ಆಮೋಸ 6 - ಕನ್ನಡ ಸತ್ಯವೇದವು C.L. Bible (BSI)ಇಸ್ರಯೇಲಿನ ವಿನಾಶ 1 ಇಸ್ರಯೇಲಿನ ಜನರು ನಿಮ್ಮ ಸಹಾಯ ಕೋರಿ ನಿಮ್ಮನ್ನು ಹುಡುಕಿಕೊಂಡು ಬರುವಷ್ಟು ಪ್ರತಿಭಾವಂತರಾಗಿರುವವರೇ, ನಿಮಗೆ ಧಿಕ್ಕಾರ! 2 ಕಲ್ನೆ ಪಟ್ಟಣಕ್ಕೆ ಹೋಗಿ ನೋಡಿ. ಅಲ್ಲಿಂದ ಪ್ರಖ್ಯಾತ ಪಟ್ಟಣವಾದ ಹಮಾತಿಗೆ ನಡೆಯಿರಿ. ಹಮಾತಿನಿಂದ ಫಿಲಿಷ್ಟಿಯರ ಊರಾದ ಗತ್ ನಗರಕ್ಕೆ ಇಳಿದುಹೋಗಿರಿ. ಅವು ನಿಮ್ಮ ರಾಜ್ಯಗಳಿಗಿಂತ ದೊಡ್ಡವೋ? ಅವುಗಳ ಪ್ರಾಂತ್ಯ, ನಿಮ್ಮ ಪ್ರಾಂತ್ಯಕ್ಕಿಂತ ಹಿರಿದೋ? 3 ಆ ದುರ್ದಿನದಿಂದ ತಪ್ಪಿಸಿಕೊಳ್ಳಲು ಯತ್ನಿಸುವ ಮುಖಂಡರೇ, ಮತ್ತಷ್ಟು ಶೀಘ್ರವಾಗಿ ಹಿಂಸಾಕ್ರಮಣವನ್ನು ಬರಮಾಡಿಕೊಳ್ಳುತ್ತೀರಿ. 4 ದಂತದ ಮಂಚಗಳ ಮೇಲೆ ಮಲಗುವ ಜನರೇ, ನಿಮಗೆ ಧಿಕ್ಕಾರ! ಸುಖಾಸನಗಳಲ್ಲೂ ಸುಪ್ಪತ್ತಿಗೆಯ ಮೇಲೂ ಹಾಯಾಗಿ ಒರಗಿಕೊಂಡಿರುವವರೇ, ನಿಮಗೆ ಧಿಕ್ಕಾರ! ಮಂದೆಯ ಕುರಿಮರಿಗಳನ್ನು, ಕೊಟ್ಟಿಗೆಯ ಕರುಗಳನ್ನು ಕೊಂದು ತಿನ್ನುವವರೇ, ನಿಮಗೆ ಧಿಕ್ಕಾರ! 5 ವೀಣೆಯನ್ನು ನುಡಿಸುತ್ತಾ ಮನಸ್ಸು ಬಂದಂತೆ ಹಾಡುವವರೇ, ದಾವೀದನಂತೆ ಹೊಸ ವಾದ್ಯಸಂಗೀತಗಳನ್ನು ರಚಿಸುವವರೇ, ನಿಮಗೆ ಧಿಕ್ಕಾರ! 6 ಬೋಗುಣಿಬಟ್ಟಲುಗಳಲ್ಲಿ ದ್ರಾಕ್ಷಾರಸವನ್ನು ಕುಡಿಯುವವರೇ, ಅತ್ಯುತ್ತಮ ಸುಗಂಧತೈಲಗಳನ್ನು ಲೇಪಿಸಿಕೊಳ್ಳುವವರೇ, ನಿಮಗೆ ಧಿಕ್ಕಾರ! ಏಕೆಂದರೆ ನೀವು ಜೋಸೆಫನ ವಂಶದವರ ವಿನಾಶದ ಬಗ್ಗೆ ನಿಶ್ಚಿಂತರಾಗಿದ್ದೀರಿ. 7 ಆದುದರಿಂದ ಗಡೀಪಾರಾಗುವವರಲ್ಲಿ ನೀವೇ ಮೊದಲಿಗರಾಗುವಿರಿ. ಆಗ ನಿಮ್ಮ ಸುಖಾಸನಗಳು ಮತ್ತು ಆಮೋದ ಪ್ರಮೋದಗಳು ಗತಿಸಿಹೋಗುವುವು. 