ಆಮೋಸ 2 - ಕನ್ನಡ ಸತ್ಯವೇದವು C.L. Bible (BSI)ಮೋವಾಬ್ 1 ಸರ್ವೇಶ್ವರ ಇಂತೆನ್ನುತ್ತಾರೆ: “ಮೋವಾಬಿನ ಜನರು ಪದೇಪದೇ ಮಾಡಿದ ಪಾಪಗಳಿಗಾಗಿ ಅವರಿಗೆ ಆಗಬೇಕಾದ ದಂಡನೆಯನ್ನು ನಾನು ರದ್ದುಗೊಳಿಸುವುದಿಲ್ಲ. ಅವರು ಎದೋಮಿನ ಅರಸನ ಎಲುಬುಗಳನ್ನು ಸುಟ್ಟು ಸುಣ್ಣಮಾಡಿದ್ದಾರೆ. 2 ಆದಕಾರಣ ಮೋವಾಬಿನ ಮೇಲೆ ಬೆಂಕಿಯನ್ನು ಸುರಿಸುವೆನು. ಅದು ಕೆರಿಯೋತಿನ ಕೋಟೆಕೊತ್ತಲಗಳನ್ನು ಕಬಳಿಸಿಬಿಡುವುದು. ಸೈನಿಕರ ಆರ್ಭಟ, ರಣಕಹಳೆಗಳ ಗರ್ಜನೆ, ಯುದ್ಧದ ಕೋಲಾಹಲ - ಇವುಗಳ ಮಧ್ಯೆ ಮೋವಾಬಿನ ಜನರು ಮಡಿಯುವರು. 3 ನಾನು ಅವರ ಅಧಿಪತಿಯನ್ನು ಕೊಂದು, ರಾಜ್ಯಾಧಿಕಾರಿಗಳನ್ನು ಸಂಹರಿಸುವೆನು.” ಇದು ಸರ್ವೇಶ್ವರ ಸ್ವಾಮಿಯ ನುಡಿ. ಜುದೇಯ 4 ಸರ್ವೇಶ್ವರ ಇಂತೆನ್ನುತ್ತಾರೆ: “ಜುದೇಯದ ಜನರು ಪದೇಪದೇ ಮಾಡಿದ ಪಾಪಗಳಿಗಾಗಿ ಅವರಿಗೆ ಆಗಬೇಕಾದ ದಂಡನೆಯನ್ನು ನಾನು ರದ್ದುಗೊಳಿಸುವುದಿಲ್ಲ. ಏಕೆಂದರೆ ಅವರು ನನ್ನ ಧರ್ಮಶಾಸ್ತ್ರವನ್ನು ತೃಣೀಕರಿಸಿದ್ದಾರೆ. ನನ್ನ ವಿಧಿನಿಯಮಗಳನ್ನು ಮೀರಿದ್ದಾರೆ. ಅವರ ಪೂರ್ವಜರು ಆರಾಧಿಸಿದ ಸುಳ್ಳುದೇವತೆಗಳನ್ನು ಪೂಜಿಸುತ್ತಾ ದಾರಿತಪ್ಪಿದ್ದಾರೆ. 5 ಆದಕಾರಣ ನಾನು ಜುದೇಯದ ಮೇಲೆ ಬೆಂಕಿಯನ್ನು ಸುರಿಸುವೆನು. ಅದು ಜೆರುಸಲೇಮಿನ ಕೋಟೆಕೊತ್ತಲಗಳನ್ನು ಕಬಳಿಸಿಬಿಡುವುದು.” ಇಸ್ರಯೇಲ್ 6 ಸರ್ವೇಶ್ವರ ಇಂತೆನ್ನುತ್ತಾರೆ: “ಇಸ್ರಯೇಲಿನ ಜನರು ಪದೇಪದೇ ಮಾಡಿದ ಪಾಪಗಳಿಗಾಗಿ ಅವರಿಗೆ ಆಗಬೇಕಾದ ದಂಡನೆಯನ್ನು ನಾನು ರದ್ದುಗೊಳಿಸುವುದಿಲ್ಲ. ಅವರು ಬೆಳ್ಳಿಬಂಗಾರಕ್ಕಾಗಿ ಸಜ್ಜನರನ್ನು ಮಾರಿಬಿಡುತ್ತಾರೆ. ಒಂದು ಜೊತೆ ಜೋಡುಗಳ ಸಾಲವನ್ನು ಸಹ ತೀರಿಸಲಾಗದ ಬಡಬಗ್ಗರನ್ನೂ ವಿಕ್ರಯಿಸುತ್ತಾರೆ. 7 ದಿಕ್ಕಿಲ್ಲದವರ ತಲೆಗಳನ್ನು ಬೀದಿಯ ಧೂಳಿನಂತೆ ತುಳಿದುಬಿಡುತ್ತಾರೆ. ದೀನದಲಿತರಿಗೆ ನ್ಯಾಯ ದೊರಕದಂತೆ ಮಾಡುತ್ತಾರೆ. ತಂದೆಯೂ ಮಗನೂ ಒಬ್ಬ ಮಹಿಳೆಯನ್ನು ಇಟ್ಟುಕೊಂಡು ನನ್ನ ಪವಿತ್ರನಾಮಕ್ಕೆ ಅಪಕೀರ್ತಿ ತರುತ್ತಾರೆ. 