್ಧತೆ ಇರಲಿಲ್ಲ. ಎಂದೇ ದೇವರ ಶಾಪಕ್ಕೆ ಅವರು ಗುರಿಯಾಗುವರೆಂದು ಪ್ರವಾದಿ ಆಮೋಸನು ಧೈರ್ಯದಿಂದ, ಹುಮ್ಮಸ್ಸಿನಿಂದ ಪ್ರವಾದನೆಮಾಡಿದ್ದಾನೆ. ‘ನ್ಯಾಯನೀತಿ ನದಿಯಂತೆ ಹರಿಯಲಿ. ಆಗ ಮಾತ್ರ ಸರ್ವೇಶ್ವರನ ಕರುಣೆಗೆ ಅಳಿದುಳಿದವರು ಪಾತ್ರರಾಗುವರು’ (5-15) ಎಂದು ಘೋಷಿಸಿದ್ದಾನೆ.
ಪರಿವಿಡಿ
1. ಇಸ್ರಯೇಲಿನ ನೆರೆರಾಷ್ಟ್ರಗಳಿಗೆ ನ್ಯಾಯತೀರ್ಪು 1:1—2:5
2. ಇಸ್ರಯೇಲಿಗೆ ನ್ಯಾಯತೀರ್ಪು 2:6—6:14
3. ಐದು ದರ್ಶನಗಳು 7:1—9:15