8 ಸೇನಾಧೀಶ್ವರ ದೇವರಾದ ಸರ್ವೇಶ್ವರಸ್ವಾಮಿ ಪ್ರಮಾಣಮಾಡಿ ಹೇಳಿದ್ದೇನೆಂದರೆ: “ಯಕೋಬ ವಂಶದವರ ಉದ್ಧಟತನವನ್ನು ದ್ವೇಷಿಸುತ್ತೇನೆ. ಅವರ ಮೋಜಿನ ಮಹಲುಗಳನ್ನು ತೃಣೀಕರಿಸುತ್ತೇನೆ. ಅವರ ರಾಜಧಾನಿಯನ್ನೂ ಅದರಲ್ಲಿರುವುದೆಲ್ಲವನ್ನೂ ಶತ್ರುವಶಕ್ಕೆ ಒಪ್ಪಿಸುತ್ತೇನೆ.” 9 ಮನೆಯೊಂದರಲ್ಲಿ ಹತ್ತುಮಂದಿ ಉಳಿದಿದ್ದರೂ ಅವರೆಲ್ಲರೂ ಸಾಯುವರು. 10 ಶವವನ್ನು ಸುಡಲು ಬಂದ ಸಂಬಂಧಿಕರು ಹೆಣವನ್ನು ಮನೆಯೊಳಗಿಂದ ತೆಗೆದುಕೊಂಡು ಹೋದಾಗ, “ನಿಮ್ಮಲ್ಲಿ ಯಾರಾದರೂ ಉಳಿದಿದ್ದಾರೋ?” ಎಂದು ಒಳಮನೆಯಲ್ಲಿ ಇರುವವನನ್ನು ಕೇಳಿದರೆ, ಅವನು “ಇಲ್ಲ” ಎನ್ನುವನು. ಆಗ ಆ ಸಂಬಂಧಿಕನು, “ಮೌನದಿಂದಿರು! ಸರ್ವೇಶ್ವರಸ್ವಾಮಿಯ ಹೆಸರನ್ನೂ ಎತ್ತಕೂಡದು” ಎಂದು ಎಚ್ಚರಿಸುವನು. 11 ಇಗೋ, ಸರ್ವೇಶ್ವರ ಆಜ್ಞಾಪಿಸಲು, ಕುಸಿದುಬೀಳುವುವು ಮಹಾಸೌಧಗಳು, ನುಚ್ಚುನೂರಾಗುವುವು ಚಿಕ್ಕಚಿಕ್ಕ ಮನೆಗಳು. 12 ಕಲ್ಲುಬಂಡೆಗಳ ಮೇಲೆ ಕುದುರೆಗಳು ಓಡಾಡುವುದುಂಟೋ? ಎತ್ತು ಹೋರಿಗಳಿಂದ ಕಡಲನ್ನು ಉಳುವುದುಂಟೋ? ನೀವೋ, ವಿಷವನ್ನಾಗಿಸಿದ್ದೀರಿ ನ್ಯಾಯನೀತಿಯನ್ನು, ಕಹಿಯಾಗಿಸಿದ್ದೀರಿ ಧರ್ಮದ ಸತ್ಫಲವನ್ನು. 13 ನೀವು ಹೆಚ್ಚಳಪಡುವುದು ‘ಲೊದೆಬಾರಿನ’ ಗೆಲುವಿನಲ್ಲಿ! ಸ್ವಬಲದಿಂದಲೇ ಕರ್ನಾಯಿಮನ್ನು ಜಯಿಸಿದ್ದೇವೆಂದು ಕೊಚ್ಚಿಕೊಳ್ಳುವುದರಲ್ಲಿ! 14 ಇಂತೆನ್ನುತ್ತಾರೆ ಸೇನಾಧೀಶ್ವರ ಸರ್ವೇಶ್ವರ: “ಎತ್ತಿಕಟ್ಟುವೆನು ನಿಮಗೆ ವಿರುದ್ಧವಾಗಿ ಜನಾಂಗವೊಂದನ್ನು; ಸದೆಬಡಿವುದದು ನಿಮ್ಮನ್ನು ಹಮಾತಿನ ದಾರಿಯಿಂದ ಅರಬಾ ತೊರೆಯ ತನಕ.” |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India