Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಆಮೋಸ 3 - ಕನ್ನಡ ಸತ್ಯವೇದವು C.L. Bible (BSI)

1 ಇಸ್ರಯೇಲಿನ ಜನರೇ, ಕಿವಿಗೊಡಿ. ಈಜಿಪ್ಟ್ ದೇಶದಿಂದ ನಿಮ್ಮನ್ನು ಬಿಡುಗಡೆಮಾಡಿ ಕರೆತಂದ ಸರ್ವೆಶ್ವರ ನಿಮ್ಮ ವಿರುದ್ಧವಾಗಿ ನುಡಿಯುವ ಮಾತುಗಳನ್ನು ಆಲಿಸಿರಿ:

2 “ಜಗದ ಜನಾಂಗಗಳಲ್ಲಿ ನನಗೆ ಆಪ್ತರಾದವರೆಂದರೆ ನೀವು. ಆದಕಾರಣ ನೀವು ಮಾಡಿರುವ ಎಲ್ಲಾ ಪಾಪಗಳಿಗೆ ತಕ್ಕ ಪ್ರಾಯಶ್ಚಿತ್ತವನ್ನು ಸವಿಯುವಂತೆ ಮಾಡುವೆನು.”


ಪ್ರವಾದಿಯ ಕರ್ತವ್ಯ

3 ಗೊತ್ತುಗುರಿಯಿಲ್ಲದೆ ಯಾರಾದರಿಬ್ಬರು ಜೊತೆಯಾಗಿ ಪ್ರಯಾಣಮಾಡುವುದುಂಟೆ?

4 ಬೇಟೆ ಕಂಡಾಗಲ್ಲದೆ ಸಿಂಹವು ಕಾಡಿನಲ್ಲಿ ಗರ್ಜಿಸುವುದುಂಟೆ? ಏನನ್ನೂ ಹಿಡಿಯದೆ ಯುವಸಿಂಹವು ಗುಹೆಯಲ್ಲೆ ಗುರುಗುಟ್ಟುವುದುಂಟೆ?

5 ಕಾಳಿಲ್ಲದೆ ಪಕ್ಷಿ ಬಲೆಗೆ ಬೀಳುವುದುಂಟೆ? ಏನೂ ಸಿಕ್ಕಿಕೊಳ್ಳದೆ ಬೋನು ಮೇಲಕ್ಕೆ ಏರುವುದುಂಟೆ?

6 ರಣಕಹಳೆ ಮೊಳಗಲು ಜನರು ಬೆದರದೆ ಇರುವುದುಂಟೆ? ಸರ್ವೇಶ್ವರನಿಂದಲ್ಲದೆ ಪಟ್ಟಣಕ್ಕೆ ಕೇಡು ತಟ್ಟುವುದುಂಟೆ?

7 ತನ್ನ ಪರಿಚಾರಕರಾದ ಪ್ರವಾದಿಗಳಿಗೆ ತನ್ನ ಯೋಜನೆಯನ್ನು ತಿಳಿಸದೆ ಸ್ವಾಮಿ ಸರ್ವೇಶ್ವರ ಏನೂ ಮಾಡುವುದಿಲ್ಲ.

8 ಸಿಂಹದ ಗರ್ಜನೆಯನ್ನು ಕೇಳಿ ಹೆದರದಿರುವವರು ಯಾರು? ಸ್ವಾಮಿ ಸರ್ವೇಶ್ವರನ ನುಡಿಯನ್ನು ಕೇಳಿ ಪ್ರವಾದನೆಮಾಡದಿರುವವರು ಯಾರು?”


ಸಮಾರ್ಯದ ವಿನಾಶ

9 ಅಷ್ಡೋದಿನ ಅರಮನೆಗಳಲ್ಲೂ ಈಜಿಪ್ಟಿನ ಸೌಧಗಳಲ್ಲೂ ಹೀಗೆಂದು ಪ್ರಕಟಿಸಿರಿ; “ಸಮಾರ್ಯದ ಬೆಟ್ಟಗುಡ್ಡಗಳಿಗೆ ಕೂಡಿಬನ್ನಿ. ಪಟ್ಟಣದಲ್ಲಿ ಎಷ್ಟೊಂದು ಗಲಭೆಗೊಂದಲ, ಎಷ್ಟೊಂದು ಹಿಂಸಾಚಾರ ನಡೆಯುತ್ತಿದೆ, ನೋಡಿ.