8 ಪ್ರತಿಯೊಂದು ಪ್ರಾರ್ಥನಾಲಯದಲ್ಲಿಯೂ ಮಲಗುತ್ತಾರೆ. ಬಡವರಿಂದ ಅಡವಾಗಿ ಇಟ್ಟುಕೊಂಡ ಬಟ್ಟೆಗಳ ಮೇಲೆಯೇ ಬಿದ್ದಿರುತ್ತಾರೆ. ವಿಧಿ ಇಲ್ಲದೆ ದಂಡತೆರಬೇಕಾದವರಿಂದ ಹೆಂಡವನ್ನು ತಂದು ದೇವರ ಮಂದಿರದಲ್ಲೇ ಕುಡಿಯುತ್ತಾರೆ. 9 “ಆದರೂ ನನ್ನ ಜನರೇ, ನಿಮಗೆ ಎದುರಾಗಿ ನಿಂತ ಅಮೋರ್ಯದವರನ್ನು ಧ್ವಂಸಮಾಡಿದೆನು. ದೇವದಾರು ಮರದಂತೆ ಎತ್ತರವಾಗಿ, ಅಲ್ಲೋನ್ ಮರದಂತೆ ಬಲಿಷ್ಠರಾಗಿ ಇದ್ದ ನಿಮ್ಮ ಶತ್ರು ಅಮೋರ್ಯದವರನ್ನು ನಾಶಪಡಿಸಿದೆನು. ಮರದ ಮುಡಿಯಿಂದ ಫಲವನ್ನೂ ಅಡಿಯಿಂದ ಬೇರನ್ನೂ ಕಿತ್ತುಹಾಕುವಂತೆ ಅವರನ್ನು ನಿರ್ಮೂಲಮಾಡುವೆನು. 10 ಈಜಿಪ್ಟಿನಿಂದ ನಿಮ್ಮನ್ನು ಹೊರತಂದವನು ನಾನೇ. ನಲವತ್ತು ವರ್ಷಗಳ ಕಾಲ ಅರಣ್ಯದ ಮಾರ್ಗವಾಗಿ ನಿಮ್ಮನ್ನು ನಡೆಸಿ ಕರೆತಂದು, ಅಮೋರ್ಯದವರ ನಾಡನ್ನು ನಿಮಗೆ ದೊರಕಿಸಿಕೊಟ್ಟವನು ನಾನೇ. 11 ನಿಮ್ಮ ಪುತ್ರರಲ್ಲಿ ಕೆಲವರನ್ನು ಪ್ರವಾದಿಗಳನ್ನಾಗಿ, ನಿಮ್ಮ ಯುವಜನರಲ್ಲಿ ಕೆಲವರನ್ನು ನಾಜೀರರನ್ನಾಗಿ ಸಿದ್ಧಪಡಿಸಿದವನು ನಾನೇ. ಇಸ್ರಯೇಲಿನ ಜನರೇ, ಇದು ನಿಜವಲ್ಲವೇ? ನೀವೇ ಹೇಳಿ. 12 “ನೀವಾದರೋ, ನಾಜೀರರು ವ್ರತಮುರಿದು ಮದ್ಯಪಾನ ಸೇವಿಸುವಂತೆ ಮಾಡಿದಿರಿ. ಪ್ರವಾದಿಗಳು ಪ್ರವಾದನೆ ಹೇಳದಂತೆ ಆಜ್ಞೆಮಾಡಿದಿರಿ. 13 ಆದ್ದರಿಂದ ಧಾನ್ಯ ತುಂಬಿದ ಬಂಡೆ ನಸುಕುವಂತೆ ನಿಮ್ಮನ್ನು ಇದ್ದಲ್ಲಿಯೇ ನಸುಕಿಬಿಡುವೆನು. 14 ನಿಮ್ಮಲ್ಲಿ ದೌಡೋಡುವವನು ಕೂಡ ತಲೆತಪ್ಪಿಸಿಕೊಳ್ಳಲಾರನು. ಬಲಿಷ್ಠನೂ ಬಲಹೀನನಾಗುವನು. ಪರಾಕ್ರಮಿಯೂ ಪ್ರಾಣ ಉಳಿಸಿಕೊಳ್ಳಲಾರನು. 15 ಬಿಲ್ಲು ಹಿಡಿದವನೂ ನಿಲ್ಲಲಾರನು. ಓಟಗಾರನೂ ಸಿಕ್ಕಿಬೀಳುವನು. ರಾಹುತನು ರಕ್ಷಣೆ ಪಡೆಯಲಾರನು. 16 ಪ್ರಬಲವಾಗಿದ್ದವರಲ್ಲಿ ಧೀರನಾದವನು ಸಹ ನಗ್ನನಾಗಿ ಪಲಾಯನ ಮಾಡುವನು.” ಇದು ಸರ್ವೇಶ್ವರಸ್ವಾಮಿಯ ನುಡಿ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India