10 “ಹಿಂಸಾಚಾರದಿಂದ ಹಾಗು ಸುಲಿಗೆಯಿಂದ ಗಳಿಸಿದ್ದನ್ನು ಜನರು ತಮ್ಮ ಮಳಿಗೆಗಳಲ್ಲಿ ತುಂಬಿಸಿಕೊಂಡಿದ್ದಾರೆ. ಅಂಥ ಜನರಿಗೆ ನ್ಯಾಯನೀತಿ ತಿಳಿಯದು,” ಎಂದು ಸರ್ವೇಶ್ವರ ಹೇಳುತ್ತಾರೆ.

11 ಇಂತಿರಲು ಸ್ವಾಮಿ ಸರ್ವೇಶ್ವರ ಹೇಳುವುದೇನೆಂದರೆ: “ಶತ್ರುಗಳು ನಿಮ್ಮ ನಾಡಿಗೆ ಮುತ್ತಿಗೆಹಾಕುವರು. ನಿಮ್ಮ ಕೋಟೆಕೊತ್ತಲಗಳನ್ನು ನೆಲಸಮಮಾಡುವರು. ನಿಮ್ಮ ಸೌಧಗಳನ್ನು ಸೂರೆಮಾಡುವರು.”

12 ಸೇನಾಧೀಶ್ವರ ಸರ್ವೇಶ್ವರ ಇಂತೆನ್ನುತ್ತಾರೆ: “ಸಿಂಹದ ಬಾಯಿಗೆ ಸಿಕ್ಕಿದ ಕುರಿಯ ಅಂಗಗಳಲ್ಲಿ ಕಿವಿಕಾಲು ಮಾತ್ರ ಕುರುಬನಿಗೆ ದಕ್ಕೀತು. ಅಂತೆಯೇ ಸಮಾರ್ಯದ ಸುಖಾಸನಗಳಲ್ಲೂ ಸುಪ್ಪತ್ತಿಗೆ ಮೇಲೂ ಹಾಯಾಗಿ ಒರಗಿಕೊಂಡಿರುವ ಇಸ್ರಯೇಲರಲ್ಲಿ ಕೆಲವೇ ಕೆಲವರು ಮಾತ್ರ ಉಳಿಯುವರು.

13 ಈಗ ಕೇಳಿ, ಯಕೋಬನ ವಂಶದವರಿಗೆ ಎಚ್ಚರಿಕೆ ನೀಡಿ:

14 ಇಸ್ರಯೇಲರ ಪಾಪಕೃತ್ಯಗಳಿಗಾಗಿ ಅವರನ್ನು ದಂಡಿಸುವೆನು. ಬೇತೇಲಿನ ಯಜ್ಞವೇದಿಗಳನ್ನು ಚೂರುಚೂರು ಮಾಡುವೆನು. ಆ ಯಜ್ಞವೇದಿಯ ಮೂಲೆಕೊಂಬುಗಳನ್ನು ಕತ್ತರಿಸಿ ಬೀದಿಪಾಲಾಗಿಸುವೆನು.

15 ಚಳಿಗಾಲ, ಬೇಸಿಗೆಕಾಲಗಳ ವಿಹಾರಗೃಹಗಳನ್ನು ವಿನಾಶಮಾಡುವೆನು. ದಂತನಿರ್ಮಿತ ಮಂದಿರಗಳು ಧ್ವಂಸವಾಗುವುವು. ಮಹಾಸೌಧಗಳು ನೆಲಸಮವಾಗುವುವು. ಸರ್ವೇಶ್ವರಸ್ವಾಮಿಯ ನುಡಿಯಿದು.”

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು